More

    9 ಗಂಟೆಗೆ ಪರೀಕ್ಷಾ ಕೇಂದ್ರಕ್ಕೆ ಬನ್ನಿ

    ಶಿವಮೊಗ್ಗ: ಜೂ. 18ರಂದು ನಡೆಯಲಿರುವ ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆಗೆ ಜಿಲ್ಲೆಯಲ್ಲಿ ಎಲ್ಲ 33 ಪರೀಕ್ಷಾ ಕೇಂದ್ರಗಳನ್ನ್ನು ಸ್ಯಾನಿಟೈಸ್ ಮಾಡಲಾಗಿದೆ. ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಬೆಳಗ್ಗೆ 9 ಗಂಟೆಯೊಳಗೆ ಪರೀಕ್ಷಾ ಕೇಂದ್ರದಲ್ಲಿ ಇರಬೇಕು.

    ಜಿಲ್ಲೆಯ ಎಲ್ಲೆಡೆ ಇನ್ನೂ ಖಾಸಗಿ ಬಸ್ ಸಂಚಾರ ಆರಂಭವಾಗದ ಕಾರಣ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ 137 ಮಾರ್ಗಗಳಲ್ಲಿ ಕೆಎಸ್​ಆರ್​ಟಿ ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದೆ. ತೀರ್ಥಹಳ್ಳಿ, ಸೊರಬ, ಆನವಟ್ಟಿ, ಶಿಕಾರಿಪುರದ ಹೆಚ್ಚಿನ ವಿದ್ಯಾರ್ಥಿಗಳು ಈ ಬಸ್ ಸೇವೆಗಳನ್ನು ಬಳಸಿಕೊಳ್ಳಲಿದ್ದಾರೆ.

    ಪ್ರತ್ಯೇಕ ವ್ಯವಸ್ಥೆ: ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಹೆಚ್ಚುವರಿಯಾಗಿ 2 ಕೊಠಡಿಗಳನ್ನು ಮೀಸಲಿರಿಸಲಾಗಿದೆ. ಕಂಟೇನ್ಮೆಂಟ್ ವಲಯಗಳಿಂದ ಬಂದ ವಿದ್ಯಾರ್ಥಿಗಳಿಗೆ ಕೆಮ್ಮು, ಶೀತ, ಜ್ವರ ಮತ್ತಿತರ ಆರೋಗ್ಯದ ಸಮಸ್ಯೆ ಇದ್ದರೆ ಅವರಿಗೆ ಈ ಮೀಸಲು ಕೊಠಡಿಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಡಿಡಿಪಿಯು ನಾಗರಾಜ ವಿ. ಕಾಗಲಕರ ತಿಳಿಸಿದ್ದಾರೆ.

    ಪ್ರತಿ ವಿದ್ಯಾರ್ಥಿಗೂ ಥರ್ಮಲ್ ಸ್ಕ್ರೀನಿಂಗ್​ಗೆ ಕಡ್ಡಾಯವಾಗಿದ್ದು, ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಿಗೆ ಕೈಗವಸು ಹಾಗೂ ಮಾಸ್ಕ್ ನೀಡಲಾಗುವುದು. ಪರಸ್ಪರ ಅಂತರ ಕಾಯ್ದುಕೊಂಡು ಪರೀಕ್ಷಾ ಕೇಂದ್ರದೊಳಕ್ಕೆ ಬಂದು ಅದೇ ಮಾದರಿಯಲ್ಲಿ ಕೇಂದ್ರದ ಹೊರಗೆ ಪ್ರತಿಯೊಬ್ಬರೂ ಹೋಗುವಂತೆ ನಿಗಾ ವಹಿಸಲು ಸೂಚನೆ ನೀಡಲಾಗಿದೆ.

    ವಿಶೇಷ ವ್ಯವಸ್ಥೆ: ತುಮರಿ ಭಾಗದ ವಿದ್ಯಾರ್ಥಿಗಳು ಪರೀಕ್ಷಾ ದಿನದಂದು ಸಾಗರದ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕೆ ಬರಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಅವರೆಲ್ಲರನ್ನೂ ಕೆಎಸ್​ಆರ್​ಟಿ ಬಸ್​ನಲ್ಲಿ ಜೂನ್ 17ರ ಸಂಜೆಯೇ ಸಾಗರಕ್ಕೆ ಕರೆತರಲಿದ್ದು, ಹಾಸ್ಟೆಲ್​ನಲ್ಲಿ ವಸತಿಗೆ ವ್ಯವಸ್ಥೆ ಮಾಡಲಾಗಿದೆ. ಜೂನ್ 18ರಂದು ಪರೀಕ್ಷೆ ಮುಗಿದ ಬಳಿಕ ಅವರನ್ನು ತುಮರಿಗೆ ಬಸ್​ನಲ್ಲಿ ಬಿಟ್ಟು ಬರಲಾಗುವುದು.

    ಬಂದವರು 791, ಹೋದವರು 373: ಲಾಕ್​ಡೌನ್ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬೇರೆ ಊರುಗಳಿಗೆ ಹೋಗಿದ್ದರೆ ಅವರು ಬಯಸುವ ಸಮೀಪದ ಕೇಂದ್ರದಲ್ಲೇ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಿದ್ದು, ಹೊರ ಜಿಲ್ಲೆಗಳ 791 ವಿದ್ಯಾರ್ಥಿಗಳು ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಅವರಲ್ಲಿ ಉಡುಪಿ, ಮಂಗಳೂರು, ಬೆಂಗಳೂರು ಜಿಲ್ಲೆಗಳಿಂದ ಬಂದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಿಲ್ಲೆಯಿಂದ ಬೇರೆಡೆ ಹೋಗಿರುವ ವಿದ್ಯಾರ್ಥಿಗಳು ಶಿವಮೊಗ್ಗ ಜಿಲ್ಲೆ ಬದಲಿಗೆ ಬೇರೆ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳನ್ನು ಆಯ್ಕೆಯ ಮಾಡಿಕೊಂಡಿದ್ದು, ಅಂಥವರ ಸಂಖ್ಯೆ 372ರಷ್ಟಿದೆ.

    ಮರೆಯಬೇಡಿ: ಪರೀಕ್ಷಾ ಕೇಂದ್ರಗಳನ್ನು ಬದಲು ಮಾಡಿಕೊಂಡಿರುವ ವಿದ್ಯಾರ್ಥಿಗಳು ಈ ಮೊದಲಿನ ಪರೀಕ್ಷಾ ಪ್ರವೇಶ ಪತ್ರದೊಂದಿಗೆ ಪಿಯು ಪರೀಕ್ಷಾ ಮಂಡಳಿ ವೆಬ್​ಸೈಟ್​ನಿಂದ ಡೌನ್​ಲೋಡ್ ಮಾಡಿಕೊಂಡಿರುವ ಹೊಸ ಪ್ರವೇಶ ಪತ್ರವನ್ನೂ ಮರೆಯದೆ ತೆಗೆದುಕೊಂಡು ಹೋಗಬೇಕು.

    ದ್ವಿತೀಯ ಪಿಯುಸಿ ಪರೀಕ್ಷೆ ಸಂದರ್ಭದಲ್ಲಿ ಎಲ್ಲಾ 33 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ದೇಹದ ತಾಪಮಾನ ಪರೀಕ್ಷಿಸಲು ತಲಾ ಎರಡು ಥರ್ಮಲ್ ಸ್ಕ್ಯಾನರ್​ಗಳನ್ನು ಒದಗಿಸಬೇಕು. ಆರೋಗ್ಯ ಇಲಾಖೆಯ ಇಬ್ಬರು ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಬೇಕು. ವಿಚಕ್ಷಣ ದಳ ಹಾಗೂ ಕೇಂದ್ರದ ಮೇಲ್ವಿಚಾರಕರು ಫೇಸ್ ಶೀಲ್ಡ್, ಎನ್-95 ಮಾಸ್ಕ್ ಮತ್ತು ಕೈಗವಸು ಬಳಸಬೇಕು.

    ಕೆ.ಬಿ.ಶಿವಕುಮಾರ್, ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts