ಸಿಂಧನೂರು: ಕೊಪ್ಪಳ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಮಸ್ಕಿ-ಸಿಂಧನೂರು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅಟಲ್ ಜ್ಯೋತಿ ಯೋಜನೆಯಡಿ ಶೀಘ್ರ 500 ಸೋಲಾರ್ ಹೈವೋಲ್ಟೆಜ್ ಸ್ಟ್ರೀಟ್ ಲೈಟ್ಸ್ ಅಳವಡಿಸಿ ನಗರ ಹಾಗೂ ಗ್ರಾಮೀಣ ಭಾಗಗಳನ್ನು ವಿದ್ಯುತ್ ದೀಪಗಳಿಂದ ಬೆಳಗಿಸಲಾಗುವುದು ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ತಿಳಿಸಿದರು.
ನಗರದ ಜಿಪಂ ಸದಸ್ಯ ಅಮರೇಗೌಡ ವಿರುಪಾಪುರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ಅಟಲ್ ಜ್ಯೋತಿ ಯೋಜನಾ ಯೋಜನೆಯಡಿ 500 ಸೋಲಾರ್ ಹೈವೋಲ್ಟೆಜ್ ಸ್ಟ್ರೀಟ್ ಲೈಟ್‌ಗಳ ಅಳವಡಿಕೆಗೆ ತಗಲುವ ವೆಚ್ಚದಲ್ಲಿ ಶೇ.25 ರಷ್ಟು 2019-20 ನೇ ಸಾಲಿನ ಕೊಪ್ಪಳ ಸಂಸದರ ನಿಧಿಯಿಂದ 26 ಲಕ್ಷ ರೂ. ನೀಡಲಾಗಿದೆ. ಉಳಿದ ಹಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುವವು. ಈ ಕುರಿತು ರಾಯಚೂರು ಡಿಸಿ ಆರ್.ವೆಂಕಟೇಶ ಕುಮಾರ್ ಜತೆ ಚರ್ಚಿಸಿದ್ದು ಶೀಘ್ರ ಯೋಜನೆ ಜಾರಿಗೊಳಿಸಲಾಗುವುದು ಎಂದರು.
ತುಂಗಭದ್ರಾ ಕಾಡಾ ಅಧ್ಯಕ್ಷ ಆರ್. ಬಸನಗೌಡ ತುರ್ವಿಹಾಳ, ಜಿಪಂ ಸದಸ್ಯ ಅಮರೇಗೌಡ ವಿರುಪಾಪುರ, ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ ಜೀನೂರು, ಕೆ.ಪ್ರಶಾಂತ ಪ್ರಕಾಶ, ನಯೋಪ್ರಾ ಸದಸ್ಯರಾದ ಜಡಿಯಪ್ಪ ಹೂಗಾರ, ರೇಣುಕಪ್ಪ ಬಸಾಪುರ, ಅಮರೇಶ ಇತರರು ಇದ್ದರು.