More

    ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ

    ದಾವಣಗೆರೆ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ಹೈಸ್ಕೂಲ್ ಮೈದಾನದಲ್ಲಿ ಕಾಂಗ್ರೆಸ್‌ನಿಂದ ಶನಿವಾರ ಆಯೋಜಿಸಿದ್ದ ‘ಪ್ರಜಾಧ್ವನಿ-2’ ಸಮಾವೇಶದಲ್ಲಿ ಭಾಗವಹಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿ ಕೋವಿಡ್ ಲಸಿಕೆಯ ಅಡ್ಡಪರಿಣಾಮದ ಬಗ್ಗೆ ಆತಂಕ ವ್ಯಕ್ತಪಡಿಸಿದರು.
     ಕೆಲ ದಿನಗಳ ಹಿಂದೆ ಬಂದ ವರದಿ ಪ್ರಕಾರ, ಕೋವಿಡ್ ಲಸಿಕೆ ಪಡೆದ ಹಲವರಿಗೆ ಅನಿರೀಕ್ಷಿತವಾಗಿ ಹೃದಯಾಘಾತ ಆಗುವ ಸಾಧ್ಯತೆ ಇದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಯಾವುದೇ ರೋಗಗಳಿಲ್ಲದ ಆರೋಗ್ಯವಂತ ಯುವಕರೂ ಹೃದಯಾಘಾತಕ್ಕೆ ಒಳಗಾಗುವುದು ಆತಂಕ ಹುಟ್ಟಿಸಿದೆ ಎಂದು ತಿಳಿಸಿದರು.
     ಆ ಲಸಿಕೆ ಪಡೆದವರಿಗೆ ನೀಡಲಾದ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಅವರ ಭಾವಚಿತ್ರ ಇತ್ತು ಎಂಬುದನ್ನು ನೆನಪಿಸುವ ಮೂಲಕ ಪ್ರಿಯಾಂಕಾ, ಪ್ರಧಾನಿ ಮೋದಿ ಅವರತ್ತ ಬೆರಳು ತೋರಿಸಿದರು.
     ಒಂದೇ ಕಂಪೆನಿ ಆ ಲಸಿಕೆಯನ್ನು ತಯಾರಿಸಿದೆ. ಆ ಕಂಪೆನಿಯಿಂದ ಚುನಾವಣಾ ಬಾಂಡ್ ರೂಪದಲ್ಲಿ 52 ಕೋಟಿ ರೂ.ಗಳನ್ನು ಪಡೆಯಲಾಗಿದೆ ಎಂದು ಪ್ರಸ್ತಾಪಿಸಿದರು.
     ತಮ್ಮ ಹಿಡಿತದಲ್ಲಿರುವ ಸಂಸ್ಥೆಗಳಿಂದ ದಾಳಿ ಮಾಡಿಸುವುದು, ಪ್ರಕರಣ ದಾಖಲಿಸುವುದು, ಅವರಿಂದ ದೇಣಿಗೆ ಪಡೆದು ಕೇಸ್ ವಾಪಸ್ ತೆಗೆದುಕೊಳ್ಳುವುದು ಮಾಡುತ್ತಿದೆ ಎನ್ನುವ ಮೂಲಕ ಕೇಂದ್ರ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದರು.
     ಪ್ರಧಾನಿ ಮೋದಿ ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಕೋಟ್ಯಧಿಪತಿಗಳ ಪರವಾಗಿದ್ದಾರೆ. ದೇಶದ ಸಂಪತ್ತು 5-6 ಜನ ಬಂಡವಾಳಶಾಹಿಗಳ ಪಾಲಾಗುತ್ತಿದೆ. ಇದು ದೊಡ್ಡ ಭ್ರಷ್ಟಾಚಾರದ ಉದಾಹರಣೆಯಾಗಿದೆ ಎಂದರು.
     ಪ್ರಧಾನಿ ಮೋದಿ ಒಳ್ಳೊಳ್ಳೆ ಮಾತುಗಳನ್ನಾಡುತ್ತಾರೆ, ಅವರ ಎಲ್ಲ ನೀತಿಗಳೂ ಕೋಟ್ಯಧಿಪತಿಗಳ ಪರವಾಗಿವೆ. ಅವರು ದೊಡ್ಡ ದೊಡ್ಡ ವೇದಿಕೆಗಳಲ್ಲಿ ಮಿಂಚುವುದನ್ನು ಟಿವಿಗಳಲ್ಲಿ ನೋಡಿದ್ದೀರಿ. ಆದರೆ ಅವರು ಎಂದಾದರೂ ರೈತರ ಮನೆಗೆ ಹೋಗಿದ್ದನ್ನು ನೋಡಿದ್ದೀರಾ ಎಂದು ಪ್ರಶ್ನಿಸಿದರು.
     ಡಿಸಿಎಂ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣಜಿತ್ ಸಿಂಗ್ ಸುರ್ಜೆವಾಲಾ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಡಾ. ಶಾಮನೂರು ಶಿವಶಂಕರಪ್ಪ ಸೇರಿ ಜಿಲ್ಲೆಯ ಶಾಸಕರು, ಮಾಜಿ ಸಚಿವರಾದ ಎಚ್. ಆಂಜನೇಯ, ಎಚ್.ಎಂ. ರೇವಣ್ಣ, ಇನ್ನಿತರ ನಾಯಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts