More

    ದಿನಕ್ಕೆ 2,250 ಕರೊನಾ ಪರೀಕ್ಷೆ

    – ಅವಿನ್ ಶೆಟ್ಟಿ, ಉಡುಪಿ

    ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ, ಸಾವಿನ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತೀ ಗ್ರಾಪಂನಲ್ಲಿಯೂ (ಜನಸಂಖ್ಯೆಗೆ ಅನುಗುಣವಾಗಿ) ದಿನಕ್ಕೆ 2,250 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲು ಜಿಪಂ ಸಿಇಒ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಲಿಖಿತ ಆದೇಶ ನೀಡಿದ್ದಾರೆ.

    ಕೋವಿಡ್ ಸಾಂಕ್ರಾಮಿಕ ರೋಗದ ಲಕ್ಷಣಗಳನ್ನು ರೋಗಿಗಳು ಬಹಿರಂಗಪಡಿಸದೆ ತಡವಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವುದರಿಂದ ನಿಯಂತ್ರಣ ಕಷ್ಟವಾಗಿದೆ. ಜಿಲ್ಲೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂಬುದು ತಜ್ಞರ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಪಂಚಾಯಿತಿ ಮಟ್ಟದಲ್ಲಿ ಇಂತಿಷ್ಟು ಆ್ಯಂಟಿಜನ್
    ಪರೀಕ್ಷೆಗಳನ್ನು ನಡೆಸಲೇಬೇಕು ಎಂಬ ಗುರಿ ಹಾಕಿಕೊಳ್ಳಲಾಗಿದೆ.

    ಕೋವಿಡ್ ಪರೀಕ್ಷೆ, ಐಸೋಲೇಶನ್, ಕಾಂಟಾಕ್ಟ್ ಟ್ರೇಸಿಂಗ್‌ಗೆ ಪ್ರತಿರೋಧ ಇದ್ದಲ್ಲಿ ಗ್ರಾಪಂ, ಕಂದಾಯ, ಪೊಲೀಸ್, ಆರೋಗ್ಯ ಇಲಾಖೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಬೇಕು. ಶೀತ, ಜ್ವರ, ಉಸಿರಾಟ ಸಮಸ್ಯೆ ಇರುವರಿಗೆ ಮತ್ತು ಕಂಟೈನ್ಮೆಂಟ್ ವಲಯದ ದುರ್ಬಲ ವರ್ಗದವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ. ಪ್ರತೀ ಕೋವಿಡ್ ಪಾಸಿಟಿವ್ ಹೊಂದಿದ್ದ ರೋಗಿಯ ಪ್ರಾಥಮಿಕ ಸಂಪರ್ಕ ಹೊಂದಿದ 10 ಮಂದಿಯನ್ನು ಪತ್ತೆ ಮಾಡಬೇಕು. ಇವರನ್ನು 5ರಿಂದ 7 ದಿನಗಳೊಳಗೆ ಪರೀಕ್ಷೆಗೆ ಒಳಪಡಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

    ಹೆಚ್ಚುತ್ತಿರುವ ಒತ್ತಡ: ಗ್ರಾಪಂ ಪಿಡಿಒ, ಸಿಬ್ಬಂದಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳಿಗೆ ಈ ಗುರಿ ಮತ್ತಷ್ಟು ಹೊರೆಯಾಗಿದೆ. ಸೀಮಿತ ಸಂಖ್ಯೆಯ ಸಿಬ್ಬಂದಿ, ಹಲವು ಕಾರ್ಯ ಒತ್ತಡ ನಡುವೆ ಈ ಕೋವಿಡ್ ಟಾರ್ಗೆಟ್ ಇನ್ನಷ್ಟು ಹೈರಾಣಾಗಿಸಲಿದೆ ಎಂಬುದು ಗ್ರಾಪಂ ಸಿಬ್ಬಂದಿಯ ಅಳಲು. ಈಗಾಗಲೇ ಕೆಲವು ಪಂಚಾಯಿತಿಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಕೆಲವರು ಕೋವಿಡ್ ಪಾಸಿಟಿವ್ ಕಾರಣದಿಂದ ದೀರ್ಘ ರಜೆಯಲ್ಲಿದ್ದಾರೆ. ಕೋವಿಡ್ ಜಿಪಿಎಸ್ ಕಾರ್ಯನಿರ್ವಹಣೆ, ಪ್ರಾಥಮಿಕ ಸಂಪರ್ಕ ಪರಿಶೀಲನೆ, ಪರೀಕ್ಷೆ ಪ್ರಕ್ರಿಯೆ ನಡುವೆ ಗ್ರಾಪಂನ ಇತರ ಸಾರ್ವಜನಿಕ ಸೇವೆಗಳೂ ನೀಡಬೇಕಿದೆ. ತೆರಿಗೆ ನಿರ್ವಹಣೆ, ಜಮಾಬಂದಿ, ಗ್ರಾಮಸಭೆಗಳ ಸಿದ್ಧತೆ ಮಾಡಬೇಕಿದೆ. ಇಷ್ಟೆಲ್ಲ ಒತ್ತಡಗಳ ನಡುವೆ ಕಾರ್ಯನಿರ್ವಹಣೆ ಕಷ್ಟ ಎಂಬುದು ಪಿಡಿಒಗಳ ಅಳಲು.

    ಇದು ಕೋವಿಡ್ ನಿಯಂತ್ರಣ ಬಗ್ಗೆ ತಜ್ಞರ ಅಭಿಪ್ರಾಯ ಪಡೆದು ಜಾರಿಗೆ ಬಂದ ಯೋಜನೆ. ತಾಲೂಕು ಆರೋಗ್ಯಾಧಿಕಾರಿಗಳು, ತಾಪಂ ಇಒ ಈ ಬಗ್ಗೆ ನಿಗಾವಹಿಸಿ ಪ್ರತಿನಿತ್ಯ ವರದಿ ಪಡೆಯಲಿದ್ದಾರೆ. ಜನರ ಆರೋಗ್ಯ ದೃಷ್ಟಿಯಿಂದ ನಾವೆಲ್ಲರೂ ಒತ್ತಡದಲ್ಲೇ ಕಾರ್ಯ ನಿರ್ವಹಿಸುವ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಈ ಪರಿಸ್ಥಿತಿ ಮತ್ತಷ್ಟು ದಿನ ಇರಲಿದೆ.
    – ಪ್ರೀತಿ ಗೆಹ್ಲೋಟ್, ಸಿಇಒ, ಉಡುಪಿ ಜಿಪಂ

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರಿ ಇಲ್ಲ
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ರಾಪಂಗಳಿಗೆ ಕರೊನಾ ಪರೀಕ್ಷೆ ಗುರಿ ನೀಡಿಲ್ಲ. ಆರೋಗ್ಯ ಇಲಾಖೆ ಎಲ್ಲವನ್ನೂ ನಿಭಾಯಿಸುತ್ತದೆ. ಪರೀಕ್ಷೆಗೆ ಪೂರಕವಾಗಿ ಗ್ರಾಪಂ ಸಭಾಂಗಣ ಒದಗಿಸುವಿಕೆ ಮೊದಲಾದ ಸಹಕಾರ ನೀಡುತ್ತಿದೆ. ಪರೀಕ್ಷೆಯಲ್ಲಿ ಕರೊನಾ ಪಾಸಿಟಿವ್ ಬಂದರೆ ಆ ವ್ಯಕ್ತಿ ಹಾಗು ಪ್ರಾಥಮಿಕ ಸಂಪರ್ಕ ಹೊಂದಿದವರ ಕಡೆಗೆ ಗ್ರಾಪಂ ಕಾಳಜಿ ವಹಿಸುತ್ತದೆ. ಮನೆಯಲ್ಲೇ ಐಸೋಲೇಶನ್‌ನಲ್ಲಿರುವ ಸೋಂಕಿತರು ಹೊರಗೆ ತಿರುಗಾಡದಂತೆ ಎಚ್ಚರ ವಹಿಸಲಾಗುತ್ತದೆ. ಆರೋಗ್ಯ ಇಲಾಖೆ ಜತೆ ಗ್ರಾಪಂಗಳು ಸಮನ್ವಯದಿಂದ ಕೆಲಸ ಮಾಡುತ್ತಿವೆ.
    – ಡಾ.ಸೆಲ್ವಮಣಿ ಆರ್. ಸಿಇಒ, ದ.ಕ.ಜಿಪಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts