More

    ನ್ಯಾಯ ನಿಷ್ಠುರಿ ನಾರಾಯಣರಿಗೆ 80!

    | ಎಸ್.ಎಲ್.ಶ್ರೀನಿವಾಸ ಮೂರ್ತಿ

    ಅಧ್ಯಯನ, ಅಧ್ಯಾಪನ, ಲೇಖನ ಹಾಗೂ ಸಂಘಟನೆಗಳೆನ್ನುವ ನಾಲ್ಕು ಸಾಧನೆಯ ಹಾದಿಗಳಲ್ಲಿ ಮುನ್ನಡೆದು ತಮ್ಮದೇ ಆದ ಛಾಪನ್ನು ಮೂಡಿಸಿರುವ ಡಾ. ಪಿ.ವಿ.ನಾರಾಯಣ ನಮ್ಮ ನಡುವಿರುವ ಅಪರೂಪದ ವಿದ್ವಾಂಸರು. ‘ನ್ಯಾಯ ನಿಷ್ಠುರಿ ದಾಕ್ಷಿಣ್ಯಪರ ನಾನಲ್ಲ’ ಎಂಬ ಬಸವಣ್ಣನವರ ನುಡಿಯನ್ನು ಜೀವನದ ಧ್ಯೇಯವನ್ನಾಗಿರಿಸಿಕೊಂಡಿರುವ ಪಿ.ವಿ.ಎನ್​ರಿಗೆ ಇದೀಗ ಎಂಬತ್ತು ವಸಂತಗಳ ಹರೆಯ. ವ್ಯಕ್ತಿ-ವೃತ್ತಿ ಗೌರವಗಳಿಗೆ ಚ್ಯುತಿಯಾದಾಗ, ನಾಡು-ನುಡಿಗಳ ಅಸ್ಮಿತೆಗೆ ಧಕ್ಕೆ ಬಂದಾಗ ಅವರು ಸದಾ ದನಿ ಎತ್ತಿದ್ದಾರೆ. ಕನ್ನಡದ ವಿಷಯಕ್ಕೆ ಅವರದು ಅನನ್ಯ ವೀರನಿಷ್ಠೆ. ಕನ್ನಡದ ಸ್ಥಾನಮಾನಗಳ ವಿಷಯಕ್ಕೆ ಬಂದರೆ ಯಾವ ಬಗೆಯ ಹೋರಾಟಕ್ಕಾದರೂ ಅವರು ಹಿಂಜರಿದವರಲ್ಲ. ಕನ್ನಡ-ಕನ್ನಡಿಗ- ಕರ್ನಾಟಕಗಳ ಸಮಸ್ಯೆಗಳ ಪರಿಹಾರಕ್ಕಾಗಿ 1980ರಲ್ಲಿ ಕನ್ನಡ ಉಳಿಸಿ ಕ್ರಿಯಾ ಸಮಿತಿ ಕರಪತ್ರ ಆಂದೋಲನ ನಡೆಸಿತು. ಈ ಕನ್ನಡಪರ ನಿಲುವಿಗೆ ಬೆಂಬಲಿಸಿ ಸಹಿ ಮಾಡಿದ ಸಾಹಿತಿಗಳಲ್ಲಿ ಪಿ.ವಿ. ನಾರಾಯಣರೂ ಒಬ್ಬರು. ಮುಂದೆ ನಾಡಿನ ಹಲವೆಡೆ ಗೋಕಾಕ್ ಭಾಷಾಸೂತ್ರದ ಅನುಷ್ಠಾನಕ್ಕೆ ಆಗ್ರಹಿಸಿ ಚಳವಳಿ ಆರಂಭವಾದಾಗ ಬೆಂಗಳೂರಿನಲ್ಲಿ ಮಾತ್ರ ಅದರ ಕಾವು ಏರಿರಲಿಲ್ಲ. ಆ ಸಂದರ್ಭದಲ್ಲಿ ಪಿ.ವಿ.ಎನ್ ಉಪವಾಸ ಸತ್ಯಾಗ್ರಹ ಆರಂಭಿಸೋಣವೆಂದು ಚಿದಾನಂದ ಮೂರ್ತಿಯವರಿಗೆ ಸಲಹೆ ನೀಡಿದರು. ಇದಕ್ಕೆ ಹಿರಿಯ ಸಾಹಿತಿಗಳು, ಕಲಾವಿದರು ಕೈಜೋಡಿಸಿದರು. ಹೀಗೆ ಗೋಕಾಕ್ ಚಳವಳಿ ಬೆಂಗಳೂರಿನಲ್ಲೂ ಆರಂಭವಾಯಿತು.

    ಗೋಕಾಕ್ ಭಾಷಾಸೂತ್ರದ ಅನುಷ್ಠಾನಕ್ಕಾಗಿ 1982ರಲ್ಲಿ ‘ಸಾಹಿತಿಗಳ ಕಲಾವಿದರ ಬಳಗ’ ಅಸ್ತಿತ್ವಕ್ಕೆ ಬಂದಿತು. ನೂರಾರು ಮಂದಿ ಸಾಹಿತಿಗಳು, ಕಲಾವಿದರು, ಪತ್ರಕರ್ತರು ಏಪ್ರಿಲ್ 13ರಂದು ಸೆಂಟ್ರಲ್ ಕಾಲೇಜು ಆವರಣದಿಂದ ಮೌನ ಮೆರವಣಿಗೆಯಲ್ಲಿ ವಿಧಾನಸೌಧದವರೆಗೆ ನಡೆದು ನಂತರ ಸರದಿ ಉಪವಾಸ ಧರಣಿ ಆರಂಭಿಸಿದರು.

    ಚಳವಳಿಯ ನಂತರ ಸರ್ಕಾರ ರೂಪಿಸಿದ ಭಾಷಾ ಸೂತ್ರಕ್ಕೆ ಕೆಲ ಶಾಲೆಗಳು ತಡೆಯಾಜ್ಞೆ ತಂದಾಗ ಸಾಹಿತಿಗಳ ಕಲಾವಿದರ ಬಳಗವು ತಡೆಯಾಜ್ಞೆ ತೆರವು ಸೇರಿದಂತೆ 7 ಅಂಶಗಳನ್ನಿಟ್ಟುಕೊಂಡು ಚಳವಳಿ ಆರಂಭಿಸಿತು. ಮಹಿಷಿ ವರದಿ, ರಾಜ್ಯ ಸರ್ಕಾರಿ ನೌಕರರಿಗೆ ಕನ್ನಡ ಜ್ಞಾನ ಕಡ್ಡಾಯ ಮತ್ತು ಕನ್ನಡ ದೂರದರ್ಶನ ಹೋರಾಟ, ನಬಾರ್ಡ್ ಹೋರಾಟ ಮುಂತಾದವು ಇದರ ಫಲವಾಗಿ ರೂಪುಗೊಂಡವು.

    1988ರಲ್ಲಿ ಎಂ.ಚಿದಾನಂದ ಮೂರ್ತಿಯವರಿಂದ ಆರಂಭವಾದ ಕನ್ನಡ ಶಕ್ತಿ ಕೇಂದ್ರದ ಸಲಹೆಗಾರರಲ್ಲಿ ಒಬ್ಬರಾಗಿ, ನಂತರ ಕಾರ್ಯದರ್ಶಿಯಾಗಿ ರಾಜ್ಯಮಟ್ಟದಲ್ಲಿ ಕನ್ನಡ ನಾಡು-ನುಡಿ, ಸಂಸ್ಕೃತಿಗಳ ರಕ್ಷಣೆಗೆ ಪಿ.ವಿ.ಎನ್. ಶ್ರಮಿಸಿದ್ದಾರೆ. ಅಷ್ಟೇ ಅಲ್ಲದೆ, ಹಿಂದಿ ಸಾಮ್ರಾಜ್ಯಶಾಹಿ ವಿರೋಧಿ ಕ್ರಿಯಾ ಸಮಿತಿ, ಕನ್ನಡ ಗೆಳೆಯರ ಬಳಗ ಮುಂತಾದ ಕನ್ನಡಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಕರ್ನಾಟಕ ಸರ್ಕಾರ ರಚಿಸಿದ ಕನ್ನಡಿಗರ ಉದ್ಯೋಗ ಸಮಿತಿ ಸದಸ್ಯರಾಗಿ, ದೆಹಲಿಗೆ ಭೇಟಿ ನೀಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗದ ಸದಸ್ಯರಾಗಿ ಕನ್ನಡ ಹಿತಕ್ಕೆ ದುಡಿದಿದ್ದಾರೆ.

    ಶ್ರೇಷ್ಠ ವಿದ್ವಾಂಸರಾಗಿ, ವಿದ್ಯಾರ್ಥಿಗಳ ಮನಸೂರೆಗೊಂಡ ಅಧ್ಯಾಪಕರಾಗಿ, ವಾಗ್ಮಿಯಾಗಿ, ಸಂಶೋಧಕರಾಗಿ, ವಿಮರ್ಶಕರಾಗಿ, ಕಾದಂಬರಿಕಾರರಾಗಿ ಕನ್ನಡವನ್ನು ಕಟ್ಟುವ ಕಾಯಕದಲ್ಲಿ ಸರಿಸುಮಾರು ಅರ್ಧಶತಮಾನದಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಪಿ.ವಿ.ಎನ್ ಅವರು ಸಂಶೋಧನೆ, ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಸೃಜನಶೀಲ ಕೃತಿಗಳೂ ಸೇರಿದಂತೆ ಸುಮಾರು ಎಂಬತ್ತಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದಾರೆ.

    ಪಿ.ವಿ.ನಾರಾಯಣರು ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಪುಟ್ಟ ಗ್ರಾಮವಾದ ಅಕ್ಕಿರಾಂಪುರದಲ್ಲಿ ನರಸಮ್ಮ ಮತ್ತು ಪಿ. ವೆಂಕಪ್ಪಯ್ಯ ದಂಪತಿ ಮಗನಾಗಿ ಜನಿಸಿದರು. ಇವರು ಹೈದರಾಲಿಯ ಆಳ್ವಿಕೆಯ ಕಾಲದಲ್ಲಿ ರಾಜ್ಯನಿರ್ವಹಣೆ ಹಾಗೂ ಸಾಹಿತ್ಯಕೃಷಿಗಳೆಡರಲ್ಲೂ ಸಮದಂಡಿಯಾದ ಸಾಮರ್ಥ್ಯವಿದ್ದ, ಶ್ರೀರಾಮಕಥಾಮೃತ, ಹನುಮದ್ವಿಲಾಸ, ರಸಿಕರಂಜಿನಿ, ಅಲಂಕಾರಮಣಿದರ್ಪಣ ಮುಂತಾದ ಕೃತಿಗಳನ್ನು ರಚಿಸಿದ ವೆಂಕಪ್ಪಯ್ಯನವರ ವಂಶೀಕರು. ಕನ್ನಡ-ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಪಿ.ವಿ.ಎನ್. ಎರಡೂ ಭಾಷೆಗಳ ಸಾಹಿತ್ಯದ ಸವಿಯನ್ನು ನಾಡಿಗೆ ಉಣಬಡಿಸಿದ್ದಾರೆ. ಇವರ ಪಿಎಚ್.ಡಿ ಮಹಾಪ್ರಬಂಧವಾದ ‘ವಚನ ಸಾಹಿತ್ಯ-ಒಂದು ಸಾಂಸ್ಕೃತಿಕ ಅಧ್ಯಯನ’ವು ಮಾರ್ಗ ಪ್ರವರ್ತಕ ಕೃತಿಯಾಗಿದ್ದು ಅಂತಹ ಅನೇಕ ಸಂಶೋಧನ ಕೃತಿಗಳು ಹೊರಬರಲು ಕಾರಣವಾಗಿದೆ. ಸೃಜನಶೀಲ ಮತ್ತು ಸೃಜನೇತರ ಎರಡು ಪ್ರಕಾರಗಳಲ್ಲೂ ನಾರಾಯಣರು ಸಲ್ಲಿಸಿರುವ ಸಾಹಿತ್ಯಸೇವೆ ಉಲ್ಲೇಖಾರ್ಹ. ಸಾಮಾನ್ಯ, ಅಂತರ, ಶೋಧನೆ, ನಿರ್ಧಾರ, ಧರ್ಮಕಾರಣ ಮೊದಲಾದ ಕಾದಂಬರಿಗಳು ಅವರ ಸೃಜನಶೀಲತೆಯ ಪ್ರತಿಫಲಿತಗಳಾದರೆ ಕಾಯಕತತ್ವ, ಚಂಪೂ ಕವಿಗಳು, ವಚನ ಸಮಸ್ತ, ಕನ್ನಡತನ ಮತ್ತು ಭಾರತೀಯತೆ ಮುಂತಾದವು ಅವರ ಅಧ್ಯಯನಶೀಲತೆಯ, ಪ್ರಖರ ಚಿಂತನೆಯ ಪ್ರತಿಬಿಂಬಗಳು. ಬಸವಪುರಾಣ, ಧರ್ವಮೃತ, ಆದಿಪುರಾಣ, ಪದ್ಮಿನೀಪರಿಣಯ, ಕುಮುದೇಂದು ರಾಮಾಯಣ, ಶ್ರೀರಾಮಕಥಾಮೃತ ಮುಂತಾದ ಅಭಿಜಾತ ಕೃತಿಗಳನ್ನು ಸಂಪಾದಿಸಿಕೊಟ್ಟಷ್ಟೇ ಲೀಲಾಜಾಲವಾಗಿ ಅವರು ಅರಿಸ್ಟೋಫೆನೀಸ್(ಮೋಡಗಳು,ಪ್ಲೌಟೋಸ್) ಶೇಕ್ಸ್​ಪಿಯರ್(ಹನ್ನೆರಡನೇ ರಾತ್ರಿ), ಟಾಲ್​ಸ್ಟಾಯ್(ಮೂರು ನೀಳ್ಗತೆಗಳು), ಥಾಮಸ್ ಹಾರ್ಡಿ(ಫಾರ್ ಫ್ರಂ ದ ಮ್ಯಾಡಿಂಗ್ ಕ್ರೌಡ್), ಜೂಲ್ಸ್​ವರ್ನ್(ಭುವಿಯ ಬಸುರಿಗೆ ಪಯಣ), ಬರ್ಟ್ರೆಂಡ್ ರಸೆಲ್(ಸಮಾಜದ ಮೇಲೆ ವಿಜ್ಞಾನದ ಪ್ರಭಾವ, ಮದುವೆ ಮತ್ತು ನೀತಿ) ಮೊದಲಾದ ಅನ್ಯಭಾಷೆಯ ಸಾಹಿತ್ಯ ದಿಗ್ಗಜರ ಕೃತಿಗಳನ್ನು ಅನುವಾದಿಸಿ ಕನ್ನಡಿಗರಿಗೆ ನೀಡಿದ್ದಾರೆ.

    ಹನುಮನಹಟ್ಟಿ, ತಿ. ನರಸೀಪುರ, ಆದೋನಿ, ಮೈಸೂರು, ತೀರ್ಥಹಳ್ಳಿ ಮುಂತಾದ ಸ್ಥಳಗಳಲ್ಲಿ ಕೆಲಕಾಲ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ ನಾರಾಯಣರು ಕೊನೆಗೆ ನೆಲೆ ನಿಂತದ್ದು ಬೆಂಗಳೂರಿನ ವಿಜಯ ಕಾಲೇಜಿನಲ್ಲಿ. ಮೂರು ದಶಕಗಳಿಗೂ ಹೆಚ್ಚು ಕಾಲ ಸಾವಿರಾರು ಮಂದಿ ವಿದ್ಯಾರ್ಥಿಗಳು ನಾರಾಯಣರ ಕಣ್ಣರಿಕೆಯಲ್ಲಿ ಕನ್ನಡಪ್ರೀತಿಯನ್ನು ಉಳಿಸಿ ಬೆಳೆಸಿಕೊಂಡಿದ್ದಾರೆ. ಉದಯಭಾನು ಕಲಾ ಸಂಘದ ಶಾಸ್ತ್ರೀಯ ಕನ್ನಡ ಅಧ್ಯಯನಾಂಗದ ಡೀನ್ ಆಗಿ, ಆ ಸಂಸ್ಥೆಯ ಕನ್ನಡ ಪ್ರಕಟಣೆಗಳ ಪ್ರಧಾನ ಸಂಪಾದಕರಾಗಿ ಅವರು ಮಾಡಿದ ಕಾರ್ಯ ಸಾಂಸ್ಕೃತಿಕ ಮಹತ್ವವುಳ್ಳದ್ದು. ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷರಾಗಿ ಅದನ್ನು ನಾಡಿನ ಪ್ರತಿಷ್ಠಿತ ಸಾಹಿತ್ಯಕ ಸಂಸ್ಥೆಯನ್ನಾಗಿ ರೂಪಿಸುವಲ್ಲಿ ಶ್ರಮಿಸಿದ್ದಾರೆ.

    ಇಂದು ಅಭಿನಂದನೆ: ಪಿ.ವಿ.ನಾರಾಯಣ ಅವರಿಗೆ 80 ತುಂಬಿದ ಅಂಗವಾಗಿ, ಜ.29ರಂದು ಬೆಂಗಳೂರಿನಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ‘ಕನ್ನಡ ಪ್ರಧಾನ’ ಎಂಬ ಅಭಿನಂದನ ಗ್ರಂಥವನ್ನು ಸಮರ್ಪಿಸಲಾಗುತ್ತದೆ.

    (ಲೇಖಕರು ಹಿರಿಯ ಸಾಹಿತಿ)

    ಜ. 30ರಿಂದ ಮೂರು ವಾರ ಕಾಲ ಮಾಂಸ ಮಾರಾಟ ನಿಷೇಧ, ಮಾಂಸಾಹಾರಿ ಹೋಟೆಲ್​ಗಳೂ ಕ್ಲೋಸ್; ಎಲ್ಲಿ, ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts