More

    ಗದಗ ಜಿಲ್ಲೆಯಲ್ಲಿ ಶೇ.80.32 ಮತದಾನ

    ಗದಗ: ಎರಡನೇ ಹಂತದ ಗ್ರಾಪಂ ಚುನಾವಣೆಯಲ್ಲಿ ಜಿಲ್ಲೆಯ ಮುಂಡರಗಿ, ರೋಣ, ನರಗುಂದ ಮತ್ತು ಗಜೇಂದ್ರಗಡ ತಾಲೂಕು ಸೇರಿ ಒಟ್ಟು 64 ಗ್ರಾಪಂಗಳ 850 ಸ್ಥಾನಗಳಿಗೆ ಮಂಗಳವಾರ ಶಾಂತಿಯುತ ಮತದಾನ ನಡೆದಿದ್ದು, ಶೇ. 80.32ರಷ್ಟು ಮತದಾನವಾಗಿದೆ.

    ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಜಿಪಂ ಸದಸ್ಯನ ಮೇಲೆ ಹಲ್ಲೆ ಸೇರಿದಂತೆ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಮತದಾನ ಸುಸೂತ್ರವಾಗಿ ನಡೆಯಿತು. ಕಣದಲ್ಲಿದ್ದ 2439 ಅಭ್ಯರ್ಥಿಗಳ ಹಣೆಬರಹ ಮತಪೆಟ್ಟಿಗೆ ಸೇರಿತು.

    ಬೆಳಗ್ಗೆ 7ಕ್ಕೆ ಮತದಾನ ಪ್ರಕ್ರಿಯೆ ಶುರುವಾದರೂ ಮತದಾರರು 8 ಗಂಟೆ ನಂತರ ಮತಗಟ್ಟೆಗೆ ಆಗಮಿಸತೊಡಗಿದರು. ಹಲವು ಮತಗಟ್ಟೆ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಪೂಜೆ ಸಲ್ಲಿಸಿದ್ದು ಕಂಡುಬಂತು. 10 ಗಂಟೆ ನಂತರ ಮತದಾರರು ಗುಂಪು ಗುಂಪಾಗಿ ಮತಗಟ್ಟೆಯತ್ತ ಧಾವಿಸತೊಡಗಿದರು. ಮಧ್ಯಾಹ್ನ ನಂತರ ಮತದಾರರ ಸಂಖ್ಯೆಯಲ್ಲಿ ಹೆಚ್ಚಾಯಿತು. ವೃದ್ಧರನ್ನು ದ್ವಿಚಕ್ರ, ಆಟೋ, ಟ್ರ್ಯಾಕ್ಟರ್, ಮತ್ತಿತರ ವಾಹನಗಳಲ್ಲಿ ಕರೆತಂದು ಮತದಾನ ಮಾಡಿಸಲಾಯಿತು. ಕೆಲವು ವೃದ್ಧೆಯರು ನಡೆದುಕೊಂಡು ಬಂದೇ ಹಕ್ಕು ಚಲಾಯಿಸಿದರು. ಅಭ್ಯರ್ಥಿಗಳು ಮತಗಟ್ಟೆ ಹೊರಗೆ ನಿಂತು ತಮ್ಮ ಪರ ಮತ ಚಲಾಯಿಸುವಂತೆ ಮತದಾರರಿಗೆ ಕೈಮುಗಿದು ಮನವಿ ಮಾಡಿಕೊಳ್ಳುತ್ತಿದ್ದರು.

    ಕೋವಿಡ್ ಹಿನ್ನೆಲೆಯಲ್ಲಿ ಮತಗಟ್ಟೆ ಸಿಬ್ಬಂದಿ ಪ್ರತಿಯೊಬ್ಬರ ಮಾಹಿತಿ ಪಡೆದು ಕೈಗೆ ಸ್ಯಾನಿಟೈಸರ್ ಸಿಂಪಡಿಸಿ, ಥರ್ಮಲ್ ಸ್ಕೀನಿಂಗ್​ಗೆ ಒಳಪಡಿಸಿ ಮತದಾನಕ್ಕೆ ಅವಕಾಶ ಕಲ್ಪಿಸಿದರು. ಪ್ರತಿಯೊಬ್ಬ ಮತದಾರರು ಮಾಸ್ಕ್ ಧರಿಸಿ ಮತದಾನ ಮಾಡಿದರು. ಆದರೆ, ಬಹುತೇಕ ಕಡೆ ಮಹಿಳಾ ಮತದಾರರು ಒಬ್ಬರಿಗೊಬ್ಬರು ಅಂಟಿಕೊಂಡು ಸರದಿಯಲ್ಲಿ ನಿಂತಿದ್ದರು.

    272 ಸಾಮಾನ್ಯ, 67 ಸೂಕ್ಷ್ಮ 85 ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಜಿಲ್ಲಾಡಳಿತ ನಿಯೋಜಿಸಿದ್ದ ಒಟ್ಟು 2437 ಅಧಿಕಾರಿಗಳು ಹಾಗೂ ಸಿಬ್ಬಂದಿ ಚುನಾವಣೆ ಕಾರ್ಯ ನಿರ್ವಹಿಸಿದರು.

    ‘ಕೈ’ ಕಾರ್ಯಕರ್ತರಿಂದ ಜಿಪಂ ಸದಸ್ಯನ ಮೇಲೆ ಹಲ್ಲೆ

    ಗದಗ: ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಮತ ನೀಡುವಂತೆ ಮತದಾರರಿಗೆ ಪುಸಲಾಯಿಸಿದರು ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಜಿಪಂ ಸದಸ್ಯರೊಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

    ಬೆಳವಣಿಕಿ ಜಿಪಂ ಕ್ಷೇತ್ರದ ಬಿಜೆಪಿ ಸದಸ್ಯ ಶಿವಕುಮಾರ ನೀಲಗುಂದ ಹಲ್ಲೆಗೊಳಗಾದವರು. ಅವರನ್ನು ರೋಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮೆಣಸಗಿ ಗ್ರಾಪಂ 1ನೇ ವಾರ್ಡ್​ನ 105 ಎ ಮತಗಟ್ಟೆಗೆ ಭಾನುವಾರ ಬೆಳಗ್ಗೆ 7.30ರ ಸುಮಾರಿಗೆ ಕಾಂಗ್ರೆಸ್ ಕೆಲ ಕಾರ್ಯಕರ್ತರು ಮತದಾನಕ್ಕೆ ಆಗಮಿಸಿದ್ದರು. ಆಗ ಜಿಪಂ ಸದಸ್ಯ ಶಿವಕುಮಾರ ನೀಲಗುಂದ ಅವರೂ ಮತದಾನಕ್ಕೆ ಬಂದಿದ್ದರು. ಇದೇ ವೇಳೆ ಮತದಾನಕ್ಕೆ ಆಗಮಿಸಿದ್ದ ವೃದ್ಧೆಯೊಬ್ಬರಿಗೆ ಜಿಪಂ ಸದಸ್ಯ ‘ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಮತ ನೀಡಬೇಕು’ ಎಂದು ಹೇಳಿದ್ದಾರೆ ಎನ್ನಲಾಗಿದೆ. ಆಗ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಜಿಪಂ ಸದಸ್ಯನ ಮಧ್ಯೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದೆ. ಕಾಂಗ್ರೆಸ್ ಕಾರ್ಯಕರ್ತರು ಜಿಪಂ ಸದಸ್ಯನ ಮೇಲೆ ಹಲ್ಲೆ ಮಾಡಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ತಡೆಯಲು ಪ್ರಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ. ಇದರಿಂದ ಕೆಲಕಾಲ ಮತದಾನ ಸ್ಥಗಿತಗೊಂಡಿತು.

    ಡಿಎಸ್ಪಿ ಶಂಕರ ರಾಗಿ ಸ್ಥಳಕ್ಕಾಗಮಿಸಿದ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿ ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಯುವಂತೆ ಮಾಡಿದರು. ಆಗ ಜಿಪಂ ಸದಸ್ಯ, ‘ಜನಪ್ರತಿನಿಧಿಯಾಗಿರುವ ನನ್ನ ಮೇಲೆ ಹಲ್ಲೆ ಮಾಡಿದರೆ ಉಳಿದ ಮತದಾರರ ಗತಿ ಏನು? ನನ್ನ ಮೇಲೆ ಹಲ್ಲೆಗೈದ ನಾಲ್ವರನ್ನು ಬಂಧಿಸುವವರೆಗೂ ಮತದಾನ ನಡೆಯಲು ಬಿಡುವುದಿಲ್ಲ’ ಎಂದು ಪಟ್ಟುಹಿಡಿದರು. ಆಗ ಪೊಲೀಸರು ಆರೋಪಿಗಳಾದ ಶೇಖರಗೌಡ ಮಲ್ಲನಗೌಡ ಹಿರೇಗೌಡರ, ಬಸನಗೌಡ ಶೇಖರಗೌಡ ಹಿರೇಗೌಡರ ಅವರನ್ನು ಬಂಧಿಸಿದರು. ಪೊಲೀಸರು ಏಕಪಕ್ಷೀಯವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್ ಕಾರ್ಯಕರ್ತರು ಬಂಧನವನ್ನು ವಿರೋಧಿಸಲು ಮುಂದಾದರು. ಆಗ ಗುಂಪು ಚದುರಿಸಲು ಪೊಲೀಸರು ಬೆತ್ತದ ರುಚಿ ತೋರಿಸಿದರು. ಆರೋಪಿಗಳ ಬಂಧನ ನಂತರ ಗ್ರಾಮದಲ್ಲಿ ಮತದಾನ ನಿರಾತಂಕವಾಗಿ ಜರುಗಿತು.

    ಗ್ರಾಮದಲ್ಲಿ ಸಂಜೆಯವರೆಗೂ ಬೂದಿ ಮುಚ್ಚಿದ ವಾತಾವರಣವಿತ್ತು. ಮುಂಜಾಗ್ರತೆ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿತ್ತು. ಎಸ್ಪಿ ಎನ್. ಯತೀಶ ಅವರು ಮೆಣಸಗಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

    ಮುಂಡರಗಿಯಲ್ಲಿ ಬಿರುಸಿನ ಮತದಾನ

    ಮುಂಡರಗಿ: ತಾಲೂಕಿನ 18 ಗ್ರಾಪಂಗಳ 253 ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಶೇ. 82.13ರಷ್ಟು ಮತದಾನವಾಗಿದೆ.

    ಕೊರ್ಲಹಳ್ಳಿ, ಡಂಬಳ, ಶಿಂಗಟಾಲೂರ, ಹಮ್ಮಿಗಿ ಮೊದಲಾದೆಡೆ ಬಿರುಸಿನ ಮತದಾನ ನಡೆಯಿತು. ಶಿಂಗಟಾಲೂರ ಮತಗಟ್ಟೆಯಲ್ಲಿ ಆರೋಗ್ಯ ಇಲಾಖೆ ಕಿರಿಯ ಸಹಾಯಕಿ ವಿ.ಎ. ಹಳೇಮನಿ ತಮ್ಮ ಒಂದು ವರ್ಷದ ಮಗು ಸೇರಿ ಮೂವರು ಮಕ್ಕಳೊಂದಿಗೆ ಕರ್ತವ್ಯ ನಿರ್ವಹಿಸಿದರು. ಮತಗಟ್ಟೆ ಸುತ್ತಲಿನ 100 ಮೀಟರ್​ನೊಳಗೆ ಗುಂಪು ಸೇರದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಆದರೂ ಕೆಲವಡೆ ನಿಯಮ ಉಲ್ಲಂಘನೆಯಾಗಿದ್ದು ಕಂಡುಬಂತು.

    ಜಾಲವಾಡಗಿ ಗ್ರಾಮದ ಮತಕೇಂದ್ರದಲ್ಲಿ ಮಾನಿಹಳ್ಳಿ ಪುರವರ್ಗ ಮಠದ ಶ್ರೀ ಡಾ. ಮಳೇಯೋಗೀಶ್ವರ ಸ್ವಾಮೀಜಿ, ವಿರುಪಾಪೂರ ಮತಕೇಂದ್ರದಲ್ಲಿ ಶ್ರೀ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಮತದಾನ ಮಾಡಿದರು. ಬರದೂರ ಗ್ರಾಮದ 2ನೇ ವಾರ್ಡ್​ನಲ್ಲಿ ಗದಗ ಜಿಪಂ ಅಧ್ಯಕ್ಷ ಈರಣ್ಣ ನಾಡಗೌಡ್ರ ಹಕ್ಕು ಚಲಾಯಿಸಿದರು. ಕಲಕೇರಿ ಗ್ರಾಮದ ಮತಗಟ್ಟೆಯಲ್ಲಿ ಜಿಪಂ ಉಪಾಧ್ಯಕ್ಷೆ ಶೋಭಾ ಮೇಟಿ ಮತದಾನ ಮಾಡಿದರು. ತಾಲೂಕಿನ ಬರದೂರಲ್ಲಿ ಗದಗ ಜಿಪಂ ಅಧ್ಯಕ್ಷ ಈರಣ್ಣ ನಾಡಗೌಡ್ರ ಮತ ಚಲಾಯಿಸಿದರು.

    ತಾಲೂಕಿನ ಬಿದರಳ್ಳಿಯಲ್ಲಿ ಜಿಪಂ ಮಾಜಿ ಸದಸ್ಯ, ಮುಂಡರಗಿ ಮಂಡಳ ಬಿಜೆಪಿ ಅಧ್ಯಕ್ಷ ಹೇಮಗಿರೀಶ ಹಾವಿನಾಳ ಕುಟುಂಬ ಸಮೇತ ಬಂದು ಮತದಾನ ಮಾಡಿದರು.

    ತಹಸೀಲ್ದಾರ್ ಆಶಪ್ಪ ಪೂಜಾರಿ ಅವರು ಮತಗಟ್ಟೆಗಳನ್ನು ಪರಿಶೀಲಿಸಿದರು. ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗುಮ್ಮಗೋಳ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ಮತಗಟ್ಟೆ ತೆರೆಯಬೇಕಾಗಿದ್ದ ಶಾಲೆ ಆವರಣ ಭಣಗುಡುತ್ತಿತ್ತು.

    ಕಲಕೇರಿ ಮತಗಟ್ಟೆಯಲ್ಲಿ ವಾಮಾಚಾರ

    ನರಗುಂದ: ತಾಲೂಕಿನ 13 ಗ್ರಾಪಂ ವ್ಯಾಪ್ತಿಯ 160 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶೇ. 83.64ರಷ್ಟು ಮತದಾನವಾಗಿದೆ.

    ಕಲಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ದುಷ್ಕರ್ವಿುಗಳು ಶನಿವಾರ ರಾತ್ರಿ ಲಿಂಬೆಹಣ್ಣು, ಕುಂಕುಮ, ಅಂಗಾರ ಸುರಿದು ವಾಮಾಚಾರ ಮಾಡಿದ್ದರು ಎನ್ನಲಾಗಿದೆ. ಆದರೆ, ಇದನ್ನು ಕಂಡ ಮತಗಟ್ಟೆ ಅಧಿಕಾರಿಗಳು ರಾತ್ರಿಯೇ ಎಲ್ಲವನ್ನೂ ಸ್ವಚ್ಛಗೊಳಿಸಿ ಮತದಾನಕ್ಕೆ ಅವಕಾಶ ಕಲ್ಪಿಸಿದರು. ಅಂಗವಿಕಲ ಮತದಾರ ಬಾಬುಸಾಬ್ ನದಾಫ್ ವ್ಹೀಲ್​ಚೇರ್​ನಲ್ಲಿ ಬಂದು ಮೊದಲಿಗೆ ಮತದಾನ ಮಾಡಿರುವುದು ವಿಶೇಷವಾಗಿತ್ತು. ನಂತರ ಮತದಾರರು ಸರದಿಯಲ್ಲಿ ನಿಂತು ಹಕ್ಕು ಚಲಾಯಿಸಿದರು.

    ಚಿಕ್ಕನರಗುಂದ, ಭೈರನಹಟ್ಟಿ, ಹುಣಸೀಕಟ್ಟಿ, ಅರಿಷಿಣಗೋಡಿ ಗ್ರಾಮದ ಕೆಲ ಅಭ್ಯರ್ಥಿಗಳ ಕಾರ್ಯಕರ್ತರು ಮತಗಟ್ಟೆ ಆವರಣಗಳಲ್ಲಿ ಮತ ಯಾಚಿಸುವಾಗ ಪರಸ್ಪರರಲ್ಲಿ ಸಣ್ಣಪುಟ್ಟ ವಾಗ್ವಾದಗಳು ನಡೆದವು. ಪೊಲೀಸರು ಮಧ್ಯೆಪ್ರವೇಶಿಸಿ ಸಮಸ್ಯೆ ಬಗೆಹರಿಸಿದರು. ಕಣಕೀಕೊಪ್ಪದ ಶತಾಯುಷಿ ಸಂಕಮ್ಮ ಹದಲಿ, 96 ವರ್ಷದ ಹುಣಸೀಕಟ್ಟಿ ಗ್ರಾಮದ ಶಂಕರಗೌಡ ದ್ಯಾವನ್ನವರ ಹಾಗೂ ಚಿಕ್ಕನರಗುಂದ ಗ್ರಾಮದ ಮಲ್ಲಮ್ಮ ಹಾದಿಮನಿ ವ್ಹೀಲ್​ಚೇರ್​ನಲ್ಲಿ ಆಗಮಿಸಿ ಮತದಾನ ಮಾಡಿದರು.

    5 ಗಂಟೆ ನಂತರವೂ ಹಕ್ಕು ಚಲಾವಣೆ

    ತಾಲೂಕಿನ ಅತಿ ದೊಡ್ಡ ಗ್ರಾಪಂ ಹೊಂದಿರುವ ಕೊಣ್ಣೂರ ಮತ್ತು ಬನಹಟ್ಟಿ ಗ್ರಾಮದ ಮತದಾರರು ಜಮೀನಿನ ಕೆಲಸಕ್ಕೆ ತೆರಳಿದ್ದರು. ಬಹುತೇಕರು ಮಧ್ಯಾಹ್ನ ನಂತರ ಮತಗಟ್ಟೆಗೆ ಆಗಮಿಸಿದ್ದರಿಂದ ಸಂಜೆ 5.15ರವರೆಗೂ ಮತದಾನ ಪ್ರಕ್ರಿಯೆ ಮುಂದುವರಿಯಿತು. ನಿಗದಿತ ಅವಧಿಯಲ್ಲಿ ಮತಗಟ್ಟೆಗೆ ಆಗಮಿಸಿದ್ದ ಮತದಾರರಿಗೆ ಟೋಕನ್ ನೀಡಿ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು. ಹದಲಿ, ಕಲಕೇರಿ ಮತಗಟ್ಟೆಗಳಲ್ಲಿನ ಮತದಾನ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು, ಕೆ. ಆನಂದ ಪರಿಶೀಲಿಸಿದರು.

    ಚಳಿ ಲೆಕ್ಕಿಸದೇ ಮತ ಚಲಾವಣೆ

    ರೋಣ: ತಾಲೂಕಿನ ವಿವಿಧ ಗ್ರಾಪಂಗಳಲ್ಲಿ ಮತದಾರರು ಮೈ ಕೊರೆಯುವ ಚಳಿಯನ್ನು ಲೆಕ್ಕಿಸದೇ ಮತ ಚಲಾಯಿಸಿದ್ದು, ಶೇ. 78ರಷ್ಟು ಮತದಾನವಾಗಿದೆ.

    ಅರಹುಣಸಿ, ಸಂದಿಗವಾಡ, ಸವಡಿ, ಮಲ್ಲಾಪುರ, ಹಿರೇಹಾಳ, ಕೊತಬಾಳ ಗ್ರಾಮಗಳಲ್ಲಿ ಮತದಾರರು ಬೆಳಗ್ಗೆಯೇ ಮತಗಟ್ಟೆಗಳಿಗೆ ಆಗಮಿಸಿದ್ದರು. ಬಹುತೇಕ ಅಭ್ಯರ್ಥಿಗಳು ಮತದಾರರನ್ನು ಕರೆತರಲು ವಾಹನಗಳ ವ್ಯವಸ್ಥೆ ಮಾಡಿದ್ದರು. ಮತಗಟ್ಟೆಯಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

    ಪರಸ್ಪರ ಅಂತರ ಮಾಯ

    ಗಜೇಂದ್ರಗಡ: ತಾಲೂಕಿನ 9 ಗ್ರಾಪಂಗಳಿಗೆ ಭಾನುವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಮತದಾರರು ಪರಸ್ಪರ ಅಂತರ ಮರೆತಿದ್ದು ಬಿಟ್ಟರೆ ಶಾಂತಿಯುತ ಮತದಾನ ನಡೆಯಿತು.

    ಅಭ್ಯರ್ಥಿಗಳು ಅಲ್ಲಲ್ಲಿ ಟೆಂಟ್​ಗಳನ್ನು ನಿರ್ವಿುಸಿ ಮತದಾರರಿಗೆ ಕೈ ಮಗಿದು, ಆರೋಗ್ಯ ವಿಚಾರಿಸಿ ತಮಗೆ ಮತ ಹಾಕುವಂತೆ ಗುಂಪು ಕಟ್ಟಿಕೊಂಡು ಮನವಿ ಮಾಡುತ್ತಿದ್ದರು. ಇನ್ನೊಂದೆಡೆ ರಾಜೂರು, ಸೂಡಿ ಸೇರಿ ಕೆಲ ಗ್ರಾಮಗಳ ಮತಗಟ್ಟೆಗಳಲ್ಲಿ ಮತದಾರರು ಪರಸ್ಪರ ಅಂತರ ಮರೆತು ಸರದಿಯಲ್ಲಿ ನಿಂತಿದ್ದು ಕಂಡುಬಂತು. ರಾಜೂರ ಸರ್ಕಾರಿ ಶಾಲೆಯ ಮತಗಟ್ಟೆಗೆ ಭೇಟಿ ನೀಡಿದ ತಹಸೀಲ್ದಾರ್ ಅಶೋಕ ಕಲಘಟಗಿ ಅವರು ಮತದಾರರಿಗೆ ಪರಸ್ಪರ ಅಂತರ ಕಾಪಾಡಿಕೊಂಡು ಮತ ಚಲಾಯಿಸಿ ಎಂದು ಹೇಳಿದರು. ಮತದಾರರು ಮಾತ್ರ ಕಿವಿಗೊಡಲಿಲ್ಲ.

    ತಾಲೂಕಿನ 11 ಗ್ರಾಪಂಗಳ ಪೈಕಿ ಶಾಂತಗೇರಿ ಹಾಗೂ ಕುಂಟೋಜಿ ಗ್ರಾಪಂಗಳ ಅಧಿಕಾರ ಅವಧಿ ಪೂರ್ಣಗೊಂಡಿಲ್ಲ. ಹೀಗಾಗಿ ಇನ್ನುಳಿದ 9 ಗ್ರಾಪಂಗಳ 134 ಸ್ಥಾನಗಳಿಗೆ ಚುನಾವಣೆ ಘೊಷಣೆಯಾಗಿತ್ತು. ಆದರೆ, 8 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದ ಹೊರತುಪಡಿಸಿ ಹಿನ್ನೆಲೆಯಲ್ಲಿ ಗೋಗೇರಿ, ಗುಳಗುಳಿ, ಹಾಳಕೇರಿ, ಲಕ್ಕಲಕಟ್ಟಿ, ಮುಶಿಗೇರಿ, ನಿಡಗುಂದಿ, ರಾಜೂರ ರಾಂಪುರ ಹಾಗೂ ಸೂಡಿ ಗ್ರಾಪಂಗಳ 126 ಸ್ಥಾನಗಳಿಗೆ 389 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಅವರ ಹಣೆಬರಹ ಡಿ. 30ರಂದು ಪಟ್ಟಣದ ಸಿಬಿಎಸ್​ಇ ಶಾಲೆಯಲ್ಲಿ ನಡೆಯುವ ಮತ ಎಣಿಕೆಯಲ್ಲಿ ತಿಳಿಯಲಿದೆ.

    ತಾಲೂಕುವಾರು ಶೇಕಡವಾರು ಮತದಾನ

    ಮುಂಡರಗಿ-82.13

    ನರಗುಂದ-83.64

    ರೋಣ-77.41

    ಗಜೇಂದ್ರಗಡ-78.51

    ಒಟ್ಟು ಶೇ. 80.32ರಷ್ಟು ಮತದಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts