ಮಾಟಾ ಮಂತ್ರ ಮಾಡಿದವನಿಗೆ ನಿಗಿನಿಗಿ ಕೆಂಡದ ಮೇಲೆ ನೃತ್ಯ ಮಾಡಿಸಿದ ಜನ!

fire
Published on

ಥಾಣೆ: ಮಾಟಮಂತ್ರ ಮಾಡಿದ ಹಿನ್ನೆಲೆಯಲ್ಲಿ 75 ವರ್ಷದ ಮಾಂತ್ರಿಕನಿಗೆ ಶಿಕ್ಷೆಯಾಗಿ ಬೆಂಕಿ ಹೊತ್ತಿಸಿದ ಕಲ್ಲಿದ್ದಲಿನ ಮೇಲೆ ಕುಣಿಯುವಂತೆ ಜನ ಒತ್ತಾಯಿಸಿದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.

ಮಾರ್ಚ್ 4 ರಂದು ಮುರ್ಬಾದ್ ತಾಲೂಕಿನ ಕೆರ್ವೆಲೆ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಮಾಂತ್ರಿಕನಿಗೆ ಸುಟ್ಟ ಗಾಯಗಳಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿವರ: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಕೆಲವರು ಮಾಂತ್ರಿಕನನ್ನು ಹಿಡಿದುಕೊಂಡಿದ್ದಾರೆ. ಅಷ್ಟೇ ಅಲ್ಲ, ಉರಿಯುತ್ತಿರುವ ಕಲ್ಲಿದ್ದಲಿನ ಮೇಲೆ ನೃತ್ಯ ಮಾಡಲು ಬಲವಂತವಾಗಿ ಒತ್ತಾಯಿಸುತ್ತಿರುವುದು ಕಂಡುಬಂದಿದೆ.

ಗ್ರಾಮದ ದೇವಸ್ಥಾನದ ಬಳಿ ಸ್ಥಳೀಯರು ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆ ಸಮಯದಲ್ಲಿ 15-20 ಜನರು ಮಾಂತ್ರಿಕನ ಮನೆಗೆ ನುಗ್ಗಿ ಅವನನ್ನು ಹೊರಗೆಳೆದು ಕಾರ್ಯಕ್ರಮದ ಸ್ಥಳಕ್ಕೆ ಕರೆದೊಯ್ದು ಕಲ್ಲಿದ್ದಲಿನ ಮೇಲೆ ಬಲವಂತವಾಗಿ ನೃತ್ಯ ಮಾಡಲು ಒತ್ತಾಯಿಸಿದ್ದಾರೆ ಎಂದು ಮುರ್ಬಾದ್ ಠಾಣೆ ಇನ್ಸ್ ಪೆಕ್ಟರ್ ಪ್ರಮೋದ್ ಹೇಳಿದರು.

ಈತ ಮಾಟಮಂತ್ರ ಮಾಡುತ್ತಿದ್ದಾನೆ ಎಂದು ಆರೋಪಿಸಿ ಗ್ರಾಮದ ಕೆಲವರು ಥಳಿಸಿದ್ದಾರೆ. ವ್ಯಕ್ತಿಯ ಕಾಲು ಮತ್ತು ಬೆನ್ನಿನ ಮೇಲೆ ಸುಟ್ಟ ಗಾಯಗಳಾಗಿವೆ ಎಂದು ಅವರು ತಿಳಿಸಿದ್ದಾರೆ.

ಎಫ್‌ಐಆರ್ ದಾಖಲು: ಮಾಟಗಾರನ ಕುಟುಂಬದವರು ದೂರು ನೀಡಿದ ನಂತರ, ಪೊಲೀಸರು ಕೆಲವು ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 452, 323, 324, 341, 143, 147 ಮತ್ತು ಮಹಾರಾಷ್ಟ್ರದ 2013 ರ ನಿಬಂಧನೆಗಳ ಪ್ರಕಾರ ದೂರು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net