More

    8 ವೃದ್ಧರು ದೇವಸ್ಥಾನಕ್ಕೆ ಎತ್ತಂಗಡಿ!

    ರೋಣ: ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ವೃದ್ಧಾಶ್ರಮವನ್ನು ಮನೆಯ ಮಾಲೀಕರು ಖಾಲಿ ಮಾಡಿಸಿದ್ದರಿಂದ ಎಂಟು ವೃದ್ಧರು ದೇವಸ್ಥಾನದಲ್ಲಿ ವಾಸ್ತವ್ಯ ಹೂಡುವಂತಾದ ಘಟನೆ ಪಟ್ಟಣದಲ್ಲಿ ನಡೆದಿದೆ.

    ‘ತಾಯಿ ಬಳಗ’ ಎಂಬ ಹೆಸರಿನಲ್ಲಿ ಪ್ರಿಯಾಂಕ ಮಹಿಳಾ ವಿವಿಧೋದ್ದೇಶ ಸಂಘದ ಸಂಚಾಲಕಿ ಎಂ.ಬಿ. ಅಶ್ವಿನಿ ಅವರು, ಪಟ್ಟಣದ ನರಗುಂದ ರಸ್ತೆಯ ಶಿವಪೇಟೆ 7ನೇ ಕ್ರಾಸ್​ನ ಬಾಡಿಗೆ ಮನೆಯೊಂದರಲ್ಲಿ ವೃದ್ಧಾಶ್ರಮ ನಡೆಸುತ್ತಿದ್ದರು. ಆದರೆ, ಇದಕ್ಕೆ ಯಾವುದೇ ಪರವಾನಗಿ ಇರಲಿಲ್ಲ.

    ಕಾರಣಾಂತರಗಳಿಂದ ಮನೆ ಮಾಲೀಕರು ವೃದ್ಧಾಶ್ರಮ ಖಾಲಿ ಮಾಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ 8 ವೃದ್ಧರು ಸೋಮವಾರದಿಂದ ಪಟ್ಟಣದ ಮಡಿವಾಳ ಮಾಚಿದೇವ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ವಿಷಯ ತಿಳಿದು ಮಂಗಳವಾರ ದೇವಸ್ಥಾನ್ಕಕೆ ಭೇಟಿ ನೀಡಿದ ಸಿಡಿಪಿಒ ಬೆಟದಪ್ಪ ಮಾಳೆಕೊಪ್ಪ ಅವರು, ‘ವೃದ್ಧಾಶ್ರಮ ಪ್ರಾರಂಭಿಸುವ ಪೂರ್ವದಲ್ಲಿ ಸ್ವಂತ ಕಟ್ಟಡ, ವೃದ್ಧರ ಪಾಲನೆ-ಪೋಷಣೆಗೆ ಎಲ್ಲ ಸೌಲಭ್ಯಗಳಿದ್ದರೆ ಪರಿಶೀಲಿಸಿ ಅನುಮತಿ ನೀಡಲಾಗುವುದು. ಎಲ್ಲ ನಿಯಮ ಗಾಳಿಗೆ ತೂರಿ ಬಾಡಿಗೆ ಕಟ್ಟಡದಲ್ಲಿ ವೃದ್ಧಾಶ್ರಮ ನಡೆಸುತ್ತಿರುವುದೇ ತಪ್ಪು. ವಾರದ ಹಿಂದಷ್ಟೇ ವೃದ್ಧಾಶ್ರಮಕ್ಕೆ ಭೇಟಿ ನೀಡಿದ್ದೇವೆ. ಆಗ ಅಲ್ಲಿ ಇಬ್ಬರು ವೃದ್ಧರನ್ನು ಬಿಟ್ಟರೆ ಮತ್ಱಾರೂ ಇರಲಿಲ್ಲ. ನಿಮ್ಮ ವೃದ್ಧಾಶ್ರಮದಲ್ಲಿ ಯಾವುದೂ ಕಾನೂನು ರೀತಿಯಲ್ಲಿಲ್ಲ. ಹಠ ಮಾಡದೆ ಇಲ್ಲಿರುವ ವೃದ್ಧ ನ್ನು ನಮ್ಮ ವೃದ್ಧಾಶ್ರಮಕ್ಕೆ ಕಳುಹಿಸಿಕೊಡಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗೆ ತಿಳಿಸಿ ಕಾನೂನು ಕ್ರಮ ಕೈಗೊಂಡು ಇಲ್ಲಿರುವ ವೃದ್ಧರನ್ನು ಹುಲಕೋಟಿ, ಲಕ್ಷ್ಮೇಶ್ವರಕ್ಕೆ ಕರೆದೊಯ್ಯಲಾಗುವುದು’ ಎಂದು ಎಂ.ಬಿ. ಅಶ್ವಿನಿ ಅವರಿಗೆ ಎಚ್ಚರಿಕೆ ನೀಡಿದರು.

    ಆದರೆ ಇದಕ್ಕೆ ಎಂ.ಬಿ. ಅಶ್ವಿನಿ ಹಾಗೂ ವೃದ್ಧರು ಒಪ್ಪಲಿಲ್ಲ. ‘ವೃದ್ಧಾಶ್ರಮ ನಡೆಸುತ್ತಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಪಟ್ಟಣದ ಗುಲಗಂಜಿಮಠದ ಗುರುಪಾದ ದೇವರು 4 ಗುಂಟೆ ಜಮೀನು ದಾನವಾಗಿ ನೀಡಿದ್ದಾರೆ. ಇನ್ನೆರಡು ತಿಂಗಳಲ್ಲಿ ತಾತ್ಕಾಲಿಕವಾಗಿ ಕಟ್ಟಡ ನಿರ್ವಿುಸಿಕೊಂಡು ವೃದ್ಧಾಶ್ರಮ ನಡೆಸುತ್ತೇನೆ. ಅಲ್ಲಿಯವರೆಗೆ ನನಗೆ ಬಾಡಿಗೆ ಕಟ್ಟಡದಲ್ಲಿರುವಂತೆ ವ್ಯವಸ್ಥೆ ಕಲ್ಪಿಸಬೇಕು’ ಎಂದು ಎಂ.ಬಿ. ಅಶ್ವಿನಿ ಅವರು ಮನವಿ ಮಾಡಿದರು.

    ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ

    ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಜಿಲ್ಲಾ ಕಲ್ಯಾಣಾಧಿಕಾರಿ ಕೆ. ಮಹಾಂತೇಶ ಅವರನ್ನು ಸಂರ್ಪಸಿದಾಗ, ‘ತಾಯಿ ಬಳಗ ವೃದ್ಧಾಶ್ರಮದ ಸಂಯೋಜಕಿ ಎಂ.ಬಿ. ಅಶ್ವಿನಿ ಅವರಿಗೆ ವೃದ್ಧಾಶ್ರಮ ನಡೆಸಲು ಸರ್ಕಾರ ಅನುಮತಿ ನೀಡಿಲ್ಲ. ಇಲಾಖೆ ಅಧಿಕಾರಿಗಳು ಆ ವೃದ್ಧಾಶ್ರಮಕ್ಕೆ ಭೇಟಿ ನೀಡಿದಾಗ ಇಬ್ಬರು ವೃದ್ಧರನ್ನು ಬಿಟ್ಟರೆ ಬೇರಾರೂ ಇರಲಿಲ್ಲ. ಈಗ ಏಕಾಏಕಿ ಹತ್ತಾರು ವೃದ್ಧರನ್ನು ಕರೆದೊಯ್ದು ದೇವಸ್ಥಾನದಲ್ಲಿ ಬೀಡು ಬಿಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts