ನವದೆಹಲಿ: ಮಹಾಮಾರಿ ಕರೊನಾ ವಕ್ಕರಿಸದೇ ಇದ್ದಿದ್ದರೆ ಈ ಸಮಯದಲ್ಲಿ ರಾಷ್ಟ್ರದಲ್ಲಿ ಕ್ರೀಡಾಭಿಮಾನಿಗಳ ಐಪಿಎಲ್ ಸಂಭ್ರಮ ಮೊಳಗಿರುತ್ತಿತ್ತು. ಆದರೆ, ಕರೊನಾದಿಂದ ಈ ಬಾರಿಯ ಐಪಿಎಲ್ ನಡೆಯುವುದೇ ಅನುಮಾನವಾಗಿದೆ. ಇದರ ನಡುವೆ ಹಿಂದಿನ ಘಟನೆಗಳನ್ನು ಮೆಲಕು ಹಾಕಿದಾಗ ಐಪಿಎಲ್ ಇತಿಹಾಸದಲ್ಲಿ ಈ ದಿನ ತುಂಬಾ ವಿಶೇವಾಗಿದೆ. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಹೆಮ್ಮೆ ಪಡುವ ದಿನವಿದು.
ವಿಶ್ವಾದ್ಯಾಂತ ಅಸಂಖ್ಯಾತ ಕ್ರೀಡಾಭಿಮಾನಿಗಳನ್ನು ಹೊಂದಿರುವ ವೆಸ್ಟ್ಇಂಡೀಸ್ ದೈತ್ಯ ದಾಂಡಿಗ ಕ್ರಿಸ್ ಗೇಲ್ ಆರ್ಸಿಬಿ ತಂಡದಲ್ಲಿದ್ದಾಗ 2013ರ ಏಪ್ರಿಲ್ 23ರಂದು ಭರ್ಜರಿ ದಾಖಲೆಯೊಂದನ್ನು ಬರೆದಿದ್ದರು. ಅದೇನೆಂದರೆ ಪುಣೆ ವಾರಿಯರ್ಸ್ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೇವಲ 30 ಎಸೆತದಲ್ಲಿ ಶತಕ ಸಿಡಿಸಿದ್ದಲ್ಲದೇ 66 ಎಸೆತದಲ್ಲಿ ಅಜೇಯ 175 ರನ್ ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾವ್ರವಹಿಸಿದ್ದರು. ಇಂದಿಗೂ ಇದು ಐಪಿಎಲ್ ಇತಿಹಾಸದಲ್ಲಿ ವೈಯಕ್ತಿಕ ಗರಿಷ್ಠ ರನ್ ಆಗಿಯೇ ಉಳಿದಿದೆ. ಅಲ್ಲದೇ ಕ್ರಿಕೆಟ್ ಜಗತ್ತಿನ ವೇಗದ ಶತಕವೂ ಆಗಿದೆ.
ಈ ಪಂದ್ಯದಲ್ಲಿ ಗೇಲ್ 7 ಡಾಟ್ ಬಾಲ್, 4 ಸಿಂಗಲ್, 8 ಬೌಂಡರಿ ಹಾಗೂ 11 ಸಿಕ್ಸರ್ ನೆರವಿನೊಂದಿಗೆ 30 ಎಸೆತಗಳಲ್ಲಿ ವೇಗವಾಗಿ ಶತಕ ದಾಖಲಿಸಿದರು. ಒಟ್ಟು 66 ಎಸೆತದಲ್ಲಿ 17 ಸಿಕ್ಸರ್ ಹಾಗೂ 13 ಬೌಂಡರಿ ನೆರವಿನೊಂದಿಗೆ 175 ರನ್ ಕಲೆಹಾಕಿದ್ದರು. ಈ ಮೂಲಕ ಆರ್ಸಿಬಿ 20 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ ದಾಖಲೆಯ 263 ರನ್ ಕಲೆಹಾಕಿತ್ತು. ಆದರೆ, ಗುರಿ ಬೆನ್ನತ್ತಿದ್ದ ಪುಣೆ 9 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಲಷ್ಟೇ ಶಕ್ತವಾದರು.
ಐಪಿಎಲ್ನಲ್ಲಿ ವೇಗವಾಗಿ ಶತಕ ಬಾರಿಸಿದ ಗೇಲ್, ಆಸ್ಟ್ರೇಲಿಯಾದ ಆ್ಯಂಡ್ರಿವ್ ಸೈಮಂಡ್ಸ್ 2004ರಲ್ಲಿ 34 ಎಸೆತದಲ್ಲಿ ಸಾಧಿಸಿದ್ದ ಶತಕ ದಾಖಲೆ ಹಾಗೂ ಪಾಕ್ ತಂಡದ ಮಾಜಿ ಆಟಗಾರ ಶಾಹೀದ್ ಅಫ್ರಿದಿ 1996ರಲ್ಲಿ ಶ್ರೀಲಂಕಾ ವಿರುದ್ಧ 37 ಎಸೆತದಲ್ಲಿ ಸಿಡಿಸಿದ್ದ ಶತಕ ದಾಖಲೆಯನ್ನು ಮುರಿದರು. ಅಲ್ಲದೇ, ಐಪಿಎಲ್ನಲ್ಲಿ ಯೂಸೂಫ್ ಪಠಾಣ್ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿಗೆ ಗೇಲ್ ಬರೆದುಕೊಂಡರು. 2010ರ ಆವೃತ್ತಿಯಲ್ಲಿ ಕೋಲ್ಕತ ಪರ ಆಡಿದ್ದ ಪಠಾಣ್ ಮುಂಬೈ ಇಂಡಿಯನ್ಸ್ ವಿರುದ್ಧ 37 ಎಸೆತದಲ್ಲಿ ಸೆಂಚುರಿ ಬಾರಿಸಿದ್ದರು. (ಏಜೆನ್ಸೀಸ್)
ಇಡೀ ರಾತ್ರಿ ಕಣ್ಣೀರಿಟ್ಟಂತಹ ಅಸಹಾಯಕ ಕ್ಷಣವನ್ನು ಬಹಿರಂಗಪಡಿಸಿದ ಟೀಮ್ ಇಂಡಿಯಾ ನಾಯಕ ಕೊಹ್ಲಿ!