More

    ದ.ಕ. ಜಿಲ್ಲೆಯಲ್ಲಿ 175 ಪ್ರಭೇದದ 43,118 ಚಿಟ್ಟೆ, ಮಂಗಳೂರು ವಿವಿ ಅಧ್ಯಯನ ತಂಡಕ್ಕೆ ಪತ್ತೆ

    ಮಂಗಳೂರು: ಕರಾವಳಿ ತೀರದ ಮರಳು ದಿಣ್ಣೆಗಳಿಂದ ಹಿಡಿದು ಕೃಷಿ ಭೂಮಿಯವರೆಗೆ, ಸಸ್ಯ ಉದ್ಯಾನಗಳಿಂದ-ಅರೆ ನಿತ್ಯಹರಿದ್ವರ್ಣ ಕಾಡುಗಳವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕಡಲ ತೀರದಿಂದ ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶಗಳ 8 ಸ್ಥಾನಗಳಲ್ಲಿ 175 ಪ್ರಭೇದಗಳ 43,118 ಚಿಟ್ಟೆಗಳನ್ನು ಮಂಗಳೂರು ವಿಶ್ವವಿದ್ಯಾಲಯದ ಅಧ್ಯಯನ ತಂಡ ಗುರುತಿಸಿದೆ.

    ಯೇನೆಪೊಯ ವಿಶ್ವವಿದ್ಯಾಲಯದ ಸಂಶೋಧಕ ಡಾ.ಆರ್.ಶ್ಯಾಮಪ್ರಸಾದ ರಾವ್ ಹಾಗೂ ಬೆಂಗಳೂರಿನ ರಾಷ್ಟ್ರೀಯ ಜೀವವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ದೀಪಕ್ ನಾಯ್ಕ ಮತ್ತು ಡಾ.ಎಂ.ಎಸ್.ಮುಸ್ತಾಕ್ ಈ ಅಧ್ಯಯನ ನಡೆಸಿದ್ದಾರೆ. ಎರಡು ವರ್ಷಗಳ ಸಮೀಕ್ಷೆಯ ಆಧಾರದ ಮೇಲೆ ಸಂಶೋಧಕರು ಪಶ್ಚಿಮ ಘಟ್ಟಗಳಲ್ಲಿ ಚಿಟ್ಟೆಗಳ ಯಥೇಚ್ಛತೆಯ ವಿನ್ಯಾಸಗಳು ಮತ್ತು ಅವುಗಳು ಇಷ್ಟಪಡುವ ಆವಾಸಸ್ಥಾನಗಳ ಕುರಿತು ದಾಖಲಾತಿ ಮಾಡಿಕೊಂಡಿದ್ದಾರೆ. ಅತ್ಯಂತ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟಗಳಲ್ಲಿ ಚಿಟ್ಟೆಗಳ ಭವಿಷ್ಯದ ಪರಿವೀಕ್ಷಣೆ ಮತ್ತು ಸಂರಕ್ಷಣಾ ಕಾರ್ಯಗಳಿಗೆ ಅಗತ್ಯವಿರುವ ಬೃಹತ್ ಪ್ರಮಾಣದ ಮೂಲ ದತ್ತಾಂಶಗಳನ್ನು ವಿವರಿಸಿದ್ದಾರೆ.

    ಪಶ್ಚಿಮ ಘಟ್ಟದ ಚಿಟ್ಟೆಗಳ ಆಸಕ್ತಿದಾಯಕ ವಿನ್ಯಾಸಗಳನ್ನೂ ವಿವರಿಸಲಾಗಿದ್ದು, ಅವುಗಳಲ್ಲಿ ಅತ್ಯಂತ ಸಮೃದ್ಧವಾದ ಪ್ರಭೇದಗಳೆಂದರೆ ಕಾಮನ್ ಕ್ರೋ, ಕಾಮನ್ ಎಮಿಗ್ರೆಂಟ್, ಕಾಮನ್ ಫರ‌್ರಿಂಗ್, ಟ್ವಾನಿ ಕೋಸ್ಟರ್, ಲೆಸ್ಸರ್ ಗ್ರಾಸ್ ಬ್ಲೂ, ರಸ್ಟಿಕ್ ಮತ್ತು ಚಾಕ್ಲೆಟ್ ಪಾನ್ಸಿ. ಕೆಲವು ಪ್ರಭೇದಗಳು ಹೇರಳವಾಗಿದ್ದರೂ ನಿರ್ದಿಷ್ಟ ಆವಾಸಸ್ಥಾನಗಳಿಗೆ ಮೀಸಲಾಗಿರುತ್ತವೆ. ಟ್ವಾನಿ ಕೋಸ್ಟರ್ ಕರಾವಳಿ ಪ್ರದೇಶಗಳಲ್ಲಿ, ಕಾಮನ್ ಬುಶ್ ಹಾಪರ್ ಕೃಷಿ ಪ್ರದೇಶಗಳಲ್ಲಿ ಮತ್ತು ಮಲಬಾರ್ ಟ್ರೀ ನಿಂಪ್ ಅರೆ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಕಾಣಲು ಸಿಗುತ್ತವೆ. ಕಾಮನ್ ಮೊರ್ಮೊನ್, ಕಾಮನ್ ಲೆಪರ್ಡ್ ವಿರಳವಾಗಿದ್ದರೂ ಎಲ್ಲ್ಲ ಕಡೆ ಕಾಣಲು ಸಿಗುತ್ತವೆೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.

    ಚಟ್ಟೆಯ ಜೀವನ ಚಕ್ರದ ಭಾಗವಾಗಿರುವ ಲಾರ್ವಗಳಿಗೆ ಆಶ್ರಯ ನೀಡುವ ಆಹಾರ ಸಸ್ಯಗಳನ್ನು ದಾಖಲಿಸಿಕೊಂಡಿದೆ. ಚಿಟ್ಟೆ ಸಮುದಾಯಗಳು ಅವಾಸಸ್ಥಾನಗಳ ಸ್ಥಿತಿಗತಿ ಹಾಗೂ ವಿಧಗಳ ಕುರಿತಂತೆಯೂ ವಿವರಿಸಲಾಗಿದೆ. ಈ ಅಧ್ಯಯನ ಜರ್ನಲ್ ಆಫ್ ಇನ್ಸೆಕ್ಟ್ ಕನ್ಸರ್ವೇಶನ್(ಕೀಟ ಸಂರಕ್ಷಣೆಯ ಮೇಲಿನ ಸಂಶೋಧನಾ ಲೇಖನಗಳ ಸಂಗ್ರಹ)ನ ಸಂಚಿಕೆಯಲ್ಲಿ ಪ್ರಕಟಗೊಳ್ಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts