More

    ಬ್ರಿಟನ್‌ನಿಂದ 61 ಮಂದಿ ಕರಾವಳಿಗೆ, ಕರಾವಳಿ ಜಿಲ್ಲೆಗಳಿಗೂ ವೈರಸ್ ಆತಂಕ 

    ಮಂಗಳೂರು: ರೂಪಾಂತರಗೊಂಡು ತ್ವರಿತವಾಗಿ ಸೋಂಕು ಹಬ್ಬುವ ಮಾದರಿಯ ಕೋವಿಡ್ ವೈರಸ್ ಬ್ರಿಟನ್‌ನಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಿಗೂ ಸಣ್ಣ ಆತಂಕ ಎದುರಾಗಿದೆ. ಲಭ್ಯ ಮಾಹಿತಿಯಂತೆ ಬ್ರಿಟನ್‌ನಿಂದ ಡಿ.7ರಿಂದ ಇದುವರೆಗೆ ಒಟ್ಟು 56 ಮಂದಿ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದ್ದಾರೆ. ಡಿ.21ರಂದು ಉಡುಪಿ ಜಿಲ್ಲೆಗೆ 8 ಮಂದಿ ಆಗಮಿಸಿದ್ದಾರೆ. ಇದರಲ್ಲಿ ಐವರು ಬ್ರಿಟನ್‌ನಿಂದ, ಇಬ್ಬರು ಕೆನಡಾ ಹಾಗೂ ಓರ್ವ ಐರ್ಲೆಂಡ್‌ನಿಂದ ಆಗಮಿಸಿದ್ದಾರೆ. ಜಿಲ್ಲಾ ಆರೋಗ್ಯ ಇಲಾಖೆ ಎಲ್ಲರನ್ನೂ ಸಂಪರ್ಕಿಸಿದ್ದು, ಹೋಂ ಕ್ವಾರಂಟೈನ್ ವಿಧಿಸಿದೆ.

    ಬ್ರಿಟನ್‌ನಿಂದ ಮಂಗಳೂರಿಗೆ ನೇರ ವಿಮಾನಯಾನ ವ್ಯವಸ್ಥೆ ಇಲ್ಲ. ಈ 56 ಮಂದಿ ಬ್ರಿಟನ್‌ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಮಂಗಳೂರಿಗೆ ಬಸ್/ವಿಮಾನಗಳಲ್ಲಿ ಆಗಮಿಸಿದ್ದಾರೆ. ಹೆಚ್ಚಿನವರು ಡಿ.21ರಂದೇ ಆಗಮಿಸಿದ್ದಾರೆ, ಇಂಗ್ಲೆಂಡ್‌ನ ಏರ್‌ಪೋರ್ಟ್‌ನಲ್ಲಿ ಅವರನ್ನು ಕಳುಹಿಸಿಕೊಡುವಾಗಲೇ ಸ್ವದೇಶದಲ್ಲಿ 14 ದಿನ ಕ್ವಾರಂಟೈನ್ ನಿಯಮ ಪಾಲನೆ ಮಾಡುವಂತೆ ಸೂಚಿಸಲಾಗಿತ್ತು. ಅದರಂತೆ ಎಲ್ಲರೂ ನೆಗೆಟಿವ್ ವರದಿ ಬಂದಿದ್ದರೂ ಮನೆಯಲ್ಲೇ ಕಡ್ಡಾಯ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಿಎಚ್‌ಒ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.

    ಬಂದಿರುವ 56 ಮಂದಿಯಲ್ಲಿ ಒಬ್ಬರು ಸೋಮವಾರವೇ ಮತ್ತೆ ಇಂಗ್ಲೆಂಡ್‌ಗೆ ಮರಳಿದ್ದಾರೆ, ಹಾಗಾಗಿ 55 ಮಂದಿ ಮಾತ್ರ ಸದ್ಯ ಇದ್ದಾರೆ. ಬಂದಿರುವವರಲ್ಲಿ ಹೆಚ್ಚಿನವರು ಮಂಗಳೂರು ಮತ್ತು ಬಂಟ್ವಾಳದವರು.

    ಅವರೆಲ್ಲರಲ್ಲೂ ಕೋವಿಡ್ ನೆಗೆಟಿವ್ ಪರೀಕ್ಷಾ ವರದಿ ಇದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಡಿ.23ರಂದು ಮತ್ತೆ ಆರ್‌ಟಿ-ಪಿಸಿಆರ್ ಟೆಸ್ಟ್ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ. ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೆ, ಅಂತಹ ಮಾದರಿಗಳನ್ನು ಹೆಚ್ಚಿನ ಪರಿಶೀಲನೆಗಾಗಿ ಬೆಂಗಳೂರಿನ ನಿಮ್ಹಾನ್ಸ್ಗೆ ರವಾನಿಸಲಾಗುತ್ತದೆ ಎಂದು ಡಿಎಚ್‌ಒ ತಿಳಿಸಿದರು. ಬ್ರಿಟನ್‌ನಿಂದ ಬಂದವರೆಲ್ಲರೂ ಉನ್ನತ ವಿದ್ಯಾಭ್ಯಾಸ ಹೊಂದಿದ ಸುಶಿಕ್ಷಿತರೇ ಆಗಿದ್ದು, ಕ್ವಾರಂಟೈನ್ ನಿಯಮ ಪಾಲನೆ ಮಾಡಿದ್ದಾರೆ. ಈ ಕ್ರಿಸ್‌ಮಸ್ ಹಬ್ಬವನ್ನು ಮನೆಯವರೊಂದಿಗೆ ಸಂಭ್ರಮದಿಂದ ಕಳೆಯಲು ಬಹುತೇಕರು ತಾಯ್ನಡಿಗೆ ಆಗಮಿಸಿದ್ದರು.

    ಹೇಗೆ ತಪಾಸಣೆ?:ಬ್ರಿಟನ್‌ನಿಂದ ಡಿ.7ರ ನಂತರ ಆಗಮಿಸಿರುವ ಪ್ರಯಾಣಿಕರ ಪಟ್ಟಿ ತಯಾರಿಸಲಾಗಿದೆ. ಆ ಎಲ್ಲ ಪ್ರಯಾಣಿಕರು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಸ್ವಯಂಪ್ರೇರಿತವಾಗಿ ಬಂದು ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಬೇಕು ಎಂದು ಸೂಚಿಸಲಾಗಿದೆ.
    ವಿದೇಶದಿಂದ ಆಗಮಿಸಿರುವ ವ್ಯಕ್ತಿಗಳು ಇದ್ದಲ್ಲಿ ಸಾರ್ವಜನಿಕರು ತಮ್ಮ ವ್ಯಾಪ್ತಿಯ ವೈದ್ಯಾಧಿಕಾರಿಗಳು, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ತಕ್ಷಣ ಇಲಾಖೆ ಗಮನಕ್ಕೆ ತರುವಂತೆ ತಿಳಿಸಲಾಗಿದೆ.
    ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ-9449843050, ನೋಡೆಲ್ ಅಧಿಕಾರಿ ಕೋವಿಡ್ 19-9972343984, ಜಿಲ್ಲಾ ಸರ್ವೇಕ್ಷಣಾಧಿಕಾರಿ-9448887706 ಇವರನ್ನು ಸಂಪರ್ಕಿಸಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

    ವಿಮಾನ ನಿಲ್ದಾಣದಲ್ಲಿ ತಪಾಸಣೆ ಚುರುಕು: ಬ್ರಿಟನ್‌ನಿಂದ ಪ್ರಯಾಣಿಕರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಪ್ರಯಾಣಿಕರ ತಪಾಸಣೆ ಚುರುಕುಗೊಳಿಸಲಾಗಿದೆ. ಲಂಡನ್‌ನಿಂದ ನೇರವಾಗಿ ಯಾವುದೇ ವಿಮಾನ ಇದುವರೆಗೆ ಮಂಗಳೂರಿಗೆ ಬಂದಿಲ್ಲವಾದರೂ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ಮಂಗಳೂರು ಏರ್‌ಪೋರ್ಟ್‌ಗೆ ದುಬೈನಿಂದ ವಾರಕ್ಕೆ 3 ವಿಮಾನ, ದಮ್ಮಾಮ್‌ನಿಂದ ಒಂದು ವಿಮಾನ ಸಂಚಾರವಿದೆ. ಅಲ್ಲದೆ ದೇಶದೊಳಗಿನ ಪ್ರಮುಖ ನಗರಗಳಿಗೂ ವಿಮಾನಗಳು ಸಂಚರಿಸುತ್ತಿವೆ. ಕ್ವಾರಂಟೈನ್ ನಿಯಮ ಇಲ್ಲದಿದ್ದುದರಿಂದ ಇದುವರೆಗೆ ಬಂದವರೆಲ್ಲರೂ ಕ್ವಾರಂಟೈನ್‌ಗೆ ಒಳಗಾಗಿಲ್ಲ. ಇನ್ನು ಮುಂದೆ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ಟೆಸ್ಟ್ ಕಡ್ಡಾಯ ಮಾಡಲು ಜಿಲ್ಲಾಡಳಿತ ಯೋಜಿಸಿದೆ.

    ಉಡುಪಿಯಲ್ಲಿ ಟೆಸ್ಟ್ ಪೂರ್ಣ: ಬ್ರಿಟನ್‌ನಲ್ಲಿ ಕರೊನಾ ಸೋಂಕು ರೂಪಾಂತರಗೊಂಡು ಆತಂಕ ಹುಟ್ಟಿಸಿದ ಹಿನ್ನೆಲೆಯಲ್ಲಿ, ಉಡುಪಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಜಿಲ್ಲೆಗೆ ಆಗಮಿಸಿದ 8 ಮಂದಿಯನ್ನೂ ಮಂಗಳವಾರ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಿದ್ದು, ಕಟ್ಟುನಿಟ್ಟಿನ ಹೋಮ್ ಕ್ವಾರಂಟೈನ್ ವಿಧಿಸಲಾಗಿದೆ. ಪರೀಕ್ಷೆ ವರದಿ ಡಿ.23ರಂದು ಬರಲಿದೆ. ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ. ಎಂಟು ಮಂದಿಯಲ್ಲಿ ಒಬ್ಬರು ಕುಂದಾಪುರ, ನಾಲ್ವರು ಉಡುಪಿ ತಾಲೂಕಿನವರು ಹಾಗೂ ಮೂವರು ಕಾರ್ಕಳ ತಾಲೂಕಿನವರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ದ.ಕ. 46, ಉಡುಪಿ 6 ಪಾಸಿಟಿವ್: ದ.ಕ. ಜಿಲ್ಲೆಯಲ್ಲಿ ಮಂಗಳವಾರ 46 ಮಂದಿಗೆ ಕರೊನಾ ಬಾಧಿಸಿದೆ. ಯಾವುದೇ ಸಾವು ಸಂಭವಿಸಿಲ್ಲ. ಒಟ್ಟು 47 ಮಂದಿ ಡಿಸ್‌ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಪಾಸಿಟಿವ್ ಕೇಸ್ 32,659 ಆಗಿದ್ದರೆ ಸಕ್ರಿಯ ಪ್ರಕರಣಗಳು 436 ಇವೆ. ಡಿಸ್‌ಚಾರ್ಜ್ ಆದವರ ಒಟ್ಟು ಸಂಖ್ಯೆ 31491ಕ್ಕೇರಿಕೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ 15 ಮಂದಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದೆ. 7 ಮಂದಿ ಸೋಂಕಿನಿಂದ ಗುಣವಾಗಿದ್ದು, ಜಿಲ್ಲೆೆಯಲ್ಲಿ ಸದ್ಯ 78 ಸಕ್ರಿಯ ಕೋವಿಡ್ ಪ್ರಕರಣಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts