More

    ‘ಗರ್ಲ್​ ನಂ. 166’ ಗ್ರೇಟ್ ಎಸ್ಕೇಪ್​: 7ನೇ ವಯಸ್ಸಲ್ಲಿ ನಾಪತ್ತೆ, ಹದಿನಾರನೇ ವಯಸ್ಸಲ್ಲಿ ಮನೆಗೆ ಬಂದ್ಲು!

    ಮುಂಬೈ: ಏಳು ವರ್ಷ ಪ್ರಾಯದ ಬಾಲಕಿಯೊಬ್ಬಳು ಮಕ್ಕಳಿಲ್ಲದ ದಂಪತಿಯ ಕೈಗೆ ಸಿಕ್ಕಿಹಾಕಿಕೊಂಡು 9 ವರ್ಷಗಳ ಕಾಲ ನರಕಯಾತನೆ ಅನುಭವಿಸಿ, 16ನೇ ವಯಸ್ಸಲ್ಲಿ ಮನೆಗೆ ಮರಳಿದ ವಿಚಿತ್ರ ಪ್ರಕರಣವಿದು. 9 ವರ್ಷಗಳ ಕಾಲ ‘ಗರ್ಲ್ ನಂ. 166’ ಆಗಿದ್ದ ಈಕೆ ಕೊನೆಗೆ ತನ್ನ ಜಾಣ್ಮೆಯಿಂದ ಮನೆಯವರನ್ನು ಸೇರಿಕೊಂಡಿದ್ದಾಳೆ.

    ಪೂಜಾ ಗಾವ್ಡ್​ ಎಂಬ ಈಕೆ ಏಳನೇ ವಯಸ್ಸಲ್ಲಿ, ಅಂದರೆ 2013ರ ಜ. 22ರಂದು ಸಹೋದರ ರೋಹಿತ್ ಜತೆ ಮುಂಬೈನ ಜುಹು ಗಲ್ಲಿ ಪ್ರದೇಶದ ಶಾಲೆಗೆ ತೆರಳಿದ್ದಳು. ಅಜ್ಜ-ಅಜ್ಜಿ ಕೊಟ್ಟಿದ್ದ ಪಾಕೆಟ್ ಮನಿ ವಿಚಾರವಾಗಿ ಶಾಲೆಗೆ ಪ್ರವೇಶಿಸುವ ಮುನ್ನ ಈಕೆ ಮತ್ತು ಸಹೋದರನ ನಡುವೆ ಜಗಳವಾಗಿತ್ತು. ಆ ಬಳಿಕ ಆತ ಸಿಟ್ಟಿನಿಂದ ಶಾಲೆಯೊಳಕ್ಕೆ ತೆರಳಿದರೆ ಈಕೆ ಹೊರಗೆ ಗೇಟ್ ಬಳಿಯೇ ಉಳಿದಿದ್ದಳು. ಆ ಸಂದರ್ಭದಲ್ಲಿ ಈಕೆಯನ್ನು ಗಮನಿಸಿದ ಮಕ್ಕಳಿಲ್ಲದ ದಂಪತಿ (ಹ್ಯಾರಿ ಡಿಸೋಜಾ-ಸೋನಿ ಡಿಸೋಜಾ) ಐಸ್ ಕ್ರೀಮ್​ ಕೊಡಿಸುವ ಆಮಿಷವೊಡ್ಡಿ ಇವಳನ್ನು ಕರೆದುಕೊಂಡು ಹೋಗಿದ್ದರು.

    ಇತ್ತ ಮಗಳು ಮನೆಗೆ ಬರದಿದ್ದ ಹಿನ್ನೆಲೆಯಲ್ಲಿ ಪೂಜಾ ಪಾಲಕರು ಡಿಎನ್​ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆ ಪ್ರದೇಶದಲ್ಲಿ ಕಾಣೆಯಾಗಿದ್ದ 166ನೇ ಹುಡುಗಿ ಇವಳಾಗಿದ್ದು, ಈಕೆಯ ಪತ್ತೆ ಕಾರ್ಯಾಚರಣೆ ‘ಗರ್ಲ್​ ನಂ. 166’ ಎಂದೇ ಹೆಸರಾಗಿತ್ತು. ಅಲ್ಲಿನ ಪೊಲೀಸರು​ ಈ ಹಿಂದೆ ಕಾಣೆಯಾಗಿದ್ದ 165 ಬಾಲಕಿಯರಲ್ಲಿ ಅಷ್ಟೂ ಮಂದಿಯನ್ನು ಪತ್ತೆ ಮಾಡಿದ್ದರೂ ಪೂಜಾ ಪತ್ತೆ ಆಗಿರಲಿಲ್ಲ.

    ಮಕ್ಕಳಿಲ್ಲ ಎಂಬ ಕಾರಣಕ್ಕೆ ಪೂಜಾಳನ್ನು ಬಲವಂತವಾಗಿ ಕರೆದೊಯ್ದು ತಮ್ಮೊಂದಿಗಿರಿಸಿಕೊಂಡಿದ್ದ ಹ್ಯಾರಿ-ಸೋನಿ ದಂಪತಿ, ಮೊದಲು ಗೋವಾಕ್ಕೆ ತೆರಳಿದ್ದು, ನಂತರ ಕೆಲಕಾಲ ಕರ್ನಾಟಕದಲ್ಲಿ ವಸತಿ ಶಾಲೆಯೊಂದಕ್ಕೆ ಹಾಕಿದ್ದರು. ಆಮೇಲೆ ಶಾಲೆಯಿಂದ ಬಿಡಿಸಿ ಆಕೆಯನ್ನು ಮರಳಿ ಮುಂಬೈಗೆ ಕರೆದೊಯ್ದಿದ್ದರು. ಆದರೆ ಅವರಿಗೆ ಆ ಬಳಿಕ ಮಕ್ಕಳಾಗಿದ್ದು, ಅದಾದ ಮೇಲಂತೂ ಪೂಜಾಗೆ ಇನ್ನೂ ನರಕ ಯಾತನೆ ಕೊಡಲಾರಂಭಿಸಿದರು. ಹೊಡೆದು ಬಡಿದು ದುಡಿಸಿಕೊಳ್ಳುತ್ತಿದ್ದರು. ಏನಾದರೂ ವಿಷಯ ಬಾಯ್ಬಿಟ್ಟರೆ ಮತ್ತೆ ಹೊಡೆಯವುದಾಗಿ ಹೆದರಿಸುತ್ತಿದ್ದರು ಎಂಬುದಾಗಿ ಪೂಜಾ ಹೇಳಿಕೊಂಡಿದ್ದಾಳೆ. ಮುಂಬೈನಲ್ಲೇ ಇದ್ದರೂ ಪೂಜಾಗೆ ತನ್ನ ಮನೆಯವರನ್ನು ಸೇರಲು ಆಗಿರಲಿಲ್ಲ, ಪೊಲೀಸರಿಗೂ ಈಕೆಯನ್ನು ಪತ್ತೆ ಹಚ್ಚಲು ಆಗಿರಲಿಲ್ಲ.

    'ಗರ್ಲ್​ ನಂ. 166' ಗ್ರೇಟ್ ಎಸ್ಕೇಪ್​: 7ನೇ ವಯಸ್ಸಲ್ಲಿ ನಾಪತ್ತೆ, ಹದಿನಾರನೇ ವಯಸ್ಸಲ್ಲಿ ಮನೆಗೆ ಬಂದ್ಲು!

    ಒಂದು ರಾತ್ರಿ ಎಲ್ಲರೂ ಮಲಗಿದ್ದಾಗ ಈಕೆಗೆ ಹ್ಯಾರಿ-ಸೋನಿ ದಂಪತಿಯ ಮೊಬೈಲ್​ ಫೋನ್ ಸಿಕ್ಕಿತ್ತು. ಆಗ ಮೊಬೈಲ್​ಫೋನ್ ಮೂಲಕ ತನ್ನ ಹೆಸರನ್ನು ಹುಡುಕಿದಾಗ ಈಕೆ ಅಪಹರಣಕ್ಕೀಡಾಗಿದ್ದಾಳೆ ಎಂಬ ಸುದ್ದಿಗೆ ಕೊಂಡೊಯ್ದಿತ್ತು. ಅಲ್ಲದೆ, ಅಲ್ಲಿ ಸಂಪರ್ಕಕ್ಕಾಗಿ ನಂಬರ್ ನೀಡಲಾಗಿತ್ತು. ಆ ನಂಬರ್ ನೋಟ್​ ಮಾಡಿಟ್ಟುಕೊಂಡ ಈಕೆ ಅದೇ ಮನೆಯಲ್ಲಿನ ಕೆಲಸಕ್ಕಿದ್ದ ಪ್ರಮೀಳಾ ದೇವೇಂದ್ರ ಎಂಬಾಕೆಯ ಸಹಾಯದಿಂದ ಕರೆ ಮಾಡಿದ್ದಳು. ಆದರೆ ಅಲ್ಲಿದ್ದ ಮೂರು ನಂಬರ್​​ಗಳಿಗೆ ಕನೆಕ್ಟ್ ಆಗಿರಲಿಲ್ಲ. ಕೊನೆಗೆ ಇನ್ನೊಂದು ನಂಬರ್​​ಗೆ ಕರೆ ಮಾಡಿದಾಗ ಅದು ರಫೀಕ್ ಎಂಬವರಿಗೆ ಕನೆಕ್ಟ್ ಆಗಿತ್ತು. ಅವರು ಪೂಜಾ ತಾಯಿಯ ನೆರೆಮನೆಯವರಾಗಿದ್ದರು. ನಂತರ ತಾಯಿಯೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿ ಎಲ್ಲ ವಿಷಯ ತಿಳಿಸಿದ ಪೂಜಾ, ಇದೇ ಆ. 4ರಂದು ಮನೆ ಸೇರಿಕೊಂಡಿದ್ದಾಳೆ. ಹ್ಯಾರಿ-ಸೋನಿ ದಂಪತಿ ವಿರುದ್ಧ ಅಪಹರಣ, ಬೆದರಿಕೆ, ದೈಹಿಕ ಹಿಂಸೆ ಸೇರಿ ಬಾಲಕಾರ್ಮಿಕ ಕಾನೂನಿನಡಿ ಕೇಸ್​ ದಾಖಲಾಗಿದ್ದು, ಅವರನ್ನು ಬಂಧಿಸಲಾಗಿದೆ.

    ದುರ್ಗಾ ಪೂಜೆಗೆ ಸರ್ಕಾರದಿಂದ 60 ಸಾವಿರ ರೂ. ಧನಸಹಾಯ: ಸಿಎಂ ಮಮತಾ ಬ್ಯಾನರ್ಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts