ಮೈಸೂರು: ಅತಿಯಾದ ಬೆಳೆ ಮತ್ತು ಬೆಲೆ ಕುಸಿತ ಹೆಚ್ಚಾಗಿ ಟೊಮ್ಯಾಟೊ ಮೇಲೆಯೇ ಪರಿಣಾಮ ಬೀರುತ್ತವೆ. ಬೆಳೆ ಬಂದರೆ ಬೆಲೆಯಿಲ್ಲ. ಬೆಲೆ ಇದ್ದರೆ ಬೆಳೆ ಇಲ್ಲ. ಇದು ರೈತರ ಸಂಕಷ್ಟವೂ ಹೌದು. ಹೀಗಾಗಿ ಈ ಸಮಸ್ಯೆಗಳಿಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್ಟಿಆರ್ಐ) ಸರಳ ಪರಿಹಾರವೊಂದನ್ನು ಪರಿಚಯಿಸಿದ್ದು, ಟೊಮ್ಯಾಟೊವನ್ನು ಕೈಗೆಟುಕುವ ದರದಲ್ಲಿ ಸಂರಕ್ಷಿಸಿ ಇಡಬಹುದಾಗಿದೆ. ಗ್ರಾಹಕರು ಕೂಡ ಇದನ್ನು ಅನುಸರಿಸಬಹುದಾಗಿದೆ.
ಪ್ರತಿಶತ 4 ರಷ್ಟು ಉಪ್ಪು ತುಂಬಿದ ಪಾಲಿಥಿನ್ ಕವರ್ನಲ್ಲಿ ಟೊಮ್ಯಾಟೊವನ್ನು ಸಂರಕ್ಷಿಸಿ ಇಡುವ ವಿಧಾನವನ್ನು ಸಿಎಫ್ಟಿಆರ್ಐ ಸೂಚಿಸಿದೆ. ಸಣ್ಣ ಪ್ರಮಾಣದ ರೈತರು ಕವರ್ಗಳಲ್ಲಿ 1 ಕೆ.ಜಿ. ಟೊಮ್ಯಾಟೊವನ್ನು ತುಂಬಿ ಕೊಠಡಿಯ ತಾಪಮಾನದಲ್ಲಿ ಸುಮಾರು 3 ರಿಂದ 4 ತಿಂಗಳವರೆಗೆ ಇಡಬಹುದು. ಉಪ್ಪಿನಿರಿನಲ್ಲಿ ಸೂಕ್ಷ್ಮಾಣು ಜೀವಿಗಳು ಬೆಳೆಯದೇ ಇರುವುದರಿಂದ ಟೊಮ್ಯಾಟೊಗಳು ಹಾಳಾಗುವುದಿಲ್ಲ ಎಂದು ಸಿಎಫ್ಟಿಆರ್ಐ ಹೇಳಿದೆ.
ಇದನ್ನೂ ಓದಿ: ಜಾಮೀನು ಕೇಳೋದು ಬಿಟ್ಟು, ತನ್ನ ವಿರುದ್ಧದ ಕೇಸ್ ಅನ್ನೇ ರದ್ದು ಮಾಡಿ ಎಂದ ಆದಿತ್ಯ ಆಳ್ವ
ಈ ರೀತಿ ಸಂರಕ್ಷಿಸಿ ಇಡಲಾದ ಟೊಮ್ಯಾಟೊವನ್ನು ಬೆಲೆ ಹೆಚ್ಚಾದಾಗ ಮಾರಾಟ ಮಾಡಬಹುದು. ಒಂದು ಕೆ.ಜಿ. ಟೊಮ್ಯಾಟೊವನ್ನು ಸಂರಕ್ಷಿಸಲು 3 ರೂ. ಮಾತ್ರ ಖರ್ಚಾಗಲಿದೆ. ಟೊಮ್ಯಾಟೊವನ್ನು ನಿಖರವಾದ ಪಾಲಿಥಿನಿ ಕವರ್ ಮತ್ತು ಸಿಎಫ್ಟಿಆರ್ಐ ಶಿಫಾರಸು ಮಾಡಿದ ತಾಪಮಾನದಲ್ಲಿ ಇಟ್ಟರೆ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಸಿಎಫ್ಟಿಆರ್ಐ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕಾಗಿ ಯಾವುದೇ ಶೈತ್ಯೀಕರಣದ ಅವಶ್ಯಕತೆಯು ಇಲ್ಲ ಎಂದಿದ್ದಾರೆ.
ಇನ್ನು ಟೊಮ್ಯಾಟೊ ಬೆಲೆ ಏರಿದಾಗ ಪರದಾಡುವ ಗ್ರಾಹಕರು ಇದೇ ವಿಧಾನವನ್ನು ಅನುಸರಿಸುವ ಮೂಲಕ ತಮ್ಮ ಜೇಬಿಗೆ ಹೊರೆಯಾಗದಂತೆ ನಿರ್ವಹಣೆ ಮಾಡಬಹುದಾಗಿದೆ.
ಇನ್ನು ಸಿಎಫ್ಟಿಆರ್ಐ ಇನ್ನಿತರ ತರಕಾರಿಗಳ ಮೇಲೂ ತನ್ನ ತಂತ್ರಜ್ಞಾನವನ್ನು ಪ್ರಯೋಗಿಸುತ್ತಿದ್ದು, ಇದನ್ನು ಉಚಿತವಾಗಿ ರೈತರೊಂದಿಗೆ ಹಂಚಿಕೊಳ್ಳಲು ತಯಾರಾಗಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ವಾಣಿಜ್ಯ ಆಧಾರದ ಮೇಲೆ ಟೊಮ್ಯಾಟೊ ಖರೀದಿಸಲು ಕರ್ನಾಟಕ ಸರ್ಕಾರ ಸಿಎಫ್ಟಿಆರ್ಐ ಜತೆ ಒಪ್ಪಂದ ಮಾಡಿಕೊಂಡಿದೆ. (ಏಜೆನ್ಸೀಸ್)