More

    ಹುಬ್ಬಳ್ಳಿಯಲ್ಲಿ ಶಿವಾಚಾರ್ಯರ ಚಿಂತನಾ ಸಮಾವೇಶ

    ಭಕ್ತರಿಗೆ ಬಹಳ ಹತ್ತಿರದಲ್ಲಿರುವವರು ಶಿವಾಚಾರ್ಯರು. ಅವರ ಸದೃಢತೆಗಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದಾರೆ. ಅದರ ಮುಂದುವರಿದ ಭಾಗವಾಗಿ ಇಂದಿನಿಂದ ಮೂರು ದಿನಗಳ ಕಾಲ ಹುಬ್ಬಳ್ಳಿಯಲ್ಲಿ ಐತಿಹಾಸಿಕ ಶಿವಾಚಾರ್ಯ ಸಂಸ್ಕೃತಿ ಪುನಶ್ಚೇತನ ಚಿಂತನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.

    ಸನಾನತ ಸಂಸ್ಕೃತಿಯನ್ನು ಹೊಂದಿರುವ, ಧರ್ಮಪ್ರಧಾನವಾದ ಭಾರತದಲ್ಲಿ ವೀರಶೈವಧರ್ಮವು ಯುಗಯುಗಗಳ ಇತಿಹಾಸವನ್ನು ಹೊಂದಿದೆ. ಇಂತಹ ಸನಾತನ ವೀರಶೈವಧರ್ಮವು ಜಗದ್ಗುರು ಪಂಚಾಚಾರ್ಯರಿಂದ ಸಂಸ್ಥಾಪಿಸಲ್ಪಟ್ಟಿದ್ದರೆ; ಆ ಎಲ್ಲ ಪೀಠಗಳ ಶಾಖಾಮಠಗಳ ಒಡೆಯರಾದ ಶಿವಾಚಾರ್ಯರಿಂದ ವೀರಶೈವ ಸಂಸ್ಕೃತಿ ತನ್ನ ನೆಲೆ-ಬೆಲೆಯನ್ನು ಉಳಿಸಿಕೊಂಡಿದೆ. ಈ ಸಂಸ್ಕೃತಿಯನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ಐತಿಹಾಸಿಕ ಶಿವಾಚಾರ್ಯ ಸಂಸ್ಕೃತಿ ಪುನಶ್ಚೇತನ ಚಿಂತನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.

    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಟ್ಟಕಡೆಯ ವ್ಯಕ್ತಿಗೂ ಮೂಲಭೂತ ಸೌಲಭ್ಯಗಳು ತಲುಪಬೇಕೆಂಬ ಉದ್ದೇಶದಿಂದ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯನ್ನು ಹೇಗೆ ಮಾಡಲಾಗಿದೆಯೋ ಆ ಪರಿಕಲ್ಪನೆಯನ್ನು ಧರ್ಮದ ವ್ಯವಸ್ಥೆಯಲ್ಲಿ ಜಗದ್ಗುರು ಪಂಚಾಚಾರ್ಯರು ಸಾವಿರಾರು ವರ್ಷಗಳ ಹಿಂದೆಯೇ ಅನುಷ್ಠಾನಗೊಳಿಸಿದ್ದಾರೆ. ಸಾಕ್ಷಾತ್ ಶಿವನ ಪಂಚಮುಖಗಳಿಂದ ಉದ್ಭವಿಸಿದ ಜಗದ್ಗುರು ಪಂಚಾಚಾರ್ಯರು ಸ್ಥಾಪಿಸಿದ ಪಂಚಪೀಠಗಳು ದೇಶದ ಐದು ಕಡೆಗಳಲ್ಲಿ ನೆಲೆಗೊಂಡು ಭಕ್ತರಿಗೆ ಮಾರ್ಗದರ್ಶನವನ್ನು ಮಾಡುತ್ತಿವೆ.

    ಶಿವನಿಂದ ತಾವು ಸ್ವೀಕರಿಸಿರುವ ದೀಕ್ಷಾದಿ ಸಂಸ್ಕಾರಗಳನ್ನು ನೀಡುವ ಅಧಿಕಾರವನ್ನು ಎಲ್ಲ ಕಡೆಗಳಲ್ಲಿರುವ ವೀರಶೈವ ಲಿಂಗಾಯತ ಸಮುದಾಯದ ಸರ್ವ ಶಿಷ್ಯರಿಗೆ ನೀಡುವುದಕ್ಕಾಗಿ ಅಲ್ಲಲ್ಲಿ ಶಾಖಾಮಠಗಳನ್ನು ಸ್ಥಾಪಿಸಿದರು. ಆ ಮಠಕ್ಕೆ ಓರ್ವ ಮಠಾಧಿಪತಿಯನ್ನು ನೇಮಕ ಮಾಡಿ, ಗರ್ಭದೀಕ್ಷೆಯಿಂದ ಆರಂಭಿಸಿ ಅಂತಿಮ ಸಂಸ್ಕಾರದವರೆಗಿನ ಹದಿನಾರು ಪ್ರಮುಖ ಸಂಸ್ಕಾರಗಳನ್ನು ನೀಡುವ ಅಧಿಕಾರವನ್ನು ಅವರಿಗೆ ನೀಡಿದ್ದಾರೆ. ಹೀಗೆ ಪಂಚಪೀಠಾಧೀಶರಿಂದ ನೇಮಕಗೊಂಡವರನ್ನೇ ಶಿವಾಚಾರ್ಯರು ಎಂದು ಕರೆಯಲಾಗುತ್ತದೆ.

    ಶಿವತತ್ತ್ವವನ್ನು ಜಗತ್ತಿಗೆ ಬೋಧಿಸುವ ಹಾಗೂ ಶಿವನು ಬೋಧಿಸಿರುವ ಆಚಾರಗಳನ್ನು ಜಗತ್ತಿಗೆ ತಿಳಿಸುವ ಗುರುವಿಗೆ ‘ಶಿವಾಚಾರ್ಯರು’ ಎಂದು ಹೇಳಲಾಗುತ್ತದೆ. ಈ ಅರ್ಥದಲ್ಲಿ ಜಗದ್ಗುರು ಪಂಚಪೀಠಾಧೀಶರಿಗೂ ಶಿವಾಚಾರ್ಯರೆಂದು ಕರೆಯಲಾಗಿದ್ದು, ಅವರಿಂದಲೇ ನೇಮಕರಾಗುವ ಉಪಾಚಾರ್ಯರನ್ನು ಕೂಡ ಶಿವಾಚಾರ್ಯರೆಂದೇ ಸಂಬೋಧಿಸಲಾಗುತ್ತದೆ.

    ಪ್ರತಿ ಪೀಠಕ್ಕೂ ದೇಶದ ಎಲ್ಲ ಪ್ರಾಂತಗಳಲ್ಲಿ ಸಾವಿರಾರು ಶಾಖಾಮಠಗಳು ಸ್ಥಾಪನೆಗೊಂಡಿವೆ. ಆ ಪರಂಪರೆಯ ಪ್ರಕಾರ ಆಯಾಯ ಪೀಠದ ಗೋತ್ರ-ಸೂತ್ರಗಳನ್ವಯ ಭಕ್ತರ ಕಷ್ಟ-ಸುಖಗಳಿಗೆ ಅನುಗುಣವಾಗಿ ಧರ್ಮಪ್ರಚಾರದ ಬಹು ದೊಡ್ಡ ಜವಾಬ್ದಾರಿಯನ್ನು ಈ ಶಿವಾಚಾರ್ಯಸಮೂಹ ಇಂದಿಗೂ ನಡೆಸಿಕೊಂಡು ಹೋಗುತ್ತಿದೆ.

    ಶಿವಾಚಾರ್ಯ ಪರಂಪರೆ: ದೇಶದ ಆಡಳಿತಕ್ಕೆ ಹೇಗೆ ಒಂದು ಸಂವಿಧಾನವಿರುತ್ತದೆಯೋ; ಅದೇ ರೀತಿ ವೀರಶೈವಧರ್ಮ ವ್ಯವಸ್ಥೆಯಲ್ಲಿಯೂ ಒಂದು ಸಂವಿಧಾನವಿದೆ. ಅಷ್ಟಾವರಣ, ಪಂಚಾಚಾರ, ಷಟ್​ಸ್ಥಲ ಎಂಬ ತತ್ತ್ವತ್ರಯಗಳ ಅನುಗುಣವಾಗಿ ದಶ ಧರ್ಮಸೂತ್ರಗಳಡಿಯಲ್ಲಿ ಈ ಧರ್ಮದ ಸಂಸ್ಕೃತಿ, ಸಂಸ್ಕಾರಗಳು ಉತ್ಥಾನಗೊಳ್ಳುತ್ತಿರುವುದರ ಹಿಂದೆ ಹಿರಿದಾದ ಪಾಲು ದೇಶದಾದ್ಯಂತ ಇರುವ ಪಂಚಪೀಠಗಳ ಶಾಖಾಮಠದಲ್ಲಿರುವ ಶಿವಾಚಾರ್ಯರಿಗೆ ಸಲ್ಲುತ್ತದೆ.

    ಶಿವಾಚಾರ್ಯರಲ್ಲೂ ಬಹು ದೊಡ್ಡ ಸಾಧನೆಗೈದು ತಪಸ್ವಿಗಳಾಗಿ ಜಗತ್ತಿಗೆ ಬಹು ದೊಡ್ಡ ಸಾಧಕರನ್ನು ನೀಡಿದ ಉದಾಹರಣೆಗಳಿವೆ. ಅಂತಹವರಲ್ಲಿ ಸ್ಮರಿಸಲೇಬೇಕಾದ ಕೆಲವು ಹೆಸರುಗಳೆಂದರೆ; ವೀರಶೈವ ಧರ್ಮಗ್ರಂಥವಾಗಿರುವ ಶ್ರೀ ಸಿದ್ಧಾಂತ ಶಿಖಾಮಣಿಯನ್ನು ರಚಿಸಿದ ಶ್ರೀ ಶಿವಯೋಗಿ ಶಿವಾಚಾರ್ಯರು, ಭಕ್ತಿಭಂಡಾರಿ ಬಸವಣ್ಣನವರಿಗೆ ಲಿಂಗದೀಕ್ಷೆಯನ್ನು ನೀಡಿದ ಶ್ರೀ ಜಾತವೇದ ಮುನಿ ಶಿವಾಚಾರ್ಯರು, ಅದ್ವೆ ೖತ ಸಾಮ್ರಾಟ ಸಿದ್ಧಾರೂಢರಿಗೆ ದೀಕ್ಷೆ ನೀಡಿದ ಶ್ರೀ ಗಜದಂಡ ಶಿವಾಚಾರ್ಯರು, ಪರಮ ತಪಸ್ವಿಗಳಾಗಿದ್ದ ದಿಂಡದಹಳ್ಳಿ ಧರ್ಮಕ್ಷೇತ್ರದ ಶ್ರೀ ಶಿವಾನಂದ ಶಿವಾಚಾರ್ಯರು – ಹೀಗೆ ಬಹುದೊಡ್ಡ ಸಾಧಕರು ಶಿವಾಚಾರ್ಯರಾಗಿ ಹೋಗಿದ್ದಾರೆ.

    ಪಂಚಪೀಠದ ಜಗದ್ಗುರುಗಳಾಗುವವರು ಕೂಡ ಪ್ರಥಮದಲ್ಲಿ ಓರ್ವ ಶಿವಾಚಾರ್ಯರೇ ಆಗಿರುತ್ತಾರೆ. ಪ್ರಸ್ತುತ ಪಂಚಪೀಠಗಳ ಐವರು ಜಗದ್ಗುರುಗಳೂ ವಿವಿಧ ಮಠಗಳಲ್ಲಿ ಶಿವಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ. ವಿಶೇಷವಾಗಿ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹಳ್ಯಾಳ ಹಿರೇಮಠದ ಪಟ್ಟಾಧ್ಯಕ್ಷರಾಗಿ ನಂತರ ಶಿವಗಂಗಾಕ್ಷೇತ್ರದ ಮೇಲಣಗವಿ ಮಠದ ಪಟ್ಟಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

    ಶಿವಾಚಾರ್ಯ ಚಿಂತನಾ ಸಮಾವೇಶ: ಜನರಿಗೆ ಅತಿ ಹತ್ತಿರದಲ್ಲಿರುವ ಶಿವಾಚಾರ್ಯರ ಸದೃಢತೆಗಾಗಿ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿರುವ ಶ್ರೀ ರಂಭಾಪುರಿ ಜಗದ್ಗುರುಗಳು ಈ ಹಿಂದೊಮ್ಮೆ ಜಗದ್ಗುರು ಪಂಚಪೀಠಾಧೀಶ್ವರರ ಸಾನ್ನಿಧ್ಯದಲ್ಲಿ ರಂಭಾಪುರಿ ಪೀಠದ ಪರಿಸರದಲ್ಲಿ ಶಿವಾಚಾರ್ಯರ ಪುನಶ್ಚೇತನ ಶಿಬಿರವನ್ನು ಹಮ್ಮಿಕೊಂಡಿದ್ದರು. ಈ ಭಾರಿ ರಂಭಾಪುರಿ ಖಾಸಾ ಶಾಖಾ ಶ್ರೀಮನ್ ಸಂಸ್ಥಾನ ಮಳಲಿ ಮಠದಲ್ಲಿ ಪುನಶ್ಚೇತನ ಸಮಾವೇಶ ನಡೆಸುವ ಘೊಷಣೆ ಮಾಡಿದ್ದರು. ಆದರೆ ನೂರಾರು ಸಂಖ್ಯೆಯಲ್ಲಿ ಆಗಮಿಸುವ ಶಿವಾಚಾರ್ಯರ ಅನುಕೂಲಕ್ಕಾಗಿ ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಶ್ರೀ ಜಗದ್ಗುರು ರಂಭಾಪುರಿ ವೀರಗಂಗಾಧರ ಸಮುದಾಯ ಭವನದಲ್ಲಿ ಜ. 16ರಿಂದ 18ರವರೆಗೆ ಶಿವಾಚಾರ್ಯ ಸಂಸ್ಕೃತಿ ಪುನಶ್ಚೇತನ ಚಿಂತನಾ ಸಮಾವೇಶವನ್ನು ಹಮ್ಮಿಕೊಂಡಿದ್ದಾರೆ.

    ಪ್ರತಿದಿನ ಬೆಳಗ್ಗೆ ವೀರಶೈವ ಧರ್ಮ ಪರಂಪರೆ ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತು ಚಿಂತನೆ ನಡೆಯಲಿದ್ದು, ಸಂಜೆ ಸಮಾವೇಶದಲ್ಲಿ ವಿವಿಧ ವಿದ್ವಾಂಸರಿಂದ ವಿವಿಧ ವಿಷಯಗಳು ಮಂಡನೆಯಾಗಲಿವೆ.

    ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆಯ ಅಧ್ಯಕ್ಷರಾದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು ಹಾಗೂ ಅಖಿಲ ಭಾರತ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಎಡೆಯೂರು ಬಾಳೆಹೊನ್ನೂರು ಮಠದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮಿಗಳು ಸಮಾವೇಶ ಉದ್ಘಾಟಿಸಲಿದ್ದಾರೆ. ಹುಕ್ಕೇರಿ, ಮಳಲಿ, ಬಂಕಾಪುರ, ಶಾಕಾಪುರ, ಶಿವಗಂಗೆ, ಕುಪ್ಪೂರು, ಸಿದ್ಧರಬೆಟ್ಟ ಸೇರಿದಂತೆ ನೂರಕ್ಕೂ ಹೆಚ್ಚು ಶಿವಾಚಾರ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

    ಪ್ರಶಾಂತ ರಿಪ್ಪನ್​ಪೇಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts