ನವದೆಹಲಿ: ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳನ್ನು ತಾಂತ್ರಿಕವಾಗಿ ಸಬಲರನ್ನಾಗಿಸಿ, ಶೈಕ್ಷಣಿಕ ಅಂತರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಯೋಜನೆಯನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರ ಸಚಿವಾಲಯದ ಅಧೀನದಲ್ಲಿ ನ್ಯಾಷನಲ್ ಎಜ್ಯುಕೇಷನ್ ಸೊಸೈಟಿ ಚಾರ್ ಟೆಬಲ್ ಸ್ಟೂಡೆಂಟ್ಸ್ “ಅಮೆಜಾನ್ ಪ್ಯೂಚರ್ ಇಂಜಿನಿಯರ್ ಪ್ರೋಗ್ರಾಮ್’ ಎನ್ನುವ ವಿಶಿಷ್ಟ ಯೋಜನೆಯನ್ನು ಜಾರಿಗೆ ತಂದಿದೆ.
2022ರಲ್ಲಿ ಈ ಯೋಜನೆಯ ಮೊದಲ ಹಂತ ಜಾರಿಗೊಂಡು, 2 ದಿನದ ಕಾರ್ಯಾಗಾರವನ್ನು ತಾಂತ್ರಿಕ ಸೌಲಭ್ಯ ಹೊಂದಿದ್ದ ಶಾಲೆಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಾಗಾರದಲ್ಲಿ ಕಂಪ್ಯೂಟರ್ನ ಮೂಲಭೂತ ಪಠ್ಯಗಳಾದ ಕೋಡಿಂಗ್, ಲೂಪ್ಸ್, ಸುರತ ವೇದಿಕೆಗಳಲ್ಲಿ ಬ್ಲಾಕ್ ಪ್ರೋಗ್ರಾಮಿಂಗ್ ಬಳಸುವ ಬಗೆಯನ್ನು ಕುರಿತು ಮಾಹಿತಿ ನೀಡಲಾಗಿತ್ತು.
ಇದೀಗ ಯೋಜನೆಯ 2ನೇ ಹಂತವನ್ನು ಇತ್ತಿಚೇಗೆ ಬುಡಕಟ್ಟು ವ್ಯವಹಾರ ಕಾರ್ಯದರ್ಶಿ ಅನಿಲ್ ಕುಮಾರ್ ಜಾ ಉದ್ಘಾಟಿಸಿದ್ದು, 6 ರಾಜ್ಯಗಳ 54 ಏಕಲವ್ಯ ಮಾಡೆಲ್ ರೆಸಿಡೆನ್ಸಿಯಲ್ ಶಾಲೆ(ಇಎಂಆರ್ಎಸ್)ಗಳಲ್ಲಿ ಪ್ರಾಯೋಗಿಕವಾಗಿ ಅನ್ವಯವಾಗಲಿದೆ. ಯೋಜನೆಯ ಸಲತೆಯ ಆಧಾರದ ಮೇಲೆ ದೇಶಾದ್ಯಂತ ಇರುವ ಬುಡುಕಟ್ಟು ಶಾಲೆಗಳಿಗೆ ವಿಸ್ತರಿಸಲಾಗುವುದು. 2ನೇ ಹಂತದ ಭಾಗವಾಗಿ ಅಡ್ವಾಂಸ್ಡ್ ಬ್ಲಾಕ್ ಪ್ರೋಗ್ರಾಮಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಿಷಯಗಳು ಪಠ್ಯಕ್ರಮದಲ್ಲಿ ಸೇರ್ಪಡೆಗೊಂಡಿವೆ.
ಮುಂಬರುವ ಬುಡಕಟ್ಟು ಪೀಳಿಗೆಯು ತಾಂತ್ರಿಕ ಅವಕಾಶವನ್ನು ಬಳಸಿಕೊಳ್ಳಲು ಅಮೆಜಾನ್ ಪ್ಯೂಚರ್ ಇಂಜಿನಿಯರ್ ಪ್ರೋಗ್ರಾಮ್ ಸುಸಜ್ಜಿತ ವೇದಿಕೆಯಾಗಿದ್ದು, ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರದಲ್ಲಿ ಯಶಸ್ಸು ಕಾಣಲು ಸಹಕಾರಿಯಾಗಲಿದೆ ಎಂದು ಕೇಂದ್ರ ಬುಡಕಟ್ಟು ವ್ಯವಹಾರ ಸಚಿವ ಅರ್ಜುನ್ ಮುಂಡ ಅಭಿಪ್ರಾಯಪಟ್ಟಿದ್ದಾರೆ.
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಯೋಜನೆ ಜಾರಿಯಾಗಲಿದ್ದು, 8 ಹಾಗೂ 9ನೇ ತರಗತಿಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ನ ಮೂಲಭೂತ ಅಂಶಗಳ ಪಠ್ಯ ಇರಲಿದ್ದು, 10ನೇ ತರಗತಿ ವಿದ್ಯಾರ್ಥಿಗಳಿಗೆ ಸಿಬಿಎಸ್ಇ ಕೌಶಲಗಳೊಟ್ಟಿಗೆ ಆಟಿಫಿಷಿಯಲ್ ಇಂಟೆಲಿಜೆನ್ಸ್ ಪಾಠಗಳು ಇರಲಿವೆ.