ಜೊಹಾನೆಸ್ರ್ಬಗ್: ಚಿಕ್ಕ ವಿಮಾನವೊಂದು ಹಾರಾಟದಲ್ಲಿರುವಾಗ ಮಾರ್ಗ ಮಧ್ಯೆ ಕಾಕ್ಪಿಟ್ನಲ್ಲಿ ವಿಷ ಸರ್ಪವೊಂದು ಕಾಣಿಸಿಕೊಂಡರೂ ಧೃತಿಗೆಡದ ಪೈಲಟ್ ಸಮಯಪ್ರಜ್ಞೆ ಮೆರೆದು ವಿಮಾನವನ್ನು ಸುರತವಾಗಿ ಇಳಿಸಿದ ಘಟನೆಯೊಂದು ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ವಿಮಾನದ ಪೈಲಟ್ ರುಡಾಲ್ಫ್ ಎರಸ್ಮಸ್ ತನ್ನ ಸಾಹಸಿ ಕೃತ್ಯದಿಂದಾಗಿ ಎಲ್ಲರ ಮನಗೆದ್ದು ಹೀರೋ ಆಗಿದ್ದಾರೆ.
ಎರಸ್ಮಸ್ ಕಳೆದ ಐದು ವರ್ಷಗಳಿಂದ ಪೈಲಟ್ ವೃತ್ತಿಯಲ್ಲಿದ್ದಾರೆ. ಸೋಮವಾರ ಬೆಳಿಗ್ಗೆ ನಾಲ್ಕು ಪ್ರಯಾಣಿಕರ ವಿಮಾನವನ್ನು ಚಲಾಯಿಸುತ್ತಿದ್ದಾಗ ಸರ್ಪ ಕಾಣಿಸಿಕೊಂಡಿದೆ. ಆದರೆ ಅದರಿಂದ ವಿಚಲಿತರಾಗಿಲ್ಲ. ವಿಷಸರ್ಪ ನೋಡ ನೋಡುತ್ತಲೇ ಅದು ಸೀಟಿನ ಕೆಳಗೆ ಸರಿದು ಅವಿತುಕೊಂಡಿತು. ನಂತರ ತಾನು ವಿಮಾನವನ್ನು ಯಾವುದೇ ತೊಂದರೆಯಿಲ್ಲದೆ ಲ್ಯಾಂಡ್ ಮಾಡಿದ್ದನ್ನು ಎರಸ್ಮಸ್ ವಿವರಿಸಿದ್ದಾರೆ.
ವಿಮಾನ ವೋರ್ಸಸ್ಟರ್ನಿಂದ ನೆಲ್ಸ್ಪ್ರೂಟ್ಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಸೋಮವಾರದ ಹಾರಾಟಕ್ಕೂ ಮುನ್ನ ಪರಿಶೀಲನೆ ನಡೆಸುವ ವೇಳೆ, ಭಾನುವಾರ ಮಧ್ಯಾಹ್ನ ವಿಮಾನದ ಕೆಳಗೆ ಕೇಪ್ ಕೋಬ್ರಾವೊಂದನ್ನು ಗಮನಿಸಿದ್ದಾಗಿ ವೋರ್ಸಸ್ಟರ್ ಏರ್ಫೀಲ್ಡ್ನ ಸಿಬ್ಬಂದಿ ಹೇಳಿದ್ದರು. ಹಿಡಿಯ ಬೇಕೆನ್ನುವಷ್ಟರಲ್ಲಿ ಅದು ಎಂಜಿನ್ ಕೌಲಿಂಗ್ ಪ್ರದೇಶವನ್ನು ಹೊಕ್ಕಿತ್ತು. ಕೌಲಿಂಗ್ ತೆರೆದು ಎಷ್ಟೇ ಹುಡುಕಿದರೂ ಅದು ಪತ್ತೆಯಾಗಿರಲಿಲ್ಲ. ಅದು ಹೊರಟುಹೋಗಿರಬಹುದೆಂದು ಎಲ್ಲರೂ ಭಾವಿಸಿದ್ದು ಹೀಗಾಗಿ ವಿಮಾನ ಸಂಚಾರ ಬೆಳೆಸಿತ್ತು ಎನ್ನಲಾಗಿದೆ. (ಏಜೆನ್ಸೀಸ್)