More

    ಮಹನೀಯರನ್ನು ಸ್ಮರಿಸುವುದು ಭಾರತೀಯರ ಕರ್ತವ್ಯ

    ಪಾಂಡವಪುರ: ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಸಮಿತಿಯಿಂದ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ 75ನೇ ವರ್ಷದ ಗಣರಾಜ್ಯೋತ್ಸವ ಶುಕ್ರವಾರ ಅದ್ದೂರಿಯಾಗಿ ನೆರವೇರಿತು.

    ಉಪವಿಭಾಗಾಧಿಕಾರಿ ಎಲ್.ಎಂ.ನಂದೀಶ್ ಧ್ವಜಾರೋಹಣ ನೆರವೇರಿಸಿ ಪಟ್ಟಣದ ವಿವಿಧ ಶಾಲಾ ಮಕ್ಕಳಿಂದ ಧ್ವಜ ವಂದನೆ ಸ್ವೀಕರಿಸಿದರು. ಸಂವಿಧಾನ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸ್ವಾತಂತ್ರೃಕ್ಕಾಗಿ ಹೋರಾಡಿದ ಮಹನೀಯರಿಗೆ ಗೌರವ ಸಮರ್ಪಿಸಲಾಯಿತು.

    ಬಳಿಕ ಧ್ವಜ ಸಂದೇಶ ನೀಡಿ ಮಾತನಾಡಿದ ಎಲ್.ಎಂ. ನಂದೀಶ್, ದೇಶಕ್ಕಾಗಿ ಸರ್ವವನ್ನು ತ್ಯಾಗ ಮಾಡಿದ ಮಹನೀಯರನ್ನು ಗಣರಾಜ್ಯೋತ್ಸವ ಸಂದರ್ಭದಲ್ಲಿ ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದರು.ಪಾಂಡವಪುರ ಉಪವಿಭಾಗಕ್ಕೆ ಒಳಪಡುವ ನಾಲ್ಕು ತಾಲೂಕುಗಳಲ್ಲಿ ರೈತರಿಗೆ ಅನುಕೂಲವಾಗುವಂತೆ ಭೂ ವ್ಯಾಜ್ಯ ನಿರ್ವಹಣೆ ಮಾಡಿ ಪೌತಿ ಖಾತೆ ಹಾಗೂ ಪಹಣಿ ತಿದ್ದುಪಡಿಗೆ ಕಂದಾಯ ಇಲಾಖೆಯನ್ನು ಜನಸ್ನೇಹಿಯಾಗಿಸಲಾಗುವುದು ಎಂದರು.

    ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಅಂಬೇಡ್ಕರ್ ನೀಡಿರುವ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಸಂವಿಧಾನದ ಬಗ್ಗೆ ಅರಿವು ಮೂಡಿಸಲು ರಾಜ್ಯ ಸರ್ಕಾರ ಸಂವಿಧಾನ ಜಾಥಾ ನಡೆಸುತ್ತಿದೆ. ಇಂದಿನಿಂದ ಆರಂಭವಾಗಿರುವ ಜಾಥಾ ಫೆ.23ರವರೆಗೆ ನಡೆಯಲಿದ್ದು, ರಾಜ್ಯದ ಪ್ರತಿಯೊಂದು ಹಳ್ಳಿಯಲ್ಲೂ ಸಂಚರಿಸಿ ಜನರಲ್ಲಿ ಸಂವಿಧಾನ ಜಾಗೃತಿ ಮೂಡಿಸಲಿದೆ ಎಂದರು.

    ಯಾರೊಬ್ಬರೂ ತಾಲೂಕು ಕಚೇರಿಗೆ ಅಲೆಯದಂತೆ ಕಂದಾಯ ಇಲಾಖೆಯ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಿದ್ದೇನೆ. ಕಂದಾಯ ಇಲಾಖೆ ಅಧಿಕಾರಿಗಳು ಕ್ಷೇತ್ರದ ಪ್ರತಿಯೊಂದು ಗ್ರಾಪಂನಲ್ಲೂ ಎರಡು ವಾರ ವಾಸ್ತವ್ಯ ಹೂಡಿ ರೈತರ ಜಮೀನುಗಳನ್ನು ಸರ್ವೇ ಮಾಡಿಸಿ ಸಂಬಂಧಿಸಿದ ದಾಖಲೆಗಳನ್ನು ಲೋಪವಿಲ್ಲದಂತೆ ಸಿದ್ಧಪಡಿಸಲಿದ್ದಾರೆ. ಡಿಜಿಟಲೀಕರಣದಿಂದ ಈ ಕೆಲಸವನ್ನು ಶೀಘ್ರವಾಗಿ ಮುಗಿಸಲಾಗುವುದು ಎಂದರು.

    ತಹಸೀಲ್ದಾರ್ ಜಿ.ಎಸ್.ಶ್ರೇಯಸ್, ಉಪ ತಹಸೀಲ್ದಾರ್ ಎಸ್.ಸಂತೋಷ್, ಶಿರಸ್ತೇದಾರ್ ಮೋಹನ್, ಉಪವಿಭಾಗೀಯ ಆಸ್ಪತ್ರೆ ಮುಖ್ಯ ಆಡಳಿತಾಧಿಕಾರಿ ಡಾ.ಸಿ.ಎ.ಅರವಿಂದ್, ಎಡಿಎಲ್‌ಆರ್ ಡೋಳ್ಳೇಗೌಡ, ಬಿಇಒ ಬಿ.ಚಂದ್ರಶೇಖರ್, ಪುರಸಭೆ ಮುಖ್ಯಾಧಿಕಾರಿ ವೀಣಾ, ರೈತ ಸಂಘದ ಮುಖಂಡರಾದ ಕೆನ್ನಾಳು ನಾಗರಾಜು, ಎಸ್.ದಯಾನಂದ್, ಪಾರ್ಥಸಾರಥಿ, ದಸಂಸ ಮುಖಂಡ ಡಿ.ಕೆ. ಅಂಕಯ್ಯ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts