More

    ಟೋಕಿಯೊ ಒಲಿಂಪಿಕ್ಸ್ ಬಳಿಕ ಪ್ಯಾರಾಲಿಂಪಿಕ್ಸ್‌ನಲ್ಲೂ ಭರ್ಜರಿ ಪದಕ ಬೇಟೆಗೆ ಸಜ್ಜಾಗಿದೆ ಭಾರತ

    ನವದೆಹಲಿ: ಮುಂಬರುವ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ 54 ಕ್ರೀಡಾಪಟುಗಳ ತಂಡ ಭಾಗವಹಿಸಲಿದೆ. ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮತ್ತು ರಾಷ್ಟ್ರೀಯ ಪ್ಯಾರಾ ಕ್ರೀಡಾ ಆಡಳಿತ ಸಂಸ್ಥೆಯ ವತಿಯಿಂದ ಗುರುವಾರ ತಂಡಕ್ಕೆ ನೀಡಲಾದ ಬೀಳ್ಕೊಡುಗೆಯ ವೇಳೆ ಈ ಮಾಹಿತಿ ಖಚಿತಪಟ್ಟಿದೆ. ಭಾರತ ಒಟ್ಟು 9 ಕ್ರೀಡೆಗಳಲ್ಲಿ ಸ್ಪರ್ಧಿಸಲಿದೆ.

    ಜಾವೆಲಿನ್ ಥ್ರೋ ಪಟುಗಳಾದ ದೇವೇಂದ್ರ ಜಜಾರಿಯಾ (ಎಫ್​-46 ವಿಭಾಗ), ವಿಶ್ವ ಚಾಂಪಿಯನ್ ಜಾವೆಲಿನ್ ಎಸೆತಗಾರ ಸಂದೀಪ್ ಚೌಧರಿ (ಎಫ್​-64) ಮತ್ತು ಹೈಜಂಪ್ ಪಟು ಮರಿಯಪ್ಪನ್ ತಂಗವೇಲು (ಟಿ-63 ವಿಭಾಗ) ಟೋಕಿಯೊದಲ್ಲಿ ಸ್ವರ್ಣ ಪದಕ ಜಯಿಸುವ ನಿರೀಕ್ಷೆ ಹೊಂದಿದ್ದಾರೆ. ಜಜಾರಿಯಾ ಈ ಮುನ್ನ 2004 ಮತ್ತು 2016ರಲ್ಲೂ ಚಿನ್ನ ಜಯಿಸಿದ್ದರೆ, ತಂಗವೇಲು 2016ರ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದರು.

    ಇದನ್ನೂ ಓದಿ: 2024ರ ಒಲಿಂಪಿಕ್ಸ್‌ವರೆಗೂ ಲವ್ಲಿನಾಗೆ ಪ್ರತಿ ತಿಂಗಳು 1 ಲಕ್ಷ ರೂ. ಸ್ಕಾಲರ್‌ಶಿಪ್!

    ತಮಿಳುನಾಡಿನ ಮರಿಯಪ್ಪನ್ ತಂಗವೇಲು ಆಗಸ್ಟ್ 24ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಭಾರತ ತಂಡದ ಧ್ವಜಧಾರಿಯೂ ಆಗಿರುತ್ತಾರೆ. ಸೆಪ್ಟೆಂಬರ್ 5ರಂದು ಕ್ರೀಡಾಕೂಟ ಮುಕ್ತಾಯಗೊಳ್ಳಲಿದೆ.

    ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ 19 ಕ್ರೀಡಾಪಟುಗಳಷ್ಟೇ ಭಾಗವಹಿಸಿದ್ದರು ಮತ್ತು 2 ಚಿನ್ನ, 1 ಬೆಳ್ಳಿ, 1 ಕಂಚು ಜಯಿಸಿದ್ದರು. ಈ ಬಾರಿ 3 ಪಟ್ಟು ದೊಡ್ಡ ತಂಡ ಭಾಗವಹಿಸುತ್ತಿದ್ದು, ಇನ್ನಷ್ಟು ಹೆಚ್ಚಿನ ಪದಕವನ್ನೂ ಜಯಿಸುವ ನಿರೀಕ್ಷೆ ಇದೆ ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ. ಯುರೋ ಸ್ಪೋರ್ಟ್ಸ್ ಮತ್ತು ಡಿಡಿ ಸ್ಪೋರ್ಟ್ಸ್ ಚಾನಲ್‌ನಲ್ಲಿ ಸ್ಪರ್ಧೆಗಳು ನೇರಪ್ರಸಾರ ಕಾಣಲಿವೆ.

    ಕರ್ನಾಟಕದ ಮೂವರು ಸ್ಪರ್ಧೆ
    ಕರ್ನಾಟಕದ ಮೂವರು ಕ್ರೀಡಾಪಟುಗಳು ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ. ನಿರಂಜನ್ ಮುಕುಂದನ್ ಈಜು ಮತ್ತು ಸಕಿನಾ ಖತುನ್ ಪವರ್‌ಲಿಫ್ಟಿಂಗ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಉತ್ತರ ಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿರುವ ಕರ್ನಾಟಕದ ಸುಹಾಸ್ ಯತಿರಾಜ್ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಸ್ಪರ್ಧಿಸಲಿದ್ದಾರೆ.

    ಒಲಿಂಪಿಕ್ಸ್ ಪದಕ ವಿಜೇತರು ಪಡೆದ ಬಹುಮಾನಕ್ಕೆ ಕಟ್ಟಬೇಕಿರುವ ತೆರಿಗೆ ಎಷ್ಟು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts