More

    ಬಿಬಿಎಂಪಿ ವ್ಯಾಪ್ತಿಯ 80 ಸಾವಿರ ಆಸ್ತಿ ಮಾಲೀಕರು ನಿರಾಳ

    ಬೆಂಗಳೂರು: ರಾಜಧಾನಿಯಲ್ಲಿ ಆಸ್ತಿ ತೆರಿಗೆ ಪಾವತಿಸುವ ವೇಳೆ ತಮ್ಮ ಆಸ್ತಿಗಳಿರುವ ವಲಯಗಳನ್ನು ತಪ್ಪಾಗಿ ಘೋಷಣೆ ಮಾಡಿಕೊಂಡಿದ್ದ ಕೆಲವು ಮಾಲೀಕರು ನಿರಾಳತೆಯ ನಿಟ್ಟುಸಿರು ಬಿಡುವಂತಾಗಿದೆ. ಈಗ ಪಾಲಿಕೆ ವ್ಯತ್ಯಾಸವಾದ ಬಾಕಿ ಮೊತ್ತ ಪಾವತಿಗೆ ಮಾತ್ರ ಅವಕಾಶ ನೀಡಲು ಚಿಂತನೆ ನಡೆಸಿದೆ.

    ಬಿಬಿಎಂಪಿ ವ್ಯಾಪ್ತಿಯಲ್ಲಿ 2016ರಲ್ಲಿ ಆಸ್ತಿ ವಲಯಗಳ ಪರಿಷ್ಕರಣೆ ಮಾಡಲಾಗಿದೆ. ಇದೇ ಸಾಲಿನಲ್ಲಿ ಆಸ್ತಿ ತೆರಿಗೆ ಹೆಚ್ಚಳ ಹಾಗೂ ವಲಯ ವರ್ಗೀಕರಣ ಜಾರಿಗೊಳಿಸಿ ಪಾಲಿಕೆಯ ಆದಾಯ ಹೆಚ್ಚಿಸಲು ಯತ್ನಿಸಲಾಗಿತ್ತು. ಆದರೆ, ಈ ವೇಳೆ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಪರಿಣಾಮ, ಸದ್ಯಕ್ಕೆ ಪಾವತಿಸುತ್ತಿರುವ ತೆರಿಗೆ ಪ್ರಮಾಣಕ್ಕೆ ಸರಿ ಹೊಂದಾಣಿಕೆ ಆಗುವ ರೀತಿಯಲ್ಲಿ ಆಸ್ತಿ ಗಳಿರುವ ವಲಯ ಗುರುತಿಸಿದ್ದರು. ಆದರೆ, ಈ ವಿಧಾನ ತಪ್ಪಾಗಿದೆ ಎಂಬುದರ ಬಗ್ಗೆ ಕಳೆದ 5 ವರ್ಷದಿಂದ ಮಾಹಿತಿಯೇ ಸಿಕ್ಕಿಲ್ಲ. ತಪು್ಪ ವಲಯದಲ್ಲಿ ಆಸ್ತಿ ತೆರಿಗೆ ಪಾವತಿಗೆ ತಂತ್ರಾಂಶದಲ್ಲಿ ಅವಕಾಶ ಸಿಕ್ಕಿದ್ದರಿಂದ, ಆಸ್ತಿ ಮಾಲೀಕರಿಗೆ ತಪ್ಪಿನ ಅರಿವೇ ಇರಲಿಲ್ಲ.

    120 ಕೋಟಿ ರೂ. ವ್ಯತ್ಯಾಸ ಮೊತ್ತ: ರಾಜಧಾನಿಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ 23 ಲಕ್ಷ ಆಸ್ತಿಗಳಿವೆ. ಈ ಪೈಕಿ 19 ಲಕ್ಷಕ್ಕಿಂತ ಕಡಿಮೆ ಆಸ್ತಿಗಳು ಮಾತ್ರ ತೆರಿಗೆ ವ್ಯಾಪ್ತಿಗೆ ಒಳಪಟ್ಟಿದ್ದು, ಉಳಿದವುಗಳನ್ನೂ ತೆರಿಗೆ ವ್ಯಾಪ್ತಿಗೆ ತರುವ ಕಾರ್ಯ ನಡೆಯುತ್ತಿದೆ. ಜತೆಗೆ, ಒಟ್ಟಾರೆ ಆಸ್ತಿಗಳಲ್ಲಿ ಸುಮಾರು 80 ಸಾವಿರ ಆಸ್ತಿ ಮಾಲೀಕರು ವಲಯ ವರ್ಗೀಕರಣದಲ್ಲಿ ತಪ್ಪಾಗಿ ವಲಯಗಳನ್ನು ಗುರುತಿಸಿಕೊಂಡಿರುವ ಬಗ್ಗೆ ಪಾಲಿಕೆಯಿಂದ ತಿಳಿದುಬಂದಿದೆ. 5 ವರ್ಷಗಳಲ್ಲಿ ಉಂಟಾದ ವ್ಯತ್ಯಾಸ ಬಾಕಿ, ದುಪ್ಪಟ್ಟು ದಂಡ ಹಾಗೂ ಬಡ್ಡಿ ಸೇರಿ 120 ಕೋಟಿ ರೂ. ಆದಾಯ ಬರುವ ಅಂದಾಜು ಮಾಡಲಾಗಿದೆ.

    ನೋಟಿಸ್ ವಾಪಸಾತಿಗೆ ಪ್ರಸ್ತಾವನೆ: ಆಸ್ತಿಗಳ ಮಾಲೀಕರು ಆಸ್ತಿಗಳ ವಲಯ ತಪ್ಪಾಗಿ ಗುರುತಿಸಿದ್ದರೂ ಈ ಬಗ್ಗೆ ಮಾಲೀಕರಿಗೆ ಮಾಹಿತಿ ನೀಡುವಲ್ಲಿ ಬಿಬಿಎಂಪಿ 5 ವರ್ಷ ವಿಳಂಬ ಮಾಡಿದೆ. ತಂತ್ರಾಂಶದಲ್ಲೂ ದೋಷ ಉಂಟಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ಹೋರಾಟಕ್ಕೆ ಸಿದ್ಧತೆ ನಡೆಸಿದ್ದರು. ಹೀಗಾಗಿ, ನೋಟಿಸ್ ಹಿಂಪಡೆದು ಬಾಕಿ ಮೊತ್ತವನ್ನು ಮಾತ್ರ ಪಾವತಿಸಲು ಅನುಮತಿ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಪಾಲಿಕೆ ಆಡಳಿತಾಧಿಕಾರಿ ರಾಕೇಶ್ ಸಿಂಗ್​ಗೆ ಪ್ರಸ್ತಾವನೆ ಕಳಿಸಿದ್ದಾರೆ.

    75 ಕೋಟಿ ರೂಪಾಯಿಗೂ ಅಧಿಕ ಉಳಿತಾಯ: ರಾಜಧಾನಿಯಲ್ಲಿ ಒಟ್ಟಾರೆ ಎ, ಬಿ, ಸಿ, ಡಿ, ಇ ಮತ್ತು ‘ಎಫ್’ ವಲಯಗಳನ್ನು ಗುರುತಿಸಿದೆ. ಈ ಪೈಕಿ ‘ಎ’ ವಲಯದಲ್ಲಿ ಆಸ್ತಿ ಇದ್ದವರು ಅಧಿಕ ತೆರಿಗೆ ವ್ಯಾಪ್ತಿಗೆ ಮತ್ತು ‘ಎಫ್’ ವಲಯದಲ್ಲಿ ಆಸ್ತಿ ಇದ್ದವರು ಅತಿ ಕಡಿಮೆ ತರಿಗೆ ವ್ಯಾಪ್ತಿಗೆ ಬರಲಿದ್ದಾರೆ. ಈಗ ತಪ್ಪಾಗಿ ಆಸ್ತಿ ಗುರುತಿಸಿದ ಸುಮಾರು 80 ಸಾವಿರ ಜನರಿಗೆ ಬಾಕಿ ಮೊತ್ತದ 3 ಪಟ್ಟು ಹಣ ಪಾವತಿ ಮಾಡಬೇಕಿದೆ. ಆದರೆ, ಬಿಬಿಎಂಪಿಯಲ್ಲಿ ಬಾಕಿ ಮೊತ್ತವನ್ನಷ್ಟೇ ಪಾವತಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಆಸ್ತಿ ಮಾಲೀಕರಿಗೆ ಸಿಹಿಸುದ್ದಿ ಬರುವ ನಿರೀಕ್ಷೆಯಿದೆ. ಇದರಿಂದ ಆಸ್ತಿ ಮಾಲೀಕರಿಗೆ 75 ಕೋಟಿ ರೂ. ಗಿಂತ ಅಧಿಕ ಹಣ ಉಳಿತಾಯವಾಗುವ ಸಾಧ್ಯತೆಯಿದೆ.

    ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿಗಳ ವಲಯ ತಪ್ಪಾಗಿ ಘೋಷಣೆ ಮಾಡಿದವರಿಗೆ ಬಾಕಿ ಮೊತ್ತದ ಜತೆಗೆ ದಂಡ ವಿಧಿಸಲು ನೋಟಿಸ್ ನಿಡಲಾಗಿತ್ತು. ಕೋವಿಡ್​ನಿಂದ ಹೊರೆಯಾಗುವ ಸಾಧ್ಯತೆ ಮನಗಂಡು ನೈಜ ಬಾಕಿ ಮೊತ್ತ ಪಾವತಿಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದೆ. ದಂಡ ಮತ್ತು ಬಡ್ಡಿ ವಜಾ ಮಾಡುವ ಸಾಧ್ಯತೆ ಹೆಚ್ಚಾಗಿದೆ.

    | ರಾಕೇಶ್ ಸಿಂಗ್ ಬಿಬಿಎಂಪಿ ಆಡಳಿತಾಧಿಕಾರಿ

    ಟೇಬಲ್ ಮೇಲಿತ್ತು ಮೂರು ಟೀ ಕಪ್​; ದಂಪತಿಯನ್ನು ಪರಿಚಿತರೇ ಕೊಂದರಾ?

    ಇವರಿಷ್ಟು ಮಂದಿಗೆ ಎರಡೂ ಡೋಸ್ ಲಸಿಕೆ ಪಡೆದಿದ್ದರೂ ಕರೊನಾ ಬಂತು!; ಈ ಪೈಕಿ ಕೇರಳದಲ್ಲೇ ಗರಿಷ್ಠ ಪ್ರಕರಣ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts