ಬೆಂಗಳೂರು: ಸಾರ್ವಜನಿಕರು ಸಂಚಾರ ನಿಯಮ ಉಲ್ಲಂಘಿಸಿದರೆ ಪೊಲೀಸರು ಅಡ್ಡಗಟ್ಟಿ ಕೇಸು ದಾಖಲಿಸಿ ದಂಡ ವಿಧಿಸುತ್ತಾರೆ. ಆದರೆ ಪೊಲೀಸರೇ ಸಂಚಾರ ನಿಯಮ ಉಲ್ಲಂಘಿಸಿದರೆ ಹೇಗೆ? ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದರಿಂದ ಇದೀಗ ಮಹಿಳಾ ಪಿಎಸ್ಐ ಒಬ್ಬರ ಮೇಲೆ ಕೇಸು ದಾಖಲಿಸಿ ದಂಡ ವಿಧಿಸಲಾಗಿದೆ.
ದ್ವಿಚಕ್ರವಾಹನದಲ್ಲಿ ಹಿಂಬದಿ ಸವಾರರಾಗಿ ಸಂಚರಿಸುತ್ತಿದ್ದ ಮಹಿಳಾ ಸಬ್ ಇನ್ಸ್ಟೆಕ್ಟರ್ ಒಬ್ಬರು ಹೆಲ್ಮೆಟ್ ಧರಿಸದೆ ಇರುವುದನ್ನು ಗಮನಿಸಿದ್ದ ವ್ಯಕ್ತಿಯೊಬ್ಬರು ಅದರ ಫೋಟೋ ಹಾಗೂ ವಿಡಿಯೋ ಸಮೇತ ಟ್ವೀಟ್ ಮಾಡಿದ್ದರು. ಅಲ್ಲದೆ, “ಸ್ವಿಗ್ಗಿ, ಜೊಮಾಟೋ, ಕೊರಿಯರ್ ಹುಡುಗರನ್ನು ಅಡ್ಡಗಟ್ಟುವ ನಗರ ಸಂಚಾರ ಪೊಲೀಸರಿಗೆ ಇವರೇಕೆ ಕಾಣುತ್ತಿಲ್ಲ?” ಎಂದೂ ಪ್ರಶ್ನಿಸಿದ್ದರು.
ಡಿಜಿಪಿ, ಬೆಂಗಳೂರು ಟ್ರಾಫಿಕ್ ಪೊಲೀಸ್ ಹಾಗೂ ಕಬ್ಬನ್ಪಾರ್ಕ್ ಸಂಚಾರ ಪೊಲೀಸರನ್ನು ಮೆನ್ಷನ್ ಮಾಡಿದ್ದ ಈ ಟ್ವೀಟನ್ನು ಸಾವಿರಾರು ಮಂದಿ ನೋಡುತ್ತಿದ್ದಂತೆ ಎಚ್ಚೆತ್ತುಕೊಂಡ ಕಬ್ಬನ್ಪಾರ್ಕ್ ಸಂಚಾರ ಪೊಲೀಸರು ಸಂಬಂಧಿತ ಪಿಎಸ್ಐ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಿಧಿಸಿದ್ದಾರೆ.
ಸ್ವಿಗ್ಗಿ, ಜೊಮಾಟೋ, ಕೊರಿಯರ್ ಹುಡುಗರನ್ನು ಅಡ್ಡಗಟ್ಟುವ ನಗರ ಸಂಚಾರ ಪೊಲೀಸರಿಗೆ ಇವರೇಕೆ ಕಾಣುತ್ತಿಲ್ಲ?@DgpKarnataka @blrcitytraffic @cparktrafficps pic.twitter.com/Bl3h7thOrk
— KGM Gowda (@KGManjegowda) May 16, 2023