More

    ಅಂತೂ ಆರಂಭವಾಗಲಿದೆ ಹೊಸೂರು ಬಸ್ ನಿಲ್ದಾಣ

    ಹುಬ್ಬಳ್ಳಿ: ಫೆ. 2ರಂದು ಬಿಆರ್​ಟಿಎಸ್ ಯೋಜನೆ ಲೋಕಾರ್ಪಣೆ ಜೊತೆಗೆ ಇಲ್ಲಿಯ ಹೊಸೂರ ಇಂಟರ್​ಚೇಂಜ್ ಹಾಗೂ ಪ್ರಾದೇಶಿಕ ಸಾರಿಗೆ ಬಸ್ ನಿಲ್ದಾಣ ಕೂಡ ಉದ್ಘಾಟನೆಯಾಗಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.

    ನಗರದ ಹೃದಯ ಭಾಗ ಕಿತ್ತೂರ ಚನ್ನಮ್ಮ ವರ್ತಳದ ಮೇಲಿನ ವಾಹನ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಹಳೇ ಬಸ್ ನಿಲ್ದಾಣದಿಂದ ವಿವಿಧ ಜಿಲ್ಲೆಗಳಿಗೆ ಹೋಗುವ ಬಸ್​ಗಳನ್ನು ಪ್ರಾದೇಶಿಕ ಬಸ್ ನಿಲ್ದಾಣಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ.

    ಕಾರವಾರ, ಗೋವಾ, ಬೆಳಗಾವಿ ಕಡೆಗೆ ಹೋಗುವ ಬಸ್​ಗಳನ್ನು ಈಗಾಗಲೇ ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣಕ್ಕೆ ಸ್ಥಳಾಂತರ ಮಾಡಲಾಗಿದೆ. ಫೆ. 2ರ ನಂತರ ಹೊಸೂರ ಪ್ರಾದೇಶಿಕ ಬಸ್ ನಿಲ್ದಾಣಕ್ಕೆ ಹಾವೇರಿ, ಬೆಂಗಳೂರು ಕಡೆ ಹೋಗುವುದು ಸೇರಿ ಎಲ್ಲ ಬಸ್​ಗಳನ್ನು ಸ್ಥಳಾಂತರ ಮಾಡಲಾಗುವುದು. ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಿಂದ ಜಿಲ್ಲೆಯ ಗ್ರಾಮೀಣ ಹಾಗೂ ಉಪನಗರ ಸಾರಿಗೆ ಬಸ್​ಗಳು ಮಾತ್ರ ಓಡಾಡಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರಾದೇಶಿಕ ಬಸ್ ನಿಲ್ದಾಣಕ್ಕೆ ಯಾವ ಯಾವ ಬಸ್​ಗಳು ಬರಬೇಕು, ಯಾವ ಮಾರ್ಗದಿಂದ ಹೋಗಬೇಕು ಎಂಬ ಬಗ್ಗೆ ನಿರ್ಧರಿಸಲು ಮುಖ್ಯ ಸಂಚಾರ ವ್ಯವಸ್ಥಾಪಕರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಇನ್ನಷ್ಟೇ ಅದು ನಿರ್ಧಾರ ಕೈಗೊಳ್ಳಲಿದೆ.

    ಹೊಸೂರಲ್ಲಿ ಏನೇನಿದೆ?
    ಬಿಆರ್​ಟಿಎಸ್ ಯೋಜನೆಯಡಿ ಹೊಸೂರಲ್ಲಿ ಹಲವು ಸೌಲಭ್ಯಗಳೊಂದಿಗೆ ಸುಸಜ್ಜಿತ ನಿಲ್ದಾಣ ನಿರ್ವಿುಸಲಾಗಿದೆ. ಬಿಆರ್​ಟಿಎಸ್ ಯೋಜನೆಯ ನಿಯಂತ್ರಣ ಕೊಠಡಿ ಈಗಾಗಲೇ ಕಾರ್ಯಾರಂಭ ಮಾಡಿದೆ. ಒಟ್ಟು 17 ಎಕರೆ ಪ್ರದೇಶದಲ್ಲಿ ಪ್ರಾದೇಶಿಕ ಸಾರಿಗೆ ಬಸ್ ನಿಲ್ದಾಣ, ನಗರ ಸಾರಿಗೆ ಡಿಪೋ ಹಾಗೂ ಬಸ್ ನಿಲ್ದಾಣ, ಬಿಆರ್​ಟಿಎಸ್ ಇಂಟರ್​ಚೇಂಜ್ ನಿಲ್ದಾಣ ನಿರ್ವಿುಸಲಾಗಿದೆ. ಇದು ಹುಬ್ಬಳ್ಳಿಯ ಬಹುದೊಡ್ಡ ಬಸ್ ನಿಲ್ದಾಣವಾಗಿದೆ. ಅಂದಾಜು 69 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಹಾಗೂ ಎಲ್ಲ ಸವಲತ್ತುಗಳನ್ನು ಇಲ್ಲಿ ಕಲ್ಪಿಸಲಾಗಿದೆ. ರಾಜದೀಪ ಕನ್​ಸ್ಟ್ರಕ್ಷನ್ ಕಂಪನಿ ಈ ಸಂಪೂರ್ಣ ಕಾಮಗಾರಿಯ ಟೆಂಡರ್ ಪಡೆದಿತ್ತು.

    ಸಂಪರ್ಕ ರಸ್ತೆ ಕೊರತೆ
    ಹೊಸೂರ ಪ್ರಾದೇಶಿಕ ಬಸ್ ನಿಲ್ದಾಣಕ್ಕೆ ಸದ್ಯಕ್ಕೆ ಸಂಪರ್ಕ ರಸ್ತೆಯದ್ದೇ ಸಮಸ್ಯೆಯಾಗಿದೆ. ಹಿಂಬದಿ, ಅಂದರೆ ಈ ಮೊದಲಿನ ಉಣಕಲ್ಲ ಕ್ರಾಸ್- ಕಮರಿಪೇಟೆ ಹಳೇ ಪಿಬಿ ರಸ್ತೆ (ಹೊಸ ಕೋರ್ಟ್ ಎದುರು) ಮೂಲಕವೇ ಎಲ್ಲ ಬಸ್​ಗಳು ಓಡಾಡಲಿವೆ. ಸದ್ಯ ಈ ರಸ್ತೆ ಕಾಂಕ್ರೀಟ್ ಮಾಡುವ ಕಾರ್ಯ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದಿಂದ ನಡೆದಿದೆ. ಒಂದು ಬದಿ ಮಾತ್ರ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನೊಂದು ಬದಿ ರಸ್ತೆ ನಿರ್ಮಾಣ ಇನ್ನಷ್ಟೇ ನಡೆಯಬೇಕಿದೆ. ಫೆ. 2ರಿಂದ ಬಸ್ ನಿಲ್ದಾಣ ಕಾರ್ಯಾರಂಭ ಮಾಡಿದರೂ ಕೆಲ ದಿನ ಸಮಸ್ಯೆಯಾಗಲಿದೆ ಎಂದು ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಬಿಆರ್​ಟಿಎಸ್, ವಾಯವ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ತಾತ್ಕಾಲಿಕ ಪರಿಹಾರ ಕಂಡುಕೊಂಡಿದ್ದಾರೆ.ಸದ್ಯಕ್ಕೆ ಹೊಸೂರು ಕೆನರಾ ಹೋಟೆಲ್ ಬಳಿಯಿಂದ ಡಿಪೋ ಮಾರ್ಗದಲ್ಲಿ ಬಸ್​ಗಳಿಗೆ ಪ್ರವೇಶ ನೀಡಿ ಹೊರ ಹೋಗುವ ಬಸ್​ಗಳನ್ನು ಒಂದು ಬದಿ ನಿರ್ವಿುಸಲಾಗಿರುವ ಹಿಂಬದಿಯ ರಸ್ತೆ ಮೇಲೆ ಓಡಿಸಲು ತೀರ್ವನಿಸಲಾಗಿದೆ. ಅಂತೂ ಫೆ. 2ರ ನಂತರ ಹೊಸೂರು ಪ್ರಾದೇಶಿಕ ಸಾರಿಗೆ ನಿಲ್ದಾಣ ಸಕ್ರಿಯವಾಗುವುದು ಖಚಿತವಾಗಿದೆ. ಅದಕ್ಕಾಗಿ ಅಂತಿಮ ಹಂತದ ಕೆಲಸಗಳು ಅಲ್ಲಿ ನಡೆದಿವೆ.

    ತಲೆಗೆ ಬಡಿದೀತು ಜೋಕೆ!
    ಹೊಸ ಕೋರ್ಟ್ ಕಡೆಯಿಂದ ಪ್ರಯಾಣಿಕರು ಒಳಬರುವಲ್ಲಿ ಹೊಸ ವಿನ್ಯಾಸದ ನಿರ್ಮಾಣ ಮಾಡಲಾಗಿದೆ. ಆದರೆ, ಕಂಬಗಳ ಎತ್ತರ ನಿರ್ಧರಿಸುವಲ್ಲಿ ಕಟ್ಟಡದ ವಿನ್ಯಾಸಕಾರರು ಮತ್ತು ಅಧಿಕಾರಿಗಳು ಎಡವಿದ್ದಾರೆ. 5.5 ಅಡಿಗಿಂತ ಎತ್ತರ ಇರುವವರು ಸ್ವಲ್ಪ ಎಚ್ಚರ ತಪ್ಪಿದರೆ ಕಂಬದ ಮೇಲಿನ ಕಬ್ಬಿಣದ ಪಟ್ಟಿಗಳಿಗೆ ತಲೆ ಬಡಿಯುವುದು ಖಾತ್ರಿ. ಲಗೇಜ್ ಹೊತ್ತು ತರುವವರಿಗೂ ಇದು ಸಮಸ್ಯೆಯೇ. ಕೋಟಿಗಳ ಲೆಕ್ಕದಲ್ಲಿ ಖರ್ಚು ಮಾಡುವಾಗಲೂ ಸಾಮಾನ್ಯ ಜ್ಞಾನ ಅನ್ವಯಿಸದೇ ಇರುವುದರಿಂದ ಜನಸಾಮಾನ್ಯರೂ ಟೀಕಿಸುವಂತಾಗಿದೆ! ಈಗ, ತಲೆಗೆ ಬಡಿಯುವುದನ್ನು ತಪ್ಪಿಸಲು ಕಂಬಗಳ ಸುತ್ತ ಹೂ ಕುಂಡಗಳನ್ನಾದರೂ ಇಡಬೇಕಾಗಿದೆ. ಇಲ್ಲದಿದ್ದರೆ, ಜನ ಹಿಡಿಶಾಪ ಹಾಕದೇ ಇರಲಾರರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts