More

    9,600 ಪಿಯು ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ

    ಬೆಳಗಾವಿ: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಅವರ ಸಮಗ್ರ ಕಲಿಕೆಗೆ ಪೂರಕವಾದ ಪಠ್ಯ ಆಧಾರಿತ ವಿಶೇಷ ಪುಸ್ತಕಗಳನ್ನು ತಯಾರಿಸಿ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದರು.

    ನಗರದಲ್ಲಿ ಮಂಗಳವಾರ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರಾಧ್ಯಾಪಕ ಬಳಗ ಸಿದ್ಧಪಡಿಸಿದ ಪಠ್ಯ ಆಧಾರಿತ ಕಲಾ, ವಾಣಿಜ್ಯ ಮತ್ತು ವಿಜ್ಞಾನದ ಪ್ರಮುಖ ವಿಷಯಗಳ ಇಂಗ್ಲಿಷ್ ಮಾಧ್ಯಮದ ಗ್ರಂಥಗಳನ್ನು ನಗರದ ಎಲ್ಲ ಪಿಯುಸಿ ಕಾಲೇಜುಗಳಲ್ಲಿ ಕಲಿಯುತ್ತಿರುವ ಸುಮಾರು 9,600 ವಿದ್ಯಾರ್ಥಿಗಳಿಗೆ ಉಚಿತವಾಗಿ ತಲುಪಿಸುವ ಮಹತ್ವದ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

    ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥೈಸಿಕೊಳ್ಳಲು ಅನುಕೂಲವಾಗುವ ದೃಷ್ಟಿಯಿಂದ ಪುಸ್ತಕಗಳನ್ನು ವಿಶೇಷವಾಗಿ ತಯಾರಿಸಲಾಗಿದೆ. ಈ ಪ್ರಯೋಗ ಆರಂಭಿಕ ಹಂತವಾಗಿದ್ದು, ಮುಂಬರುವ ದಿನಗಳಲ್ಲಿ ಕನ್ನಡ ಮಧ್ಯಮದ ವಿದ್ಯಾರ್ಥಿಗಳಿಗೂ ಅನುಕೂಲವಾಗುವ ಗ್ರಂಥ ಪೂರೈಸಲಾಗುವುದು. ಭಾಷಾ ಅಧ್ಯಯನಕ್ಕೂ ಆದ್ಯತೆ ನೀಡಿ ಭಾಷಾ ಗ್ರಂಥ ನೀಡಲಾಗುವುದು. ಗುಣಮಟ್ಟದ ಬೋಧನೆಯಲ್ಲಿ ಶಿಕ್ಷಕರು ತೊಡಗಿಸಿಕೊಳ್ಳುವಂತೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

    ಶಾಸಕ ಅನಿಲ ಬೆನಕೆ ಮಾತನಾಡಿ, ಮಕ್ಕಳ ಶೈಕ್ಷಣಿಕ ಬೆಳವಣಿಗೆಯನ್ನು ಮುಂದಿಟ್ಟುಕೊಂಡು ಈ ಪ್ರಯತ್ನ ಮಾಡಲಾಗಿದೆ. ವಿದ್ಯಾರ್ಥಿಗಳು ಸದುಪಯೋಗ ಪಡೆದು ಶೈಕ್ಷಣಿಕ ಸಾಧನೆ ಮಾಡಬೇಕು. ಮುಂಬರುವ ದಿನಗಳಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಹೊಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು. ಅಧ್ಯಾಪಕರಾದ ಮಾಲತೇಶ ಪಾಟೀಲ, ಎಚ್.ಎಂ.ಮುರುಗೇಶ, ಅಶಿತೋಷ ಡೇವಿಡ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts