ಬೆಂಗಳೂರು: ನಟ, ನಿರ್ದೇಶಕ ಮತ್ತು ನಿರ್ವಪಕ ಲೂಸಿಯಾ ಪವನ್ ಕುಮಾರ್, ಕನ್ನಡದ ಜತೆಗೆ ಪಕ್ಕದ ಟಾಲಿವುಡ್ನಲ್ಲಿಯೂ ಪರಿಚಿತ. ಕಳೆದ ವರ್ಷ ತಮ್ಮದೇ ‘ಯೂ ಟರ್ನ್’ ಚಿತ್ರವನ್ನು ಸಮಂತಾ ಅಕ್ಕಿನೇನಿ ಅಭಿನಯದಲ್ಲಿ ತೆಲುಗಿಗೆ ರೀಮೇಕ್ ಮಾಡಿದ್ದರು. ಇದೀಗ, ತೆಲುಗು ನೆಲದಲ್ಲಿ ಮತ್ತೊಂದು ಸಾಹಸಕ್ಕೆ ಪವನ್ ಮುಂದಾಗಿದ್ದಾರೆ. ಈ ಬಾರಿ ವೆಬ್ಸಿರೀಸ್ ನಿರ್ದೇಶನಕ್ಕಿಳಿದಿದ್ದಾರೆ.
‘ಕುಡಿ ಯಡಮೈತೆ’ ಶೀರ್ಷಿಕೆಯ ವೆಬ್ಸಿರೀಸ್ನಲ್ಲಿ ‘ಹೆಬ್ಬುಲಿ’ ಬೆಡಗಿ ಅಮಲಾ ಪೌಲ್ ಮುಖ್ಯಭೂಮಿಕೆಯಲ್ಲಿದ್ದರೆ, ಅವರಿಗೆ ರಾಹುಲ್ ವಿಜಯ್ ಜತೆಯಾಗಿದ್ದಾರೆ. ಅಷ್ಟೇ ಅಲ್ಲ ಆಕ್ಷನ್, ಕಟ್ ಹೇಳುವುದರ ಜತೆಗೆ ವೆಬ್ಸಿರೀಸ್ನಲ್ಲಿ ಪ್ರಮುಖ ಪಾತ್ರವೊಂದಕ್ಕೂ ಪವನ್ ಬಣ್ಣ ಹಚ್ಚುತ್ತಿದ್ದಾರೆ.
ಅಂದಹಾಗೆ, ‘ಕುಡಿ ಯಡಮೈತೆ’ ಸೈನ್ಸ್ ಫಿಕ್ಷನ್ ಮತ್ತು ಥ್ರಿಲ್ಲರ್ ಶೈಲಿಯ ವೆಬ್ಸಿರೀಸ್. ಅಲ್ಲು ಅರವಿಂದ್ ಒಡೆತನದ ‘ಆಹಾ’ ಓಟಿಟಿಗೋಸ್ಕರ ಈ ವೆಬ್ಸಿರೀಸ್ ಮಾಡಲಾಗುತ್ತಿದೆ. ಒಟ್ಟು ಎಂಟು ಎಪಿಸೋಡ್ಗಳ ಈ ವೆಬ್ಸರಣಿಯ ಚಿತ್ರೀಕರಣ ಈಗಾಗಲೇ ಹೈದರಾಬಾದ್ನಲ್ಲಿ ಶುರುವಾಗಿದ್ದು, ಶೇ. 25 ಭಾಗದ ಶೂಟಿಂಗ್ ಮುಗಿದಿದೆ. ಜನವರಿ ವೇಳೆಗೆ ಶೂಟಿಂಗ್ ಮುಗಿದು, ಮಾರ್ಚ್ ವೇಳೆಗೆ ಬಿಡುಗಡೆ ಆಗಲಿದೆಯಂತೆ.
ಈ ಮೊದಲು ನೆಟ್ಫ್ಲಿಕ್ಸ್ನ ‘ಲೈಲಾ’ ಎಂಬ ವೆಬ್ಸಿರೀಸ್ನ ಕೆಲ ಎಪಿಸೋಡ್ಗಳಿಗೆ ಪವನ್ ನಿರ್ದೇಶನ ಮಾಡಿದ್ದರು. ಇದೀಗ ‘ಕುಡಿ ಯಡಮೈತೆ’ಯ ಎಲ್ಲ ಎಪಿಸೋಡ್ಗಳನ್ನು ಪವನ್ ನಿರ್ದೇಶಿಸಲಿದ್ದಾರೆ. ಇದರ ಜತೆಗೆ ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಸಿನಿಮಾದಲ್ಲಿಯೂ ಪವನ್ ನಟಿಸುತ್ತಿದ್ದಾರೆ.