ವಿಶಾಖಪಟ್ಟಣಂ: ಇಲ್ಲಿನ ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ 16ನೇ ಐಪಿಎಲ್ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನದ ಫಲವಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಲ್ಕತ್ತಾ ನೈಟ್ರೈಡರ್ಸ್ ತಂಡವು 106ರನ್ಗಳ ಜಯ ಸಾಧಿಸುವ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರಿದೆ.
ಇನ್ನೂ ಕಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ಗೆ ದಂಡ ವಿಧಿಸಲಾಗಿದ್ದು, ನಿಷೇಧದ ಭೀತಿಯನ್ನು ಎದುರಿಸುತ್ತಿದ್ದಾರೆ. ಹಾಲಿ ಆವೃತ್ತಿಯಲ್ಲಿ ರಿಷಭ್ ಪಂತ್ಗೆ ಎರಡನೇ ಬಾರಿಗೆ ದಂಡ ವಿಧಿಸಲಾಗುತ್ತಿದ್ದು, ಹೀಗೆ ಆದಲ್ಲಿ ಅವರನ್ನು ನಿಷೇಧಿಸುವ ಸಾಧ್ಯತೆ ಹೆಚ್ಚಿದೆ.
ಐಪಿಎಲ್ ನಿಯಮದ ಪ್ರಕಾರ, ಪ್ರತಿ ತಂಡಗಳು 20 ಓವರ್ಗಳನ್ನು 1 ಗಂಟೆ 30 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ಒಂದು ವೇಳೆ ಇದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ ಬೌಂಡರಿ ಲೈನ್ನಿಂದ ಒಬ್ಬ ಫೀಲ್ಡರ್ನನ್ನು ಕಡಿತ ಮಾಡಲಾಗುತ್ತದೆ. ಹಾಗೆಯೇ ಈ ತಪ್ಪನ್ನು ಮಾಡಿದ ತಂಡದ ನಾಯಕನಿಗೆ 12 ಲಕ್ಷ ರೂ. ದಂಡ ವಿಧಿಸಲಾಗುತ್ತದೆ.
ಇದನ್ನೂ ಓದಿ: ಐಪಿಎಲ್ನ 2 ಪಂದ್ಯಗಳ ದಿನಾಂಕ ಬದಲಿಸಿದ ಬಿಸಿಸಿಐ; ಕಾರಣ ಹೀಗಿದೆ
ಅದರಂತೆ ಬೌಲಿಂಗ್ ವೇಳೆ ಸ್ಲೋ ಓವರ್ ರೇಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಿಗದಿತ ಸಮಯದೊಳಗೆ ಪಂದ್ಯವನ್ನು ಮುಗಿಸಿರಲಿಲ್ಲ. ಈ ಕಾರಣಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ಹಾಗೆಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಂಡ ಆಟಗಾರರಿಗೆ 6 ಲಕ್ಷ ರೂ. ಅಥವಾ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ಪಾವತಿಸಬೇಕೆಂದು ತಿಳಿಸಲಾಗಿದೆ.
ಇನ್ನು ಇದೇ ತಪ್ಪನ್ನು 2ನೇ ಬಾರಿ ಪುನರಾವರ್ತಿಸಿದರೆ ನಾಯಕನಿಗೆ 24 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇದರ ಜೊತೆಗೆ ಪ್ಲೇಯಿಂಗ್ ಇಲೆವೆನ್ನ 10 ಆಟಗಾರರಿಗೆ 6 ಲಕ್ಷ ಅಥವಾ ಪಂದ್ಯದ ಶುಲ್ಕದ 25% ದಂಡವನ್ನು ವಿಧಿಸಲಾಗುತ್ತದೆ. ಈ ತಪ್ಪನ್ನು ಮೂರನೇ ಬಾರಿ ಆವರ್ತಿಸಿದರೆ, ತಂಡದ ನಾಯಕನಿಗೆ 30 ಲಕ್ಷ ದಂಡ ವಿಧಿಸಲಾಗುತ್ತದೆ. ಇದರ ಜೊತೆಗೆ ಒಂದು ಪಂದ್ಯದಿಂದ ನಿಷೇಧಕ್ಕೊಳಗಾಗಲಿದ್ದಾರೆ. ಹಾಗೆಯೇ ಪ್ಲೇಯಿಂಗ್ ಇಲೆವೆನ್ನ 10 ಆಟಗಾರರು ತಲಾ 12 ಲಕ್ಷ ರೂ. ಅಥವಾ ಪಂದ್ಯದ ಶುಲ್ಕದ ಶೇ. 50 ರಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ.
ಇದೀಗ ರಿಷಭ್ ಪಂತ್ 2 ಬಾರಿ ಈ ತಪ್ಪನ್ನು ಮಾಡಿದ್ದಾರೆ. ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಸ್ಲೋ ಓವರ್ ರೇಟ್ ಶಿಕ್ಷೆಗೆ ಗುರಿಯಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ, ಇದೀಗ ಕೆಕೆಆರ್ ವಿರುದ್ಧ ಕೂಡ ಅದೇ ತಪ್ಪನ್ನು ಪುನರಾವರ್ತಿಸಿದ್ದಾರೆ. ಇನ್ನು ಮುಂಬರುವ ಪಂದ್ಯಗಳಲ್ಲಿ ಈ ತಪ್ಪನ್ನು ಮಾಡಿದರೆ ಒಂದು ಪಂದ್ಯದಿಂದ ನಿಷೇಧಕ್ಕೊಳಗಾಗಲಿದ್ದಾರೆ.