More

    ಜನವರಿ 22ರಂದು ರಾಮಮಂದಿರ ಲೋಕಾರ್ಪಣೆ; 48 ದಿನ ಮಂಡಲೋತ್ಸವ: ಪೇಜಾವರ ಶ್ರೀ

    ಉಡುಪಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ 2024ರ ಜನವರಿ 22ರಿಂದ ಮಾರ್ಚ್ 10ರವರೆಗೆ 48 ದಿನಗಳ ಕಾಲ ನಡೆಯಲಿದೆ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

    ಕೋಟ್ಯಂತರ ಭಕ್ತರ ಆಶಯದಂತೆ ನಿರ್ಮಾಣಗೊಳ್ಳುತ್ತಿರುವ ಅಯೋಧ್ಯೆ ರಾಮ ಮಂದಿರದಲ್ಲಿ ಶ್ರೀರಾಮನಿಗೆ ಪ್ರತ್ಯೇಕ ಹರಕೆ ಸೇವೆ ಎಂಬುದು ಇರುವುದಿಲ್ಲ. ಬದಲಾಗಿ ಪ್ರತಿಯೊಬ್ಬ ಭಕ್ತರು ಮಾಡಿದ ಸಮಾಜ ಸೇವೆಯನ್ನು ರಾಮನ ಸಾನ್ನಿಧ್ಯದಲ್ಲಿ ನಿವೇದಿಸಿಕೊಳ್ಳುವ ರಾಮಾರ್ಪಣೆಯೇ ಸೇವೆ ಎಂದು ಸ್ವಾಮೀಜಿ ಹೇಳಿದ್ದಾರೆ.

    ರಾಮ ಮಂದಿರದ ಮೂಲಕ ದೇಶದಲ್ಲಿ ರಾಮರಾಜ್ಯ ನಿರ್ಮಾಣದ ಕನಸು ಎಲ್ಲರದ್ದು. ಈ ಕನಸು ನನಸಾಗಬೇಕಾದರೆ ಪ್ರತಿಯೊಬ್ಬ ಭಕ್ತರು ಮಾಡಿದ ಸಮಾಜ ಸೇವೆಯನ್ನು ಶ್ರೀರಾಮನ ಸಾನ್ನಿಧ್ಯದಲ್ಲಿ ನಿವೇದಿಸಿಕೊಳ್ಳುವ ರಾಮಾರ್ಪಣೆಯೇ ಸೇವೆ ಆಗಿರುತ್ತದೆ. ಭಕ್ತರಿಗಾಗಿ ಆರತಿ, ತೀರ್ಥ ಹಾಗೂ ಉತ್ತರ ಭಾರತದ ಸಿಹಿಯ ನೈವೇದ್ಯ ಇರುತ್ತದೆ. ಇದು ಬಿಟ್ಟರೆ ಹರಕೆ, ಸೇವೆ ಯಾವುದೂ ಇಲ್ಲ ಎಂದಿದ್ದಾರೆ.

    Pejawara Shree

    ಇದನ್ನೂ ಓದಿ: ಇದಪ್ಪಾ ಅದೃಷ್ಟ ಅಂದ್ರೆ; ಭಾರತ ಮೂಲದ ವ್ಯಕ್ತಿಗೆ ಹೊಡೀತು 45 ಕೋಟಿ ರೂಪಾಯಿ ದುಬೈ ಲಾಟರಿ

    ಜನವರಿ 22ರಂದು ಅಭಿಜಿನ್‌ ಮುಹೂರ್ತದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ನೆರವೇರಲಿದೆ. ಶ್ರೀರಾಮನ ಭವ್ಯ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ ಎಲ್ಲರಿಗೂ ಪಾಲ್ಗೊಳ್ಳಲು ಸಾಧ್ಯವಾಗಲಾರದು. ಉಳಿದ 48 ದಿನಗಳ ಮಂಡಲೋತ್ಸವದಲ್ಲಿ ದೇಶದ ಎಲ್ಲಜನತೆ ಪಾಲ್ಗೊಳ್ಳುವಂತೆ ಮುಕ್ತ ಆಹ್ವಾನ ನೀಡುವುದಾಗಿ ಹೇಳಿದ್ದಾರೆ.

    ಅಯೋಧ್ಯೆಯಲ್ಲಿ ಶ್ರೀರಾಮನ ಶಿಲಾ ವಿಗ್ರಹ ಸಿದ್ಧಗೊಳ್ಳುತ್ತಿದ್ದು, ಜನವರಿ 17ರಂದು ಅಯೋಧ್ಯೆಗೆ ವಿಗ್ರಹದ ಮೆರವಣಿಗೆ ನಡೆಯಲಿದೆ. ಪವಿತ್ರ ಸರಯೂ ನದಿಯಲ್ಲಿ ಶಿಲಾಮೂರ್ತಿಗೆ ಅಭಿಷೇಕ ನೆರವೇರಿಸಿ, ಅಲ್ಲಿಂದ ಮತ್ತೆ ಮೆರವಣಿಗೆಯಲ್ಲಿ ಅಯೋಧ್ಯೆಗೆ ಕೊಂಡೊಯ್ದು, ಜನವರಿ 18ರಂದು ಶ್ರೀರಾಮ ಜನ್ಮಸ್ಥಳದ ಮೂಲ ಸ್ಥಾನದಲ್ಲಿ ನಿಲ್ಲಿಸಲಾಗುವುದು. 18ರಿಂದ 20ರವರೆಗೆ ಜಲಾಧಿವಾಸ, ಧಾನ್ಯಾಧಿವಾಸ, ಶಿಲಾಧಿವಾಸ ವಿಧಿ ವಿಧಾನ ನೆರವೇರಿಸಿ ಜನವರಿ 21ರಂದು ಪ್ರತಿಷ್ಠಾಪನೆಯ ಪೂರ್ವಸಿದ್ಧತೆ ನಡೆಸಲಾಗುವುದು.

    ಜನವರಿ 22ರಂದು ಶ್ರೀರಾಮನ ಪ್ರಾಣ ಪ್ರತಿಷ್ಠೆ, ಮಂದಿರ ಉದ್ಘಾಟನೆ ಬಳಿಕ ಮೂರು ಗಂಟೆಗಳ ಕಾಲ ಸಭಾ ಕಾರ್ಯಕ್ರಮ ನಡೆಯಲಿದೆ. ಹಾಲಿ ಪೂಜೆಗೊಳ್ಳುತ್ತಿರುವ ಶ್ರೀರಾಮನ ಮೂರ್ತಿ ಕೂಡ ಅಲ್ಲೇ ಪ್ರತಿಷ್ಠಾಪನೆಗೊಳ್ಳಲಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠೆ ಹಾಗೂ ಮಂದಿರ ಉದ್ಘಾಟನೆ ಕಾರ್ಯಕ್ರಮದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂದು ರಾತ್ರಿ 5 ಶತಮಾನದ ಸಂಕೇತವಾಗಿ ಐದು ದೀಪಗಳನ್ನು ಪ್ರತಿ ಮನೆಗಳಲ್ಲಿ ಬೆಳಗುವ ಮೂಲಕ ಇದನ್ನು ದೀಪೋತ್ಸವವಾಗಿಯೂ ಆಚರಿಸಬೇಕು. ಇಡೀ ದಿನ ದೇವಸ್ಥಾನ, ಮಂದಿರ, ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪೂಜೆ, ಭಜನೆ ನಡೆಸಬೇಕು ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕರೆ ಕೊಟ್ಟಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts