More

    ಹುಬ್ಬಳ್ಳಿ: ನಗರದಲ್ಲಿ ಮಾರುಕಟ್ಟೆಗಳು ಬಂದ್ ಆಗಿ, ಅಂಗಡಿಗಳು ಮುಚ್ಚಿದ್ದರೂ ಜನರ ಓಡಾಟ ಮಾತ್ರ ಲಾಕ್​ಡೌನ್ ಅನ್ನೇ ಅಣಕಿಸುವಂತಿತ್ತು.

    ಬೈಕ್, ಆಟೊ, ಕಾರು, ಪಾದಚಾರಿಗಳ ಸಂಚಾರ ಲಾಕ್​ಡೌನ್ ಮಧ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜನತಾ ಬಜಾರ, ಎಂ.ಜಿ. ಮಾರ್ಕೆಟ್​ಗಳನ್ನು ಬಂದ್ ಮಾಡಲಾಗಿದ್ದರೂ ಬಹುತೇಕ ಬಡಾವಣೆಗಳಲ್ಲಿ ಜನರು ತರಕಾರಿ, ಹಣ್ಣುಗಳನ್ನು ಗುಂಪುಗೂಡಿ ಖರೀದಿಸುವುದು ಮಂಗಳವಾರವೂ ಮುಂದುವರಿದಿತ್ತು.

    ಮುಖ್ಯ ರಸ್ತೆ, ಒಳ ರಸ್ತೆಗಳಲ್ಲಿ ಲಾಕ್​ಡೌನ್ ನಿಯಮ ಗಾಳಿಗೆ ತೂರಿ ವಾಹನ ಸಂಚಾರ ಹೆಚ್ಚುತ್ತಿದ್ದರೂ ಪೊಲೀಸರು ತಮಗೇನೂ ಸಂಬಂಧವೇ ಇಲ್ಲವೆನ್ನುವಂತೆ ಕುಳಿತಿರುವುದು ಕುತೂಹಲ ಮೂಡಿಸುವಂತಿತ್ತು. ಕಳೆದ ನಾಲ್ಕೈದು ದಿನಗಳಿಂದ ಅನಗತ್ಯವಾಗಿ ಸಂಚರಿಸುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳದಿರುವುದು ವಾಹನ ಸವಾರರಿಗೆ ಮತ್ತಷ್ಟು ಪ್ರಚೋದನೆ ನೀಡುವಂತಾಗಿದೆ.

    ಈ ಮಧ್ಯೆ ಪಿಂಚಣಿ ಪಡೆಯುವುದಕ್ಕಾಗಿ ಬ್ಯಾಂಕ್ ಹಾಗೂ ಎಟಿಎಂಗಳಿಗೆ ಹೋಗುವ ಹಿರಿಯ ನಾಗರಿಕರ ಸಂಖ್ಯೆಯೂ ಹೆಚ್ಚುತ್ತಿದೆ. ನಗರದ ವಿವಿಧ ಬ್ಯಾಂಕ್ ಹಾಗೂ ಎಟಿಎಂಗಳ ಎದುರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹಿರಿಯ ನಾಗರಿಕರು ಸರದಿಯಲ್ಲಿ ನಿಂತಿದ್ದು ಕಂಡುಬಂದಿತು.

    ಕನಿಷ್ಠ 1 ಮೀಟರ್ ಅಂತರ ಕಾಯ್ದುಕೊಂಡು ನಿಲ್ಲುವಂತೆ ಬ್ಯಾಂಕ್​ನ ಭದ್ರತಾ ಸಿಬ್ಬಂದಿ ಹಲವು ಬಾರಿ ಸೂಚನೆ ನೀಡುತ್ತಿದ್ದರೂ, ಗ್ರಾಹಕರು ಮಾತ್ರ ಇದಾವುದೂ ತಮಗೆ ಕೇಳಿಯೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದರು.

    ಎಸ್​ಬಿಐ ಕೇಶ್ವಾಪುರ ಮುಖ್ಯ ಶಾಖೆಯಲ್ಲಿ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ಉದ್ದೇಶದಿಂದ ಮಧ್ಯದ ಕುರ್ಚಿಯಲ್ಲಿ ಯಾರೂ ಕೂಡದಂತೆ ದಾರ ಕಟ್ಟಲಾಗಿತ್ತು.

    ಧಾರವಾಡದಲ್ಲಿ: ವಿದ್ಯಾಕಾಶಿಯಲ್ಲಿ ಹಲವು ಕಡೆ ಲಾಕ್​ಡೌನ್ ಅರ್ಥ ಕಳೆದುಕೊಂಡಿದೆ. ದಿನಸಿ, ತರಕಾರಿ ಮತ್ತಿತರ ಅಗತ್ಯ ವಸ್ತು ಖರೀದಿಸುವಾಗ ಹಲವರು ಸಂಯಮ ತೋರದೇ ಇರುವುದರಿಂದ ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ. ಕೆಲಸವಿಲ್ಲದಿದ್ದರೂ ಬೈಕ್​ನಲ್ಲಿ ಸುತ್ತಾಡುವವರ ಸಂಖ್ಯೆ ಜಾಸ್ತಿಯಾಗಿದೆ. ಅಂಥವರಿಗೆ ಹೇಳಿ ಹೇಳಿ ಸುಸ್ತಾಗಿರುವ ಪೊಲೀಸರು ಅಲ್ಲಲ್ಲಿ ತಡೆದು ವಾಹನದ ದಾಖಲೆ ಪರಿಶೀಲಿಸುತ್ತಿದ್ದಾರೆ. ಆರಂಭದಲ್ಲಿಯಂತೆ ಲಾಠಿ ಏಟು ಕೊಟ್ಟು ಓಡಿಸುವುದನ್ನು ಪೊಲೀಸರು ಬಹುತೇಕ ಕೈಬಿಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts