ದುಬೈ: 170 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಉಕ್ರೇನ್ ವಿಮಾನವು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಇರಾನ್ನಲ್ಲಿ ಪತನಗೊಂಡಿರುವುದಾಗಿ ಬುಧವಾರ ಬೆಳಗ್ಗೆ ವರದಿಯಾಗಿತ್ತು. ಇದೀಗ ವಿಮಾನದಲ್ಲಿದ್ದ ಸಿಬ್ಬಂದಿ ಸೇರಿದಂತೆ 170 ಪ್ರಯಾಣಿಕರು ಸಾವಿಗೀಡಾಗಿರುವುದಾಗಿ ಉಕ್ರೇನಿಯನ್ ಅಧಿಕಾರಿಗಳು ಅಧಿಕೃತವಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಬೋಯಿಂಗ್ 737 ಹೆಸರಿನ ಉಕ್ರೇನಿಯನ್ ವಿಮಾನ ಬುಧವಾರ ಬೆಳಗ್ಗೆ ಇರಾನ್ನ ತೆಹ್ರಾನ್ ಇಮಾಮ್ ಖೊಮೆನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಿಟ್ಟು ಉಕ್ರೇನ್ನ ಕೈವ್ ಬೋರಿಸ್ಪಿಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿತ್ತು. ಆದರೆ ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಏರ್ಪೋರ್ಟ್ ಬಳಿ ಪತನಗೊಂಡಿದೆ. ಸ್ಫೋಟಗೊಂಡ ಪರಿಣಾಮ ವಿಮಾನದಲ್ಲಿದ್ದವರೆಲ್ಲಾ ಮೃತರಾಗಿರುವುದುದಾಗಿ ಉಕ್ರೇನ್ ವಿದೇಶಾಂಗ ಸಚಿವಾಲಯದ ಅಧಿಕಾರಿ ಕೀವ್ ತಿಳಿಸಿದ್ದಾರೆ.
ಬೆಂಕಿಯ ಜ್ವಾಲೆ ಅಧಿಕವಾಗಿದ್ದರಿಂದ ಯಾವುದೇ ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಘಟನಾ ಸ್ಥಳದಲ್ಲಿ 22 ಆಂಬುಲೆನ್ಸ್, 4 ಬಸ್ ಆಂಬುಲೆನ್ಸ್ ಮತ್ತು ಒಂದು ಹೆಲಿಕಾಪ್ಟರ್ ನಿಯೋಜನೆಗೊಂಡಿದ್ದವು. ಆದರೂ ಯಾರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಇರಾನ್ನ ತುರ್ತುಸೇವಾ ಮುಖ್ಯಸ್ಥ ಪಿರ್ಹೊಸ್ಸೈನ್ ಕೌಲಿವ್ಯಂಡ್ ಮರುಕ ವ್ಯಕ್ತಪಡಿಸಿದ್ದಾರೆ.
ಏರ್ ಟ್ರ್ಯಾಕಿಂಗ್ ಸರ್ವೀಸ್ ಫ್ಲೈಟ್ ರಾಡರ್ 24 ಪ್ರಕಾರ ಪತನಗೊಂಡ ವಿಮಾನ ಪಿಎಸ್ 752 ಆಗಿದ್ದು, ಉಕ್ರೇನ್ನ ಕೀವ್ಗೆ ತೆರಳುತ್ತಿತ್ತು. ವಿಮಾನವು ಮೂರು ವರ್ಷ ಹಳೆಯದು ಮತ್ತು ಬೋಯಿಂಗ್ 737 ಎನ್ಜಿ ಆಗಿದೆ ಎಂದು ತಿಳಿಸಿದೆ.
ಬೆಳಗಿನ ಪ್ರಾಥಮಿಕ ವರದಿಯ ಪ್ರಕಾರ ಸಿಬ್ಬಂದಿ ಸೇರಿ ವಿಮಾನದಲ್ಲಿ 180 ಪ್ರಯಾಣಿಕರಿದ್ದರು ಎನ್ನಲಾಗಿತ್ತು. ಆದರೆ, ಇದೀಗ ಅಧಿಕೃತ ಮಾಹಿತಿ ಹೊರಬಿದ್ದಿದ್ದು, ವಿಮಾನದಲ್ಲಿ ಸಿಬ್ಬಂದಿ ಸೇರಿ 170 ಪ್ರಯಾಣಿಕರಿದ್ದು, ಎಲ್ಲರು ಮೃತರಾಗಿದ್ದಾರೆ. (ಏಜೆನ್ಸೀಸ್)
ಸಿಬ್ಬಂದಿ ಸೇರಿ 180 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಇರಾನ್ನಲ್ಲಿ ಪತನ