More

    50 ಕೋಟಿ ರೂ. ಪಿಂಚಣಿ ಇನ್ನೂ ಬಾಕಿ

    ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರದಿಂದ ಬರಬೇಕಿದ್ದ ಹಳೆಯ ಪಿಂಚಣಿ ಅನುದಾನದಲ್ಲಿ ಇನ್ನೂ 50 ಕೋಟಿ ರೂ. ಬಾಕಿ ಇದೆ.

    ತಾಂತ್ರಿಕ ಕಾರಣದಿಂದ ಸುಮಾರು 3 ವರ್ಷ 4 ತಿಂಗಳುಗಳ ಕಾಲ (2014-17) ಪಾಲಿಕೆಗೆ ಪಿಂಚಣಿ ಅನುದಾನ ಬಿಡುಗಡೆಯಾಗಿರಲಿಲ್ಲ. ಈ ಮೊತ್ತ 121 ಕೋಟಿ ರೂ. ಗೆ ತಲುಪಿತ್ತು. ಸರ್ಕಾರದಿಂದ ಅನುದಾನ ಬಿಡುಗಡೆಯಾಗದಿದ್ದರೂ ಪಾಲಿಕೆ ತನ್ನ ಸಾಮಾನ್ಯ ನಿಧಿಯಡಿ ನಿವೃತ್ತ ನೌಕರರಿಗೆ ಪಿಂಚಣಿ ಪಾವತಿಸುತ್ತ ಬಂದಿತ್ತು.

    ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಬಂದ ಕೂಡಲೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರ ಪ್ರಯತ್ನದಿಂದ 2019ರ ಜುಲೈದಲ್ಲಿ 26 ಕೋಟಿ ರೂ. ಬಿಡುಗಡೆಯಾಗಿತ್ತು. ಕರೊನಾ ತಂದಿಟ್ಟ ಸಂಕಷ್ಟದ ಮಧ್ಯದಲ್ಲೂ 2 ತಿಂಗಳ ಹಿಂದೆ 2ನೇ ಕಂತಿನ 26 ಕೋ. ರೂ. ಬಿಡುಗಡೆಯಾಗಿದೆ. ಒಟ್ಟು ಹರಿದುಬಂದ 52 ಕೋಟಿಯಲ್ಲಿ ಬಹುಪಾಲು ಹಣವನ್ನು ಪಾಲಿಕೆಯು ಗುತ್ತಿಗೆದಾರರ ಬಿಲ್ ಪಾವತಿಗೆ ಬಳಸಿದೆ. ಒಂದಿಷ್ಟು ಹಣವನ್ನು ಅಭಿವೃದ್ಧಿ ಕೆಲಸಗಳಿಗೆ ಬಳಸಿದೆ. ಇದಕ್ಕೂ ಮೊದಲು 19 ಕೋ. ರೂ. ಮೊತ್ತವನ್ನು ಪಿಂಚಣಿ, ಸಣ್ಣ ಉಳಿತಾಯ ಹಾಗೂ ಆಸ್ತಿ ಋಣ ನಿರ್ವಹಣೆ ಇಲಾಖೆಗೆ ಪಾವತಿಸಲಾಗಿತ್ತು. ಇದೇ ಇಲಾಖೆ 2017ರಿಂದ ಪಾಲಿಕೆಯ ನಿವೃತ್ತ ನೌಕರರಿಗೆ ಪಿಂಚಣಿ ಸಂದಾಯ ಮಾಡುತ್ತಿದೆ.

    ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪಾಲಿಕೆಗೆ ಹಣ ಬೇಕು. ಸ್ಮಾರ್ಟ್ ಸಿಟಿ, ಅಮೃತ್ ಯೋಜನೆ ಹಾಗೂ ಕೇಂದ್ರ ರಸ್ತೆ ನಿಧಿ (ಸಿಆರ್​ಎಫ್) ಅನುದಾನದಡಿ ಅವಳಿ ನಗರದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ನಡೆಯುತ್ತಿರಬಹುದು. ಆದರೆ, ಒಳ ರಸ್ತೆಗಳ ಸುಧಾರಣೆ, ಒಳಚರಂಡಿ ಮಾರ್ಗ ಬದಲಾವಣೆ, ಗಟಾರ ನಿರ್ವಣದಂಥ ಕೆಲಸಗಳಿಗೆ ಪಾಲಿಕೆ ಅನುದಾನದ ಕೊರತೆ ಎದುರಿಸುತ್ತಿದೆ. ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲದ ಕಳೆದ 22 ತಿಂಗಳ ಅವಧಿಯಲ್ಲಿ ಸಣ್ಣ ಪುಟ್ಟ ಕೆಲಸಗಳು ನಡೆಯುತ್ತಿಲ್ಲವೆಂಬ ಆಕ್ಷೇಪ ಸಾರ್ವಜನಿಕರದ್ದಾಗಿದೆ. ಬೃಹತ್ ಯೋಜನೆಗಳಿಗೆ ಪಾಲಿಕೆ ತನ್ನ ಪಾಲಿನ ವಂತಿಗೆಯನ್ನು ಪಾವತಿಸಬೇಕಿದೆ. ಹಾಗಾಗಿ ಪಿಂಚಣಿ ಅನುದಾನದಲ್ಲಿ ಬಾಕಿ ಇರುವ 50 ಕೋಟಿ ರೂ. ಮಹತ್ವದ್ದಾಗಿದೆ.

    ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಅವರು ಗುರುವಾರ ಹುಬ್ಬಳ್ಳಿಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಪಾಲಿಕೆಗೆ ಅರ್ಹವಾಗಿ ಸಲ್ಲಬೇಕಿದ್ದ ಪಿಂಚಣಿ ಅನುದಾನದಲ್ಲಿನ ಬಾಕಿ ಮೊತ್ತ 50 ಕೋಟಿ ರೂ. ಬಿಡುಗಡೆ ಮಾಡುವ ಬಗ್ಗೆ ಅವರು ಕ್ರಮ ಕೈಗೊಳ್ಳಲಿ ಎಂಬುದು ಅವಳಿ ನಗರದ ನಿವಾಸಿಗಳ ಒತ್ತಾಸೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts