More

    860ಕ್ಕೂ ಅಧಿಕ ಕೋವಿಡ್-19 ಹಾಸಿಗೆಗಳು ಖಾಲಿ!

    ಬೆಳಗಾವಿ: ಕೋವಿಡ್ ಮೊದಲ ಹಾಗೂ ಎರಡನೆಯ ಅಲೆ ಸಂದರ್ಭದಲ್ಲಿ ಸೋಂಕಿತರಿಗೆ ಬೆಡ್ ಸಿಗದೇ ಎದುರಿಸಿದ ಸಮಸ್ಯೆ ಮತ್ತೆ ಮರುಕಳಿಸಬಾರದು ಎಂಬ ಉದ್ದೇಶದಿಂದ ಮೂರನೆಯ ಅಲೆಯ ಈ ಹೊತ್ತಿನಲ್ಲಿ ಸರ್ಕಾರ ಅಗತ್ಯ ಹಾಸಿಗೆ ಸಿದ್ಧತೆ ಮಾಡಿದೆ. ಆದರೂ ದಾಖಲಾಗುವವರ ಸಂಖ್ಯೆ ಕನಿಷ್ಠ ಮಟ್ಟದಲ್ಲಿದೆ. ಸೋಂಕಿತರು ಸರ್ಕಾರಿ ಆಸ್ಪತ್ರೆಗಳಿಗೆ ಬಾರದ್ದರಿಂದ ಕರೊನಾ ಚಿಕಿತ್ಸೆಗೆ ಮೀಸಲಿಟ್ಟಿರುವ ನೂರಾರು ಬೆಡ್‌ಗಳು ಖಾಲಿ ಬಿದ್ದಿವೆ.

    ಕರೊನಾ 1 ಮತ್ತು 2ನೇ ಅಲೆಯಲ್ಲಿ ಸಮರ್ಪಕ ಬೆಡ್ ಹಾಗೂ ಆಕ್ಸಿಜನ್ ಕೊರತೆಯಿಂದಾಗಿ ಬಹಳಷ್ಟು ಸೋಂಕಿತರ ಸಾವು-ನೋವು ಸಂಭವಿಸಿದ್ದವು. ಇಂತಹ ಸಮಸ್ಯೆ, ಸವಾಲುಗಳು ಎದುರಾಗಬಾರದೆಂಬ ಉದ್ದೇಶದಿಂದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಹಿತ ಕೋವಿಡ್ ಬೆಡ್‌ಗಳನ್ನು ಚಿಕಿತ್ಸೆಗೆ ಅಣಿಗೊಳಿಸಲಾಗಿದೆ. ಆದರೆ, ಬೆರಳೆಣಿಕೆಯಷ್ಟು ಜನರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ.

    38 ಜನರು ಮಾತ್ರ ದಾಖಲು: 3ನೇ ಅಲೆಯಲ್ಲಿ ಚಿಕಿತ್ಸೆ ಪಡೆಯಲು ಸೋಂಕಿತರು ಆಸ್ಪತ್ರೆಗೆ ಬರುತ್ತಿಲ್ಲ. ಹೀಗಾಗಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿರುವ ಬಹುತೇಕ ಕೋವಿಡ್ ಬೆಡ್‌ಗಳು ಖಾಲಿ ಇವೆ. ಜಿಲ್ಲಾಸ್ಪತ್ರೆ (ಬಿಮ್ಸ್) ಯಲ್ಲಿ 300 ಆಕ್ಸಿಜನ್ ಬೆಡ್ ಸಿದ್ಧಪಡಿಸಿ, ಮೀಸಲಿರಿಸಿ ದ್ದರೂ ಇಲ್ಲಿ ಕೇವಲ 23 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾಸ್ಪತ್ರೆ ಸೇರಿ ಎಲ್ಲ ತಾಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಚಿಕಿತ್ಸೆ ಗಾಗಿ 900ಕ್ಕೂ ಅಧಿಕ ಬೆಡ್ ಸಿದ್ಧಪಡಿಸಲಾಗಿದೆ. ಇಡಿ ಜಿಲ್ಲೆಯಲ್ಲಿ 38 ಜನರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ. ಇನ್ನುಳಿದ ಎಲ್ಲ ಬೆಡ್‌ಗಳೂ ಖಾಲಿ ಇವೆ.

    9 ದಿನದಲ್ಲಿ 2,679 ಪ್ರಕರಣ: ಜ. 9ರಿಂದ 18ರ ವರೆಗೆ 10 ದಿನದಲ್ಲಿ ಹೊಸದಾಗಿ 2,679 ಜನರಿಗೆ ಕರೊನಾ ಸೋಂಕು ತಗುಲಿದೆ. ಈ ಪ್ರಮಾಣದಲ್ಲಿ ಸಕ್ರಿಯ ಪ್ರಕರಣಗಳಿದ್ದರೂ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಕೋವಿಡ್ ಬೆಡ್‌ಗಳು ಖಾಲಿ ಹೊಡೆಯುತ್ತಿವೆ. ಹೊಸದಾಗಿ ಸೋಂಕು ತಗುಲಿದ ಶೇ. 98 ಜನರು ಹೋಮ್ ಐಸೋಲೇಷನ್ ಆಗಿದ್ದಾರೆ. ಆದರೆ, ಹೋಮ್ ಐಸೋಲೇಷನ್ ಸೋಂಕಿತರೆಲ್ಲರೂ ಕಟ್ಟುನಿಟ್ಟಾಗಿ ಮನೆಯಲ್ಲೇ ಇರುತ್ತಾರೆ ಎಂಬುದನ್ನು ಖಚಿತವಾಗಿ ಹೇಳಲಾಗದು.

    ಜನರಿಗಿಲ್ಲ ಭೀತಿ: ಕಳೆದ ಹತ್ತು ದಿನಗಳಲ್ಲಿ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚಾಗಿವೆ. ಪ್ರತಿದಿನ ಸುಮಾರು ಮೂರುವರೆ ಸಾವಿರ ಜನರನ್ನು ಪರೀಕ್ಷೆಗೊಳಪಡಿಸಲಾಗುತ್ತಿದ್ದು, ಕನಿಷ್ಠ 300 ಜನರಲ್ಲಿ ಸೋಂಕು ದೃಢಪಡುತ್ತಿದೆ. ಮಕ್ಕಳು ಹಾಗೂ ಕಾಲೇಜ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ತಗುಲುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 2 ವರ್ಷದ ಮಗುವಿಗೂ ವೆಂಟಿಲೇಟರ್ ಬೆಡ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆದರೆ, ಸೋಂಕಿನ ಬಗ್ಗೆ ಜನರಲ್ಲಿ ಯಾವುದೇ ಭೀತಿ ಇಲ್ಲವಾಗಿದೆ.

    ಇಲಾಖೆಯ ನಿರ್ಲಕ್ಷ್ಯ ಆರೋಪ: ಜನರಿಗೆ ಕರೊನಾ 3ನೇ ಅಲೆಯ ಬಗ್ಗೆ ಯಾವುದೇ ಭೀತಿ ಇಲ್ಲವಾಗಿದೆ. ಹೊಸದಾಗಿ ಕೋವಿಡ್ ದೃಢಪಟ್ಟವರು ರೋಗದ ಬಗ್ಗೆ ನಿರ್ಲಕ್ಷೃ ವಹಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಕೇವಲ ಸೋಂಕಿತರ ಅಂಕಿ-ಸಂಖ್ಯೆ ನಿರ್ವಹಣೆ ಮಾಡುತ್ತಿದೆ. ಸೋಂಕಿತರ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯವಹಿಸುತ್ತಿದ್ದಾರೆ. ‘ಕೋವಿಡ್ ದೃಢಪಟ್ಟವರಿಗೆ ಲಕ್ಷಣಗಳು ಇದ್ದರಷ್ಟೇ ಆಸ್ಪತ್ರೆಗೆ ದಾಖಲಿಸಿಕೊಳ್ಳುತ್ತೇವೆ. ಸೋಂಕಿತರು ಹೋಮ್ ಐಸೋಲೇಷನ್‌ಗೆ ಒಳಗಾಗುತ್ತೇವೆ ಎಂದರೆ, ಮನೆಯಲ್ಲಿ ಆರೈಕೆ ಆಗುವುದಕ್ಕೆ ವ್ಯವಸ್ಥೆ ಮಾಡುತ್ತೇವೆ’ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಸೋಂಕಿತರು ಇರುವ ಮನೆಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ನಿಗಾ ವಹಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

    ಬೆಳಗಾವಿ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 2 ಸಾವಿರಕ್ಕೂ ಅಧಿಕ ಕೋವಿಡ್ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಆದರೆ, ಈವರೆಗೆ ಕೇವಲ 38 ಸೋಂಕಿತರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಬಹುತೇಕರು ಮನೆಯಲ್ಲೇ ಆರೈಕೆ ಪಡೆಯುತ್ತಿದ್ದಾರೆ.
    | ಡಾ.ಶಶಿಕಾಂತ ಮುನ್ಯಾಳ ಜಿಲ್ಲಾ ಆರೋಗ್ಯಾಧಿಕಾರಿ, ಬೆಳಗಾವಿ

    | ಜಗದೀಶ ಹೊಂಬಳಿ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts