More

    ಮುಂದಿನ ತಿಂಗಳು ನಡೆಯಲಿರೋ ದೆಹಲಿ ವಿಧಾನಸಭಾ ಚುನಾವಣೆ ಗೆಲ್ಲಲು ಮೆಗಾ ಪ್ಲಾನ್​ ರೂಪಿಸಿರುವ ಬಿಜೆಪಿ

    ನವದೆಹಲಿ: ಮುಂದಿನ ತಿಂಗಳು ಎದುರಾಗಲಿರುವ ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಗೆ ಬಿಜೆಪಿ ಮೆಗಾ ಪ್ಲಾನ್​ ರೂಪಿಸಿದೆ. ಶತಾಯಗತಾಯ ದೆಹಲಿ ಗದ್ದುಗೆ ಏರುವ ದೃಷ್ಟಿಯಿಂದ ಹಿಂದೆಂದೂ ಕಂಡಿರದ ರೀತಿ 5 ಸಾವಿರ ಸಮಾವೇಶಗಳನ್ನು ನಡೆಸಲು ಬಿಜೆಪಿ ಯೋಜನೆ ರೂಪಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಪ್ರಸ್ತುತ ದೆಹಲಿ ಗಾದಿಯನ್ನು ಹಿಡಿದಿರುವ ಆಮ್​ ಆದ್ಮಿ ಪಾರ್ಟಿಯನ್ನು ಕೆಳಗಿಳಿಸಲು ಬಿಜೆಪಿ ಭರ್ಜರಿ ಪ್ಲಾನ್ ಮಾಡಿದೆ. ಒಟ್ಟು 70 ವಿಧಾನಸಭಾ ಕ್ಷೇತ್ರಗಳಲ್ಲಿ ದಿನವೊಂದಕ್ಕೆ ಪ್ರತಿ ಕ್ಷೇತ್ರದಲ್ಲಿ 3 ರಿಂದ 4 ಸಮಾವೇಶಗಳನ್ನು ನಡೆಸಲು ಬಿಜೆಪಿ ತಯಾರಿ ನಡೆಸಿದೆ. ಪ್ರತಿದಿನ 250 ಸಮಾವೇಶದಂತೆ ಮುಂದಿನ 20 ದಿನಗಳಲ್ಲಿ ಬರೋಬ್ಬರಿ 5 ಸಾವಿರ ಸಮಾವೇಶ ನಡೆಸಲು ಬಿಜೆಪಿ ಮೆಗಾ ಯೋಜನೆ ಸಿದ್ಧಪಡಿಸಿಕೊಂಡಿದೆ ಎಂದು ತಿಳಿದುಬಂದಿದೆ.

    ಒಟ್ಟು 5 ಸಾವಿರ ಸಾರ್ವಜನಿಕ ಸಭೆಗಳಲ್ಲಿ ಪ್ರತಿಯೊಂದು ಸಭೆಯಲ್ಲಿಯೂ 200ಕ್ಕಿಂತ ಹೆಚ್ಚು ಮಂದಿ ಸೇರದಂತೆ ಹಾಗೂ ಸಣ್ಣ ಸಮಾವೇಶಗಳನ್ನು ನಡೆಸುವಂತೆ ಕೇಂದ್ರದ ಬಿಜೆಪಿ ನಾಯಕರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.

    ಕೇಂದ್ರ ಸಂಪುಟದ ಹಿರಿಯ ಸಚಿವರು ಸೇರಿ ಬಿಜೆಪಿ ಪ್ರಮುಖ 100 ನಾಯಕರು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಈ ಸಂಬಂಧ ಪ್ರಚಾರ ಪಟ್ಟಿಯನ್ನು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ, ಸುಮಾರು 10ಕ್ಕಿಂತ ಹೆಚ್ಚು ಸಮಾವೇಶಗಳಲ್ಲಿ ಭಾಗಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿ ಬಿಜೆಪಿ ಘಟಕ ಮನವಿ ಮಾಡಿಕೊಂಡಿದ್ದು, ಒಟ್ಟಾರೆ ದೆಹಲಿ ಗದ್ದುಗೆ ಮೇಲೆ ಬಿಜೆಪಿ ದೃಷ್ಟಿ ನೆಟ್ಟಿದೆ.

    ಶುಕ್ರವಾರವಷ್ಟೇ ಬಿಜೆಪಿಯು 57 ಅಭ್ಯರ್ಥಿಗಳ ಮೊದಲನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ, ಸಿಎಂ ಕೇಜ್ರಿವಾಲ್ ಪ್ರತಿಸ್ಪರ್ಧಿಯನ್ನು ಬಿಜೆಪಿ ಈವರೆಗೂ ಘೋಷಣೆ ಮಾಡಿಲ್ಲ. ದೆಹಲಿ ಚುನಾವಣೆ ಫೆಬ್ರವರಿ 8ರಂದು ನಡೆಯಲಿದ್ದು, ಈಗಾಗಲೇ ಆಮ್​ ಆದ್ಮಿ ಪಾರ್ಟಿ 70 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್​ ಇನ್ನೂ ಕೂಡ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಬೇಕಿದೆ.

    ಕಳೆದ ಬಾರಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್​ 67 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಕ್ಲೀನ್​ ಸ್ವೀಪ್​ ಮಾಡಿತ್ತು. ಬಿಜೆಪಿ ಕೇವಲ 3 ಸ್ಥಾನಗಳಿಗೆ ಮಾತ್ರ ತೃಪ್ತಿಪಟ್ಟಿತ್ತು. ಆದರೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎಲ್ಲ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸವನ್ನು ಹೊಂದಿದ್ದು, ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಫೆ.11ಕ್ಕೆ ಹೊರಬೀಳಲಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts