More

    ಶಾಲೆಗೆ ಅರ್ಧದಷ್ಟು ಶಿಕ್ಷಕರು ಹಾಜರು!

    ವಿಜಯವಾಣಿ ಸುದ್ದಿಜಾಲ ಹಾವೇರಿ

    ಸರ್ಕಾರದ ಆದೇಶದಂತೆ ಸೋಮವಾರದಿಂದ ಶಾಲೆಗಳು ಆರಂಭಗೊಂಡಿವೆ. ವಿದ್ಯಾರ್ಥಿಗಳು ಬಾರದೇ ಇದ್ದರೂ ಶಿಕ್ಷಕರು ಶಾಲೆಗೆ ಕಡ್ಡಾಯವಾಗಿ ಹಾಜರಾಗಲು ಸೂಚಿಸಲಾಗಿತ್ತು. ಈ ಕುರಿತು ಜಿಲ್ಲೆಯಲ್ಲಿ ‘ವಿಜಯವಾಣಿ’ ನಡೆಸಿದ ರಿಯಾಲಿಟಿ ಚೆಕ್​ನಲ್ಲಿ, ಕೆಲ ಶಾಲೆಗಳಲ್ಲಿ ಸಂಪೂರ್ಣವಾಗಿ ಶಿಕ್ಷಕರು ಹಾಜರಾಗಿದ್ದರೆ, ಇನ್ನು ಕೆಲ ಶಾಲೆಗಳಲ್ಲಿ ಅರ್ಧದಷ್ಟು ಶಿಕ್ಷಕರು ಹಾಜರಾಗಿದ್ದು ಕಂಡುಬಂತು.

    ಶಾಲೆಗಳಿಗೆ ಶಿಕ್ಷಕರು ಹಾಜರಾದರೂ ವಿದ್ಯಾರ್ಥಿಗಳಿಲ್ಲದೆ ಇರುವುದರಿಂದ ಮುಖ್ಯಶಿಕ್ಷಕರ ಕೊಠಡಿ ಮಾತ್ರ ತೆರೆದು ಶಿಕ್ಷಕರು ಅಲ್ಲಿಯೇ ಕುಳಿತುಕೊಂಡಿದ್ದರು. ಕೆಲ ಶಿಕ್ಷಕರು ವಿವಿಧ ಪಠ್ಯದ ಓದು ಹಾಗೂ ಬರಹದಲ್ಲಿ ತೊಡಗಿದ್ದರೆ, ಕೆಲವರು ಹರಟೆ ಹೊಡೆಯುತ್ತಿದ್ದರು.

    ಹಾವೇರಿಯ ಗುರುಭವನದ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8 ಶಿಕ್ಷಕರಿದ್ದು, ಎಲ್ಲರೂ ಹಾಜರಾಗಿದ್ದರು. ರಾಣೆಬೆನ್ನೂರಿನ ಮುನ್ಸಿಪಲ್ ಶಾಲೆಯಲ್ಲಿ 10 ಶಿಕ್ಷಕರಿದ್ದು, 4 ಶಿಕ್ಷಕರು ಮಾತ್ರ ಹಾಜರಿದ್ದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 7ರಲ್ಲಿ 10 ಒಟ್ಟು ಶಿಕ್ಷಕರಿದ್ದು, ಇದರಲ್ಲಿ 5 ಶಿಕ್ಷಕರು ಹಾಜರಿದ್ದರು. ಇನ್ನುಳಿದ ಶಾಲೆಗಳಲ್ಲಿ ತಲಾ ನಾಲ್ವರು ಶಿಕ್ಷಕರಿದ್ದು, ನಾಲ್ವರೂ ಹಾಜರಿದ್ದರು. ಶಿಗ್ಗಾಂವಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 1ರಲ್ಲಿ ಮುಖ್ಯಶಿಕ್ಷಕರ ಕೊಠಡಿ ಮಾತ್ರ ತೆರೆದಿತ್ತು. 7 ಶಿಕ್ಷಕರಿದ್ದು, ‘ವಿಜಯವಾಣಿ’ ಪ್ರತಿನಿಧಿ ಭೇಟಿ ನೀಡಿದ ಸಮಯದಲ್ಲಿ 5 ಶಿಕ್ಷಕರಿದ್ದರು.

    ಖಾಲಿ ಕುಳಿತ ಶಿಕ್ಷಕರು: ಸರ್ಕಾರ ವಿದ್ಯಾಗಮ ಯೋಜನೆಯನ್ನು ಸ್ಥಗಿತಗೊಳಿಸಿರುವುದರಿಂದ ವಿದ್ಯಾರ್ಥಿಗಳಿಗೆ ಸದ್ಯ ಪಾಠ ಮಾಡುವ ಕೆಲಸ ಶಿಕ್ಷಕರಿಗೆ ಇಲ್ಲ. ಹೀಗಾಗಿ, ಶಿಕ್ಷಕರು ಶಾಲೆಗೆ ಬಂದರೂ ಖಾಲಿ ಕುಳಿತುಕೊಂಡು ಹೋಗುವುದು ಅನಿವಾರ್ಯವಾಗಿದೆ. ಇದರಲ್ಲಿ ಕೆಲ ಶಿಕ್ಷಕರು ವಿವಿಧ ಓದು, ಬರಹದಲ್ಲಿ ತೊಡಗಿಕೊಂಡಿದ್ದರು. ಕೆಲವರು ಶಾಲೆಯ ಆವರಣದಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದರು.

    ಬ್ಯಾಂಕ್​ಗೆ ಹೋಗ್ಯಾರಿ..: ‘ವಿಜಯವಾಣಿ’ ಪ್ರತಿನಿಧಿ ರಿಯಾಲಿಟಿ ಚೆಕ್ ನಡೆಸಿದ ವೇಳೆಯಲ್ಲಿ ಕೆಲ ಶಾಲೆಗಳಲ್ಲಿ ಮುಖ್ಯಶಿಕ್ಷಕರು, ‘ಉಳಿದ ಶಿಕ್ಷಕರು ಶಾಲೆಗೆ ಬೆಳಗ್ಗೆ ಬಂದಿದ್ದರೀ, ಈಗ ಊಟಕ್ಕೆ ಹೋಗ್ಯಾರಿ. ಕೆಲವರು ಬ್ಯಾಂಕ್​ಗೆ ಹೋಗ್ಯಾರಾ ಮತ್ ಬರ್ತಾರೆ ತಡೀರಿ. ನೀವು ಅರ್ಧ ಗಂಟೆ ಬಿಟ್ಟು ಬನ್ನಿ ಬೇಕಾದರೆ ಎಲ್ಲರೂ ಬಂದಿರ್ತಾರೆ’ ಎಂದು ತಿಳಿಸಿದರು.

    ಎಲ್ಲ ಶಿಕ್ಷಕರಿಗೂ ಇಂದಿನಿಂದ ಕಡ್ಡಾಯವಾಗಿ ಶಾಲೆಗಳಿಗೆ ಹಾಜರಾಗುವಂತೆ ಸೂಚಿಸಲಾಗಿದೆ. ಅದರಂತೆ ಎಲ್ಲರೂ ಬಂದಿರುವ ಮಾಹಿತಿಯಿದೆ. ಅನಾರೋಗ್ಯ ಪೀಡಿತರಾಗಿದ್ದರೂ ಅದನ್ನು ಮುಖ್ಯಶಿಕ್ಷಕರಿಗೆ ತಿಳಿಸಿ ರಜೆ ಪಡೆದಿರಬೇಕು. ಯಾರಾದರೂ ಗೈರಾಗಿದ್ದರೆ ಅದಕ್ಕೆ ಸೂಕ್ತ ಕಾರಣವನ್ನು ಲಿಖಿತವಾಗಿ ನೀಡಿ ಹೋಗಿರಬೇಕು. ಹಾಗೆ ಮಾಡದೇ ಅನಧಿಕೃತವಾಗಿ ಗೈರಾಗಿರುವ ಖಚಿತ ಮಾಹಿತಿ ಸಿಕ್ಕರೆ ಅವರ ಮೇಲೆ ಕ್ರಮ ನಿಶ್ಚಿತ. ಶಾಲೆ ಆರಂಭದ ಮೊದಲ ದಿನವಾದ ಸೋಮವಾರ ಎಷ್ಟು ಶಿಕ್ಷಕರು ಹಾಜರಾಗಿದ್ದಾರೆ ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ.

    | ಅಂದಾನೆಪ್ಪ ವಡಿಗೇರಿ, ಡಿಡಿಪಿಐ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts