More

    ಸರಿಯಾಗಿ ಕೆಲಸ ಮಾಡದಿದ್ದರೆ ಎತ್ತಂಗಡಿ!

    ಶಿರಹಟ್ಟಿ: ಸರ್ಕಾರದ ಸೌಲಭ್ಯಗಳನ್ನು ಕ್ಷೇತ್ರದ ಜನರಿಗೆ ತಲುಪಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು. ನಿರ್ಲಕ್ಷ್ಯಾಡಿದರೆ ಮುಲಾಜಿಲ್ಲದೆ ತಾಲೂಕಿನಿಂದ ಎತ್ತಂಗಡಿ ಮಾಡಲಾಗುತ್ತದೆ…
    ಪಟ್ಟಣದ ತಾಪಂ ಸಾಮರ್ಥ್ಯ ಸೌಧದಲ್ಲಿ ಶನಿವಾರ ಆಯೋಜಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ರಾಮಣ್ಣ ಲಮಾಣಿ ಅವರು ಅಧಿಕಾರಿಗಳಿಗೆ ನೀಡಿದ ಎಚ್ಚರಿಕೆ ಇದು.
    ‘ಕೃಷಿ ಇಲಾಖೆಯ ಸೌಲಭ್ಯಗಳು ರೈತರಿಗೆ ಸರಿಯಾಗಿ ದೊರಕುತ್ತಿಲ್ಲ. ಸಿಬ್ಬಂದಿ ಮನಬಂದಂತೆ ವರ್ತಿಸುತ್ತಿದ್ದಾರೆ. ಅದರಲ್ಲೂ ಕಳೆದ 10 ವರ್ಷಗಳಿಂದ ಬೇರು ಬಿಟ್ಟಿರುವ ಕೃಷಿ ಇಲಾಖೆ ಅಧೀಕ್ಷಕ ವೈ.ಕೆ. ಬಂಗಾರಿ ಅವರು ಏಜೆನ್ಸಿ ಮೂಲಕ ಅವ್ಯವಹಾರ ನಡೆಸುತ್ತಿರುವುದು ಇಡೀ ತಾಲೂಕಿನಲ್ಲಿ ಜಗಜ್ಜಾಹೀರಾಗಿದೆ. ಅಧಿಕಾರಿಯಾಗಿ ಈ ವಿಷಯ ನಿಮ್ಮ ಗಮನಕ್ಕೆ ಬಂದಿಲ್ಲವೇ’ ಎಂದು ಸಹಾಯಕ ಕೃಷಿ ನಿರ್ದೇಶಕ ಮಹೇಶಬಾಬು ಅವರನ್ನು ತರಾಟೆಗೆ ತೆಗೆದುಕೊಂಡರು.
    ಪ್ರತಿಕ್ರಿಯಿಸಿದ ಕೃಷಿ ಅಧಿಕಾರಿ ಮಹೇಶಬಾಬು, ಅಂಥ ಯಾವ ಅವ್ಯವಹಾರದ ಕೆಲಸ ನಡೆದಿಲ್ಲ ಎಂದು ಹೇಳುತ್ತಿದ್ದಂತೆಯೇ ಮಧ್ಯಪ್ರವೇಶಿಸಿದ ತಾಪಂ ಇಒ. ಡಾ. ಎನ್.ಎಚ್. ಓಲೇಕಾರ, ‘ಶಾಸಕರು ಹೇಳುವುದರಲ್ಲಿ ಸತ್ಯ ಅಡಗಿದೆ. ಸರ್ಕಾರಿ ನೌಕರನಾಗಿರುವ ಅಧೀಕ್ಷಕ ಕೆಲವೊಂದು ಏಜೆನ್ಸಿಗಳೊಂದಿಗೆ ಶಾಮೀಲಾಗಿ ರೈತರಿಗೆ ನೀರಾವರಿ ಪರಿಕರ ಹಾಗೂ ಸಲಕರಣೆ ವಿತರಿಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಆದ್ದರಿಂದ ಕಳೆದ 10 ವರ್ಷಗಳಿಂದ ತಳ ಊರಿರುವ ಅಧೀಕ್ಷಕ ಬಂಗಾರಿ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಲು ಠರಾವು ಬರೆಸಲಾಗುತ್ತದೆ’ ಎಂದರು.
    ತಹಸೀಲ್ದಾರ್ ಜೆ.ಬಿ. ಮಜ್ಜಗಿ, ಗ್ರೇಡ್-2 ತಹಸೀಲ್ದಾರ್ ಕೆ.ಎಸ್. ಮಾನೆ, ಶಿರಹಟ್ಟಿ, ಲಕ್ಷ್ಮೇಶ್ವರ ತಾಪಂ. ಇಒ. ಡಾ. ಎನ್.ಎಚ್. ಓಲೇಕಾರ, ಡಾ. ಆರ್.ವೈ. ಗುರಿಕಾರ ಇದ್ದರು.

    ಗೈರಾದವರ ವಿರುದ್ಧ ಗರಂ: ಅರಣ್ಯ ಇಲಾಖೆ ಮೇಲಿನ ಚರ್ಚೆ ವೇಳೆ ಮಾತನಾಡಿದ ಶಾಸಕ ರಾಮಣ್ಣ ಲಮಾಣಿ, ‘ಬಹುತೇಕ ಸಭೆಗಳಿಗೆ ಗೈರಾಗಿ ಬಚಾವ್ ಆಗೂದು ಕೆಲವು ಅಧಿಕಾರಿಗಳ ಕೆಲಸವಾಗಿದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ನೆಡುತೋಪು ನಿರ್ವಹಣೆ ಬಗ್ಗೆ ಮಾಹಿತಿ ನೀಡುತ್ತೀರಿ ಆದರೆ, ಒಮ್ಮೆಯಾದರೂ ಯಾವುದಾದರೂ ಕಾಮಗಾರಿ ಪೂಜಾಕ್ಕೆ ಕರದೀರಾ? ಸರ್ಕಾರದ ಹಣ ಸದುಪಯೋಗವಾದರೆ ಸಾರ್ಥಕ. ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಎಚ್ಚರಿಕೆಯಿಂದ ಕೆಲಸ ಮಾಡಿ’ ಎಂದು ಅರಣ್ಯಾಧಿಕಾರಿಗಳಿಗೆ ಶಾಸಕರು ತಾಕೀತು ಮಾಡಿದರು.
    ಎಲ್ಲಿದ್ದಾರೆ ಬಿಇಒ?: ಶಿಕ್ಷಣ ಇಲಾಖೆಯ ಪ್ರಗತಿ ಕುರಿತು ಮಾಹಿತಿ ನೀಡಲು ಮುಂದಾದ ಬಿಆರ್​ಸಿ ಅಧಿಕಾರಿ ನದಾಫ್ ಅವರಿಗೆ,‘ಎಲ್ಲಿದ್ದಾರೀ ಬಿಇಒ..? ಇವತ್ತ್ಯಾಕ ಸಭೆಗೆ ಬಂದಿಲ್ಲ’ ಎಂದು ಪ್ರಶ್ನಿಸಿದ ಶಾಸಕ ರಾಮಣ್ಣ, ಕೆಲ ಅವ್ಯವಹಾರಗಳಲ್ಲಿ ಭಾಗಿಯಾಗಿರುವ ಹೆಬ್ಬಾಳ, ಮಾಗಡಿ, ಸೂರಣಗಿ ಸೇರಿದಂತೆ ಐವರು ಶಿಕ್ಷಕರನ್ನು ಕೂಡಲೇ ವರ್ಗಾವಣೆ ಮಾಡುವಂತೆ ಸೂಚಿಸಿದರೂ ಬಿಇಒ ವರು ಯಾವುದೇ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿತನ ತೋರುತ್ತಿದ್ದಾರೆ. ನನ್ನ ಮಾತಿಗೆ ಮನ್ನಣೆ ಇಲ್ಲವೇನು? ಎಂದು ಹರಿಹಾಯ್ದರು.

    ಸಮಾಜ ಕಲ್ಯಾಣ, ಲೋಕೋಪಯೋಗಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ವತಿಯಿಂದ ಎಸ್ಸಿ, ಎಸ್ಟಿ ಜನಾಂಗದ ಅಭಿವೃದ್ಧಿಗಾಗಿ ಬಿಡುಗಡೆಯಾದ ಅನುದಾನ ಅವರಿಗಾಗಿ ಸದ್ಬಳಕೆಯಾಗಬೇಕು. ಯಾವುದೇ ಕಾರಣಕ್ಕೂ ಮಾರ್ಚ್ ಅಂತ್ಯದ ವೇಳೆಗೆ ಸರ್ಕಾರದಿಂದ ದೊರೆತ ಅನುದಾನ ವಾಪಸ್ ಆಗದಂತೆ ಎಚ್ಚರಿಕೆ ವಹಿಸಬೇಕು.
    | ರಾಮಣ್ಣ ಲಮಾಣಿ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts