More

    ಕೆಎಸ್‌ಆರ್‌ಟಿಸಿಗೆ ಬಂತು ಶಕ್ತಿ: ಪುತ್ತೂರು, ಮಂಗಳೂರು ವ್ಯಾಪ್ತಿಯಲ್ಲಿ 54.55 ಲಕ್ಷ ಮಹಿಳೆಯರ ಪ್ರಯಾಣ

    ಶ್ರವಣ್ ಕುಮಾರ್ ನಾಳ, ಗೋಪಾಲಕೃಷ್ಣ ಪಾದೂರು

    ದ.ಕ. ಹಾಗೂ ಉಡುಪಿ ವ್ಯಾಪ್ತಿಯಲ್ಲಿ ಖಾಸಗಿ ಬಸ್ ಸಂಚಾರದ ಬಿಗಿಮುಷ್ಟಿಯ ಮಧ್ಯೆಯೂ, ಕೆಎಸ್‌ಆರ್‌ಟಿಸಿಗೆ ಸರ್ಕಾರದ ‘ಶಕ್ತಿ’ ಯೋಜನೆ ಬಲ ತುಂಬಿದೆ. ಯೋಜನೆ ಆರಂಭದಿಂದ ಇಲ್ಲಿಯವರೆಗೆ ಪುತ್ತೂರು, ಮಂಗಳೂರು ವಿಭಾಗ ವ್ಯಾಪ್ತಿಯಲ್ಲಿ 54.55 ಲಕ್ಷ ಮಹಿಳೆಯರು ಪ್ರಯಾಣಿಸಿ ಯೋಜನೆಯ ಲಾಭ ಪಡೆದಿದ್ದಾರೆ.

    ಜೂನ್ 11ರಂದು ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆ ಜಾರಿಗೊಳಿಸಿತ್ತು. ಈ ಯೋಜನೆಯಂತೆ ಮಹಿಳಾ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣ ಘೋಷಿಸಲಾಗಿತ್ತು. ಯೋಜನೆ ಜಾರಿ ಬಳಿಕ ದ.ಕ. ಹಾಗೂ ಉಡುಪಿ ಜಿಲ್ಲೆಯ ಖಾಸಗಿ ಬಸ್ ಸಂಚಾರಕ್ಕೆ ಕೆಎಸ್‌ಆರ್‌ಟಿಸಿ ಸೆಡ್ಡು ಹೊಡೆದಿದೆ. ಖಾಸಗಿ ಬಸ್ ಸಂಚಾರ ವ್ಯವಸ್ಥೆ ಹೆಚ್ಚಿರುವ ಈ ಜಿಲ್ಲೆಗಳಲ್ಲಿ ಈ ಯೋಜನೆ ಪ್ರಯೋಜನ ಇಲ್ಲ ಎಂದೇ ಊಹಿಸಲಾಗಿತ್ತು. ಆದರೆ, ಜುಲೈ 16ರವರೆಗಿನ ಮಾಹಿತಿಯಂತೆ, ಮಂಗಳೂರು ಹಾಗೂ ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣ ಕಚೇರಿ (ಡಿಸಿ) ವ್ಯಾಪ್ತಿಯಲ್ಲಿ 54,55, 531 ಮಹಿಳೆಯರು ಪ್ರಯಾಣಿಸಿದ್ದಾರೆ. ಹೀಗಾಗಿ ಬೆಂಗಳೂರಿನ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಗೆ 18,96,36,983 ಕೋಟಿ ರೂ.ವನ್ನು ರಾಜ್ಯ ಸರ್ಕಾರ ಪಾವತಿ ಮಾಡಬೇಕಾಗುತ್ತದೆ.

    ಕಳೆದ ವರ್ಷ ಜೂನ್-ಜುಲೈ ತಿಂಗಳಲ್ಲಿ ಮಂಗಳೂರು ಹಾಗೂ ಪುತ್ತೂರು ವಿಭಾಗದ ಒಟ್ಟು ಸಂಗ್ರಹಿತ ಮೊತ್ತ 26.71 ಕೋಟಿ ರೂ. ಆಗಿತ್ತು. ಶಕ್ತಿ ಯೋಜನೆ ಆರಂಭದಿಂದ ಈವರೆಗೆ ಮಹಿಳಾ ಪ್ರಯಾಣಿಕರನ್ನು ಹೊರತುಪಡಿಸಿ ಒಟ್ಟು 12.41 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶಕ್ತಿ ಯೋಜನೆಯ ಹಣ ಹಾಗೂ ಉಳಿದ ಸಂಗ್ರಹಿತ ಮೊತ್ತ ಸೇರಿದಂತೆ ಮಂಗಳೂರು ಹಾಗೂ ಪುತ್ತೂರು ವಿಭಾಗಗಳ ಆದಾಯ ಹೆಚ್ಚಿದೆ.

    ಹೆಚ್ಚುವರಿ ಬಸ್‌ಗಳಿಗೆ ಬೇಡಿಕೆ

    ಶಕ್ತಿ ಯೋಜನೆಗೆ ಉಡುಪಿ ಜಿಲ್ಲೆಯ ಮಹಿಳೆಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಕೆಎಸ್‌ಆರ್‌ಟಿಟಿ, ಮಂಗಳೂರು ವಿಭಾಗ ಸಹಾಯಕ ಸಂಚಾರ ನಿಯಂತ್ರಣಾಧಿಕಾರಿ ನಿರ್ಮಲಾ ಹೇಳಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮಹಿಳೆಯರಿಂದ ಬೇಡಿಕೆ ಬರುತ್ತಿದೆ. ಜಿಲ್ಲೆಗೆ ಹೆಚ್ಚುವರಿ ಬಸ್ ಮತ್ತು ಸಿಬ್ಬಂದಿ ನಿಯೋಜನೆ ಮತ್ತು ಹೊಸ ಮಾರ್ಗಗಳಲ್ಲಿ ಸಂಚರಿಸಲು ಪರ್ಮಿಟ್ ನೀಡಲು ಶೀಘ್ರ ಕ್ರಮ ಕೋರಿ ಬೆಂಗಳೂರಿನ ಕೇಂದ್ರ ಕಚೇರಿಗೆ ಪತ್ರ ಬರೆಯಲಾಗಿದೆ ಎಂದರು.

    ಶಕ್ತಿ ಯೋಜನೆಗೆ ಪುತ್ತೂರು ವಿಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈವರೆಗೆ 31,80,117 ಮಹಿಳಾ ಪ್ರಯಾಣಿಕರು ಲಾಭ ಪಡೆದಿದ್ದು, 10.49 ಕೋಟಿ ರೂ.ಆದಾಯ ಬಂದಿದೆ. ಬೆಂಗಳೂರಿನ ಕೇಂದ್ರ ಕಚೇರಿಗೆ ಸರ್ಕಾರದಿಂದ ಯೋಜನಾ ಮೊತ್ತ ಸಂದಾಯ ಆಗಲಿದೆ.
    -ಜಯಕರ ಶೆಟ್ಟಿ, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ, ಪುತ್ತೂರು ವಿಭಾಗ

    ಮಂಗಳೂರು ಜಿಲ್ಲಾ ಕೇಂದ್ರ ಆಗಿರುವುದರಿಂದ ಹೊರಜಿಲ್ಲೆಯ ಪ್ರಯಾಣಿಕರ ಆಗಮನ ಹೆಚ್ಚಾಗಿತ್ತು. ಶಕ್ತಿ ಯೋಜನೆಯಿಂದ ಪ್ರತಿದಿನ ಸರಾಸರಿ 65,012 ಮಹಿಳಾ ಪ್ರಯಾಣಿಕರಿಂದ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗಕ್ಕೆ 24.1ಲಕ್ಷ ರೂ.ಆದಾಯ ಬರುತ್ತಿದೆ.
    – ರಾಜೇಶ್ ಶೆಟ್ಟಿ, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ, ಮಂಗಳೂರು ವಿಭಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts