More

    8 ಜನರ ಪ್ರಾಣ ಉಳಿಸಿದವನಿಗಿಲ್ಲ ಸೂರು

    ಶರಣು ಮಹಾಗಾಂವ ಸೇಡಂ
    ಬಿಬ್ಬಳ್ಳಿ- ಕಾಚೂರ ಮಧ್ಯದ ಕಾಗಿಣಾ ನದಿ ನಡುಗಡ್ಡೆಯಲ್ಲಿ ಸಿಲುಕಿದ್ದ 8 ಯುವಕರನ್ನು ಜೀವದ ಹಂಗು ತೊರೆದು ರಕ್ಷಿಸಿದ ಮೀನುಗಾರ ಶರಣು ಹಣಮಂತ ಸಾಹಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಕೆಲವರಿಂದ ಸಾಹಸಿ ಮೀನುಗಾರನಿಗೆ ಶೌರ್ಯ ಹಾಗೂ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂಬ ಕೂಗು ಕೇಳಿಬರುತ್ತಿದೆ.
    ಜೇವರ್ಗಿ ತಾಲೂಕಿನ ಹಿಪ್ಪರಗಿ (ಮಂದೇವಾಲ) ಗ್ರಾಮದ ಶರಣು ಮೀನುಗಾರಿಕೆಯನ್ನೇ ನಂಬಿ ತಂದೆ ಜತೆ 20 ವರ್ಷದ ಹಿಂದೆ ಸೇಡಂಗೆ ವಲಸೆ ಬಂದಿದ್ದಾನೆ. ಚಿಂಚೋಳಿ ರಸ್ತೆಯ ಕೈಗಾರಿಕಾ ಪ್ರದೇಶದ ಗುಡಿಸಲಿನಲ್ಲಿ ತಾಯಿ, ಪತ್ನಿ, ಮೂವರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದಾನೆ. 4 ವರ್ಷದ ಹಿಂದೆ ತಂದೆ ತೀರಿಕೊಂಡಿದ್ದು, ಕುಟುಂಬದ ಜವಾಬ್ದಾರಿ ಶರಣು ಹೆಗಲಿಗೇರಿದೆ. ತಂದೆ ಕಸುಬನ್ನೇ ಮುಂದುವರಿಸಿ ಜೀವನದ ಬಂಡಿ ಎಳೆಯುತ್ತಿದ್ದಾನೆ.
    ತನ್ನ ಪ್ರಾಣವನ್ನು ಲೆಕ್ಕಿಸದೆ 8 ಯುವಕರನ್ನು ರಕ್ಷಣೆ ಮಾಡಿದ ಬಳಿಕ ಗ್ರಾಮಸ್ಥರು ಸತ್ಕರಿಸಲು ಬಂದಾಗ, ನನಗೊಂದು ಸೂರಿನ ವ್ಯವಸ್ಥೆ ಮಾಡಿ ಸಾಕು ಎಂದು ಹೇಳಿದ್ದ ಶರಣು, ಇದೊಂದು ದೊಡ್ಡ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾನೆ.
    ಮೈದುಂಬಿ ಹರಿಯುತ್ತಿದ್ದ ನದಿಯಲ್ಲಿ ಪ್ರಾಣದ ಹಂಗು ತೊರೆದು ಈಜಾಡಿ 8 ಜನರ ಪ್ರಾಣ ರಕ್ಷಿಸಿದ ಸಾಹಸಿಗನಿಗೆ ಸರ್ಕಾರ ಅಥವಾ ಸ್ಥಳೀಯ ಆಡಳಿತ ಸೂಕ್ತ ಸೂರು ಸೇರಿ ಅಗತ್ಯ ಸೌಕರ್ಯ ಕಲ್ಪಿಸಿಕೊಡಬೇಕು ಎಂಬ ಕೂಗು ಹೆಚ್ಚಾಗಿದೆ.

    ಮೀನುಗಾರಿಕೆಯಿಂದ ಬರುವ ಅಲ್ಪ ಹಣದಲ್ಲೇ ಸಂಸಾರದ ನೊಗ ಸಾಗಿಸುತ್ತಿದ್ದೇನೆ. ಮೂವರು ಮಕ್ಕಳನ್ನು ಶಾಲೆಗೆ ಕಳುಹಿಸಲು ಆಗದ ಸ್ಥಿತಿ ಇದೆ. ನದಿಗಳಲ್ಲಿ ಶವ ಸಿಗದೆ ಇದ್ದಾಗ ಪೊಲೀಸರೊಂದಿಗೆ ತೆರಳಿ ಸರಿ 5-6 ಮೃತದೇಹಗಳನ್ನು ಹೊರತೆಗೆದಿದ್ದೇನೆ. ಬಿಬ್ಬಳ್ಳಿಯಂಥ ಘಟನೆ ಜೀವನದಲ್ಲಿ ಮೊದಲ ಸಲ ಎದುರಿಸಿದ್ದೇನೆ. ನೀರಿನ ರಭಸಕ್ಕೆ ಎದೆಯೊಡ್ಡಿ ಯುವಕರನ್ನು ರಕ್ಷಿಸಿದ್ದು, ಜೀವ ಉಳಿಸಿದ ತೃಪ್ತಿ ನನಗಿದೆ. ವಾಸಿಸಲು ಮನೆ ಕಲ್ಪಿಸಿಕೊಟ್ಟರೆ ಋಣಿಯಾಗಿರುತ್ತೇನೆ.
    | ಶರಣು ಹಣಮಂತ, ಸಾಹಸಿ ಮೀನುಗಾರ

    ಶರಣು ಬಡ ಕುಟುಂಬದವನಾಗಿದ್ದು, ಪಟ್ಟಣದಲ್ಲಿ ಸಕರ್ಾರದಿಂದಲೇ ನಿವೇಶನ ಒದಗಿಸುವ ಮೂಲಕ ಸೂರು ಕಲ್ಪಿಸಿಕೊಡಬೇಕು. ಜತೆಗೆ ಶೌರ್ಯ ಅಥವಾ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಬೇಕು. ಇಂತಹವರು ಸಮಾಜದಲ್ಲಿ ಇರುವುದರಿಂದಲೇ ಅನೇಕರ ಜೀವ ಉಳಿಯಲು ಸಾಧ್ಯವಾಗಿದೆ.
    | ಸೋಮಶೇಖರ ಬಿಬ್ಬಳ್ಳಿ, ಕೋಲಿ ಸಮಾಜದ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts