ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಮಧ್ಯಂತರ ಬಜೆಟ್ ಎಲ್ಲರನ್ನು ಒಳಗೊಳ್ಳುವ ಮತ್ತು ಹೊಸತನದ ಬಜೆಟ್ ಆಗಿದೆ ಎಂದು ಪ್ರಧಾನಿ ಮೋದಿ ಅವರು ಪ್ರಶಂಸಿಸಿದರು.
ಬಜೆಟ್ ಮಂಡನೆ ಬೆನ್ನಲ್ಲೇ ಅಭಿಪ್ರಾಯ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಇಂದಿನ ಬಜೆಟ್ ವಿಕಸಿತ ಭಾರತದ ನಾಲ್ಕು ಆಧಾರಸ್ತಂಭಗಳಾದ ಯುವಕರು, ಬಡವರು, ಮಹಿಳೆಯರು ಮತ್ತು ರೈತರನ್ನು ಸಬಲೀಕರಣಗೊಳಿಸಲಿದೆ. ಅಲ್ಲದೆ, ಈ ಬಜೆಟ್ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಭರವಸೆಯನ್ನು ನೀಡುತ್ತದೆ ಎಂದರು.
ಈ ಬಜೆಟ್ ಯುವ ಭಾರತದ ಯುವ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ. ಬಜೆಟ್ನಲ್ಲಿ ಎರಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸಂಶೋಧನೆ ಮತ್ತು ಆವಿಷ್ಕಾರಕ್ಕಾಗಿ 1 ಲಕ್ಷ ಕೋಟಿ ರೂಪಾಯಿಗಳ ನಿಧಿಯನ್ನು ಘೋಷಿಸಲಾಗಿದೆ. ಈ ಬಾರಿಯ ಬಜೆಟ್ನಲ್ಲಿ ವಿತ್ತೀಯ ಕೊರತೆಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಬಂಡವಾಳ ವೆಚ್ಚಕ್ಕೆ ಐತಿಹಾಸಿಕ ಗರಿಷ್ಠ 11,11,111 ಕೋಟಿ ರೂ. ಮೀಸಲಿಡಲಾಗಿದೆ ಎಂದು ಹೇಳಿದರು.
ಈ ಬಜೆಟ್ ಬಡವರು ಮತ್ತು ಮಧ್ಯಮ ವರ್ಗದವರ ಸಬಲೀಕರಣ ಗುರಿಯ ಜತೆಗೆ ಹೊಸ ಉದ್ಯೋಗಾವಕಾಶಗಳ ಸೃಷ್ಟಿಗೆ ಒತ್ತು ನೀಡುತ್ತದೆ. ಬಡವರಿಗೆ ಹೆಚ್ಚುವರಿಯಾಗಿ 2 ಕೋಟಿ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಘೋಷಿಸಲಾಗಿದೆ. ನಾವೀಗ 3 ಕೋಟಿ ‘ಲಖಪತಿ ದೀದಿಗಳನ್ನು’ ಹೊಂದುವ ಗುರಿ ಹೊಂದಿದ್ದೇವೆ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನವನ್ನು ಪಡೆಯಲಿದ್ದಾರೆ ಎಂದರು.
ಆದಾಯ-ತೆರಿಗೆ ಪರಿಹಾರ ಯೋಜನೆಯು ಮಧ್ಯಮ ವರ್ಗದ 1 ಕೋಟಿ ಜನರಿಗೆ ಪರಿಹಾರವನ್ನು ನೀಡುತ್ತದೆ. ಈ ಬಜೆಟ್ನಲ್ಲಿ ರೈತರಿಗಾಗಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮೋದಿ ಕೊಂಡಾಡಿದರು. (ಏಜೆನ್ಸೀಸ್)
ಅತ್ಯಂತ ಕಡಿಮೆ ಅವಧಿಯಲ್ಲಿ ಬಜೆಟ್ ಮಂಡನೆ! ಇಲ್ಲಿದೆ ವಿತ್ತ ಸಚಿವರ ಹಿಂದಿನ ದಾಖಲೆಗಳ ಕಂಪ್ಲೀಟ್ ವಿವರ…
ಲಕ್ಷದ್ವೀಪ ಪ್ರವಾಸಿ ತಾಣವಾಗಿ ಅಭಿವೃದ್ಧಿ; ಪ್ರವಾಸೋದ್ಯಮಕ್ಕೆ ರಾಜ್ಯಗಳಿಗೆ ಬಡ್ಡಿ ರಹಿತ ಸಾಲ