More

    ಹೆರಿಗೆಯಲ್ಲೂ ಗಿನ್ನೆಸ್ ವರ್ಲ್ಡ್ ರೆಕಾರ್ಡ್; 9 ಮಕ್ಕಳ ಹೆತ್ತಳು 27 ವರ್ಷದ ಮಹಾತಾಯಿ!

    ನವದೆಹಲಿ: ಒಂದೇ ಹೆರಿಗೆಯಲ್ಲಿ 9 ಮಕ್ಕಳಿಗೆ ಜನ್ಮ ನೀಡುವ ಮೂಲಕ 27 ವರ್ಷದ ಮಹಿಳೆಯೊಬ್ಬಳು ಗಿನ್ನೆಸ್​ ವರ್ಲ್ಡ್​ ರೆಕಾರ್ಡ್ಸ್​ನಲ್ಲಿ ಸ್ಥಾನ ಪಡೆದಿದ್ದಾಳೆ. ಈಕೆ ಒಂದೇ ಹೆರಿಗೆಯಲ್ಲಿ 5 ಹೆಣ್ಣು ಹಾಗೂ 4 ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

    ಆಫ್ರಿಕದ ಮಲಿ ಎಂಬಲ್ಲಿನ ಹಲಿಮಾ ಸಿಸ್ಸೆ ಹಾಗೂ ಅಬ್ದುಲ್​ ಖಾದರ್ ಅರ್ಬಿ ದಂಪತಿಗೆ ಈ 9 ಮಕ್ಕಳು ಜನಿಸಿದ್ದು, ತಾಯಿ ಮಾತ್ರವಲ್ಲದೆ ಎಲ್ಲ ಮಕ್ಕಳೂ ಆರೋಗ್ಯವಾಗಿವೆ. 19 ತಿಂಗಳ ಆರೈಕೆ ಬಳಿಕ ಕಳೆದ ವಾರವಷ್ಟೇ ಈ ಮಕ್ಕಳು ತಾಯಿಯೊಂದಿಗೆ ಮನೆ ಸೇರಿಕೊಂಡಿವೆ.

    ಅವಧಿಗೆ ಮೊದಲೇ ಅಂದರೆ 30ನೇ ವಾರದಲ್ಲಿ ಈ ಮಕ್ಕಳು ಜನಿಸಿದ್ದು, 2021ರ ಮೇ 4ರಂದು ಸಿಸೇರಿಯನ್​ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಆರಂಭದಲ್ಲಿ ಏಳು ಮಕ್ಕಳಿವೆ ಎಂದು ಗೊತ್ತಾಗಿದ್ದರೂ ಬಳಿಕ ಇನ್ನೆರಡು ಮಕ್ಕಳ ಇರುವು ತಿಳಿದು ವಿಶೇಷ ಕಾಳಜಿಯಿಂದ ಈ ಹೆರಿಗೆಯನ್ನು ಮಾಡಿಸಲಾಗಿದೆ. ಎಲ್ಲ ಮಕ್ಕಳು ಅರ್ಧದಿಂದ 1 ಕೆ.ಜಿ.ಯಷ್ಟು ತೂಕವಿದ್ದು, ಮೊರಕೊದಲ್ಲಿನ ವಿಶೇಷವಾದ ಫ್ಲ್ಯಾಟ್​ವೊಂದರಲ್ಲಿ ತಾಯಿ-ಮಕ್ಕಳನ್ನು ಇರಿಸಿ, ನರ್ಸ್​ಗಳ ನಿಗಾದಲ್ಲಿ ಆರೈಕೆ ಮಾಡಲಾಗಿದ್ದು, ಕಳೆದ ವಾರವಷ್ಟೇ ಅವರನ್ನು ಮನೆಗೆ ಕಳುಹಿಸಿಕೊಡಲಾಗಿದೆ. ಈ ಹೆರಿಗೆ ಸಂದರ್ಭದಲ್ಲಿ ವೈದ್ಯರು ಮತ್ತು ಇತರ ಪರಿಣತರು ಸೇರಿದಂತೆ 32 ಜನರು ಕಾಯನಿರ್ವಹಿಸಿದ್ದರು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

    ಒಂಬತ್ತೂ ಮಕ್ಕಳನ್ನು ಒಟ್ಟಿಗೆ ಮಲಗಿಸುವುದೇ ಒಂದು ಸಾಹಸ. ಮುದ್ದು ಮಾಡಿದರೆ ಮಾತ್ರ ಮಕ್ಕಳು ಮಲಗುತ್ತವೆ ಎಂದು ತಾಯಿ ತನ್ನ ಅನುಭವ ಹೇಳಿಕೊಂಡಿದ್ದಾಳೆ. ಆರಂಭದಲ್ಲಿ ಏಳು ಎಂಬುದು ಗೊತ್ತಾಗಿತ್ತು, ಅಲ್ಲಾ ನಮಗೆ 9 ಮಕ್ಕಳನ್ನು ದಯಪಾಲಿಸಿದ ಎಂದು ಮಕ್ಕಳ ತಂದೆ ಸಂತೋಷ ಹಂಚಿಕೊಂಡಿದ್ದಾರೆ.

    ಅಂದಹಾಗೆ ಈ ದಂಪತಿಗೆ ಈಗಾಗಲೇ 4 ವರ್ಷದ ಮಗಳೊಬ್ಬಳು ಇದ್ದಾಳೆ. ಈಗ ಈ 9 ಮಕ್ಕಳಿಂದ ಈ ದಂಪತಿಗೆ ಎರಡೇ ಹೆರಿಗೆಯಲ್ಲಿ ಹತ್ತು ಮಕ್ಕಳಾದಂತಾಗಿದೆ. ಈ ದಂಪತಿಯ ಹೆರಿಗೆಗೆ ಅಲ್ಲಿನ ಮಲಿ ಸರ್ಕಾರ ಕೂಡ ಮುತುವರ್ಜಿ ವಹಿಸಿತ್ತು.

    ಒಂದೇ ಹೆರಿಗೆಯಲ್ಲಿ ಅತ್ಯಧಿಕ ಜೀವಂತ ಮಕ್ಕಳನ್ನು ಹೊಂದಿದ ತಂದೆ ಎಂದು ಅಬ್ದುಲ್​ ಖಾದರ್​ಗೆ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್ಸ್​ ಸರ್ಟಿಫಿಕೇಟ್ ನೀಡಿದೆ. ಈ ಹಿಂದೆ ಅಂದರೆ 2009ರಲ್ಲಿ ಅಮೆರಿಕದ ನಾದ್ಯ ಸುಲೇಮಾನ್ ಎಂಬಾಕೆ ಒಂದೇ ಹೆರಿಗೆಯಲ್ಲಿ ಎಂಟು ಮಕ್ಕಳನ್ನು ಹೆತ್ತಿದ್ದಳು. ಈಗ 9 ಮಕ್ಕಳ ಜನನ ಇದುವರೆಗಿನ ದಾಖಲೆ ಎನ್ನಲಾಗಿದೆ. ಸಾಮಾನ್ಯವಾಗಿ ಅಧಿಕ ಮಕ್ಕಳು ಒಂದೇ ಹೆರಿಗೆಯಲ್ಲಿ ಜನಿಸಿದರೂ ಅವೆಲ್ಲವೂ ಕೆಲವು ಗಂಟೆಗಳ ಬಳಿಕ ಜೀವಂತ ಇರುವುದಿಲ್ಲ. ಆದರೆ ಇಲ್ಲಿ ಮಕ್ಕಳು ಜನಿಸಿ 19 ತಿಂಗಳಾಗಿದ್ದು, ಎಲ್ಲವೂ ಆರೋಗ್ಯವಾಗಿವೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್​ನವರು ಹೇಳಿದ್ದಾರೆ. –ಏಜೆನ್ಸೀಸ್

    ಮೂವರು ವಿವಾಹಿತ ಶಿಕ್ಷಕರ ನಡುವಿನ ಪ್ರೀತಿಗೆ ವಿದ್ಯಾರ್ಥಿ ಬಲಿ; ಇಬ್ಬಿಬ್ಬರೊಂದಿಗಿದ್ದ ಅಮ್ಮನ ಸಲುಗೆ ಮಗನಿಗೇ ಮುಳುವಾಯ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts