ಆಂಟಿಗುವಾ: ನಾಯಕ ಯಶ್ ಧುಲ್ (110) ಹಾಗೂ ಉಪನಾಯಕ ಶೇಕ್ ರಶೀದ್ (94) ಅಮೋಘ ಬ್ಯಾಟಿಂಗ್ ನೆರವಿನಿಂದ ಅಂಡರ್ 19 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಬಗ್ಗುಬಡಿಯುವ ಮೂಲಕ ಟೀಮ್ ಇಂಡಿಯಾ ಸತತ ನಾಲ್ಕನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ವಿಶ್ವಕಪ್ ಟ್ರೋಫಿಗಾಗಿ ಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಭಾರತ ಎದುರಿಸಲಿದೆ.
ಆಂಟಿಗುವಾದ ಕೂಲಿಡ್ಜ್ ಕ್ರಿಕೆಟ್ ಗ್ರೌಂಡ್ನಲ್ಲಿ ಬುಧವಾರ ನಡೆದ ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 290 ರನ್ ಕಲೆಹಾಕಿತು.
ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಆಂಗ್ಕ್ರಿಶ್ ರಘುವಂಶಿ (6) ಮತ್ತು ಹರ್ನೂರ್ ಸಿಂಗ್ (16) ಉತ್ತಮ ಅಡಿಪಾಯ ಹಾಕುವಲ್ಲಿ ವಿಫಲವಾದರು. ಕೇವಲ 37 ರನ್ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿದ್ದ ಭಾರತಕ್ಕೆ ಮೂರನೇ ಕ್ರಮಾಂಕದಲ್ಲಿ ಬಂದ ಶೇಕ್ ರಶೀದ್ ಮತ್ತು ನಾಯಕ ಯಶ್ ಧುಲ್ ಆಸರೆಯಾದರು. ರಶೀದ್ ಅವರು 8 ಬೌಂಡರಿ ಮತ್ತು 1 ಸಿಕ್ಸರ್ ನೆರವಿನೊಂದಿಗೆ 108 ಎಸೆತಗಳಲ್ಲಿ 94 ರನ್ ಗಳಿಸಿ ಶತಕ ವಂಚಿತರಾದರು. ಆದರೆ, ಉತ್ತಮ ಜತೆಯಾಟದೊಂದಿಗೆ ತಂಡದ ಮೊತವನ್ನು 200ರ ಗಡಿ ದಾಟಿಸಿದರು. ರಶೀದ್ ಔಟ್ ಆಗುವ ವೇಳೆ ತಂಡದ ಸ್ಕೋರ್ 241 ಆಗಿತ್ತು.
ಇತ್ತ ನಾಯಕನ ಜವಬ್ದಾರಿಯುತ ಆಟ ಮುಂದುವರಿಸಿದ ಯಶ್ ಧುಲ್ 110 ಎಸೆತಗಳಲ್ಲಿ 10 ಬೌಂಡರಿ ಮತ್ತು 1 ಸಿಕ್ಸರ್ ನೆರವಿನೊಂದಿಗೆ 110 ರನ್ ಕಲೆಹಾಕುವ ಮೂಲಕ ಶತಕ ಸಂಭ್ರಮಿಸಿದರು. ಬಳಿಕ ರನ್ ಕದಿಯುವ ಆತುರದಲ್ಲಿ ರನೌಟ್ ಆಗಿ ನಿರ್ಗಮಿಸಿದರು. ಆದರೆ, ಅಷ್ಟರಲ್ಲಾಗಲೇ ತಂಡದ ಸ್ಕೂರ್ 250ರ ಗಡಿ ದಾಟಿತ್ತು. ಉಳಿದಂತೆ ರಾಜವರ್ಧನ್ ಹಂಗರಗೇಕರ್ 13 ರನ್ ಗಳಿಸಿದರೆ, ನಿಶಾಂತ್ ಸಿಂಧು (12*) ಮತ್ತು ದಿನೇಶ್ ಬನ (20*) ರನ್ ಕಾಣಿಕೆ ನೀಡಿ ಅಜೇಯರಾಗಿ ಉಳಿದರು.
ಆಸ್ಟ್ರೇಲಿಯಾ ಪರ ಜ್ಯಾಕ್ ನಿಬೆಟ್ ಮತ್ತು ವಿಲಿಯಂ ಸಾಲ್ಜಮನ್ ತಲಾ ಎರಡು ವಿಕೆಟ್ ಪಡೆದರು. ಆದರೆ, ಉಳಿದ ಬೌಲರ್ಗಳು ಕೂಡ ಟೀಮ್ ಇಂಡಿಯಾವನ್ನು ಕಟ್ಟಿಹಾಕುವಲ್ಲಿ ವಿಫಲವಾದರು.
ಟೀಮ್ ಇಂಡಿಯಾ ನೀಡಿದ 291 ರನ್ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 41.5 ಓವರ್ಗಳಲ್ಲಿ 194 ರನ್ಗೆ ಸರ್ವಪತನ ಕಂಡಿತು. ಆಸಿಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಟೀಗ್ ವೈಲ್ಲಿ 3 ರನ್ಗೆ ವಿಕೆಟ್ ಒಪ್ಪಿಸುವ ಮೂಲಕ ಆರಂಭಿಕ ಆಘಾತ ನೀಡಿದರು. ಕ್ಯಾಂಪ್ಬೆಲ್ ಕೆಲ್ಲವೇ (30), ಕೋರೆ ಮಿಲ್ಲರ್ (38) ಮತ್ತು ಲಾಚ್ಲಾನ್ ಶಾ (51) ಬಿಟ್ಟರೆ ಉಳಿದ ಯಾವ ಆಟಗಾರನು ಕೂಡ ಉತ್ತಮ ನಿರ್ವಹಣೆ ತೋರಲಿಲ್ಲ.
ಟೀಮ್ ಇಂಡಿಯಾ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ವಿಕ್ಕಿ ಒಸ್ತಾವಲ್ 3 ವಿಕೆಟ್ ಕಬಳಿಸಿದರೆ, ಕಳೆದ ಪಂದ್ಯದ ಹೀರೋ ರವಿ ಕುಮಾರ್ ಮತ್ತು ನಿಶಾಂತ್ ಸಿಂಧು ತಲಾ ಎರಡು ವಿಕೆಟ್ ಉರುಳಿಸಿದರು. ಉಳಿದಂತೆ ಕುಶಾಲ್ ತಂಬೆ ಮತ್ತು ಆಂಗ್ಕ್ರಿಶ್ ರಘುವಂಶಿ ತಲಾ ಒಂದೊಂದು ವಿಕೆಟ್ ಕಬಳಿಸಿದರು. (ಏಜೆನ್ಸೀಸ್)
India become the first team in #U19CWC history to qualify for four consecutive finals 👏 pic.twitter.com/KNVU6tEPKT
— ICC (@ICC) February 2, 2022
ಈ ಫೋಟೋ ನಕಲಿ! ಕೆಟ್ಟದಾಗಿ ತಿರುಚಿದ ಫೋಟೋ ವಿರುದ್ಧ ಗುಡುಗಿದ ನಟಿ ಮಾಳವಿಕ ಮೋಹನನ್
ಪಬ್ಜಿಗೆ ದಾಸನಾಗಿ ಕುಟುಂಬವನ್ನೆ ಕೊಂದ ಬಾಲಕನ ಮಾತು ಕೇಳಿ ಪಾಕ್ ಪೊಲೀಸರೇ ಶಾಕ್! PUBG ಬ್ಯಾನ್ಗೆ ಆಗ್ರಹ
ಶ್ರೀಲಂಕಾ ವಿರುದ್ಧ ಬೆಂಗಳೂರಿನಲ್ಲಿ ಅಹರ್ನಿಶಿ ಟೆಸ್ಟ್, ಪಿಂಕ್ ಬಾಲ್ ಪಂದ್ಯಕ್ಕೆ ಚಿನ್ನಸ್ವಾಮಿ ಆತಿಥ್ಯ