More

    ಪಾಲಿಕೆಯಿಂದ ಬೋರ್‌ವೆಲ್ ರೀ ಡ್ರಿಲ್ಲಿಂಗ್, ದುರಸ್ತಿಗೆ 40 ಕೋಟಿ ರೂ.

    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಹೊಸ ವಲಯ ಹಾಗೂ 110 ಹಳ್ಳಿಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಬಳಸುತ್ತಿರುವ ಕೊಳವೆಬಾವಿಗಳ ದುರಸ್ತಿ, ರೀ ಡ್ರಿಲ್ಲಿಂಗ್ ಹಾಗೂ ಇನ್ನಿತರ ಕಾರ್ಯಕ್ಕೆ 40 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

    ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ವಲಯಗಳಲ್ಲಿ ಬಿಬಿಎಂಪಿ ವತಿಯಿಂದ ಕೊರೆಯಿಸಿದ್ದ ಬೋರ್‌ವೆಲ್‌ಗಳನ್ನು ಈಗಾಗಲೇ ಜಲಮಂಡಲಿಗೆ ಹಸ್ತಾಂತರಿಸಲಾಗಿದೆ.110 ಹಳ್ಳಿಗಳಲ್ಲಿ ಮಾತ್ರ ಜಲಮಂಡಳಿ ಸುಪರ್ದಿಗೆ ಇನ್ನೂ ವಹಿಸದ ಹಿನ್ನೆಲೆ ಅಲ್ಲಿ ಮಾತ್ರ ಪಾಲಿಕೆ ನೀರು ಪೂರೈಸುವ ಹೊಣೆ ಹೊತ್ತಿದೆ. ಬೇಸಿಗೆಯಲ್ಲಿ ಜನತೆ ಸಮಸ್ಯೆಗೆ ಒಳಗಾಗದಂತೆ 15ನೇ ಹಣಕಾಸು ನಿಧಿ ಅಡಿಯಲ್ಲಿ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಹಣದಲ್ಲಿ ಹೆಚ್ಚಿನ ಭಾಗವನ್ನು 110 ಹಳ್ಳಿಗಳ ವ್ಯಾಪ್ತಿಯಲ್ಲಿ ಖರ್ಚು ಮಾಡಲಾಗುವುದು. ಹೀಗಾಗಿ ಅಲ್ಲಿನ ಜನರು ನೀರಿನ ತೊಂದರೆಗೆ ಒಳಗಾಗದಂತೆ ಎಚ್ಚರ ವಹಿಸಲಾಗುವುದು ಎಂದರು.

    ಇದರ ಜತೆಗೆ ಇದೇ ಅನುದಾನದಲ್ಲಿ ಹೊಸ ವಲಯಗಳಲ್ಲಿ ಬೋರ್‌ವೆಲ್ ಕೆಟ್ಟಿದ್ದರೆ, ದುರಸ್ತಿ, ರೀ ಡ್ರಿಲ್ಲಿಂಗ್ ಕೆಲಸ ಆಗಲಿದೆ. ಆರ್‌ಒ ಘಟಕಗಳು ಬಂದ್ ಆಗಿದ್ದಲ್ಲಿ ಅವುಗಳ ದುರಸ್ತಿ ಹಾಗೂ ಅಗತ್ಯವಿದ್ದಲ್ಲಿ ಬೋರ್‌ವೆಲ್ ಕೊರೆಯಿಸಿ ಸಂಪರ್ಕ ನೀಡುವಂತೆ ಸೂಚಿಸಲಾಗಿದೆ. ಆದರೆ, ನಗರದ ಕೋರ್ ಏರಿಯಾದಲ್ಲಿ (ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯ) ಬೋರ್‌ವೆಲ್ ಕೊರೆಯಿಸಲು ನಿರ್ಬಂಧ ವಿಧಿಸುವುದರಿಂದ ಆ ಭಾಗದಲ್ಲಿ ಹೊಸ ಕೊಳವೆಬಾವಿ ಕೊರೆಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಕಸ ಸುರಿಯಲು ಹೊಸ ಕ್ವಾರಿ ಗುರುತು:

    ನಗರದ ವಾಣಿಜ್ಯ ಕೇಂದ್ರಗಳಿಂದ ಸಂಗ್ರಹಿಸುವ ಮಿಶ್ರ ಕಸವನ್ನು ಯಲಹಂಕದ ಬೆಳ್ಳಹಳ್ಳಿಯ ಕ್ವಾರಿಯಲ್ಲಿ ಹಾಕಲಾಗುತ್ತಿದೆ. ಅಲ್ಲಿನ ಭೂಭರ್ತಿ ಕೇಂದ್ರದಲ್ಲಿ ಸ್ಥಳದ ಅಭಾವ ಹಾಗೂ ಸ್ಥಳೀಯರ ವಿರೋಧದಿಂದಾಗಿ ಅದರ ಸಮೀಪವೇ ಹೊಸ ಕ್ವಾರಿಯನ್ನು ಗುರುತಿಸಲಾಗಿದೆ. ಹೊಸ ಜಾಗವನ್ನು ಬಳಸಿಕೊಳ್ಳುವ ಕುರಿತು ಚರ್ಚೆ ನಡೆದಿದ್ದು, ರಸ್ತೆ ಸಹಿತ ಇನ್ನಿತರ ಸೌಕರ್ಯ ಕಲ್ಪಿಸಿದ ಬಳಿಕ ಬಳಕೆ ಮಾಡಲಾಗುವುದು. ಈ ಕೇಂದ್ರ ಆರಂಭಗೊಂಡಲ್ಲಿ ಬೆಳ್ಳಹಳ್ಳಿ ಘಟಕದಲ್ಲಿ ಕಸ ಸುರಿಯುವಿಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಮುಖ್ಯ ಆಯುಕ್ತರು ತಿಳಿಸಿದರು.

    ತೆರಿಗೆ ರಿಯಾಯಿತಿ, ಸರ್ಕಾರದ ಸೂಚನೆ ಪಾಲನೆ:

    ಆಸ್ತಿತೆರಿಗೆ ಸಂಬಂಧ ಸ್ವತ್ತುದಾರರಿಗೆ ರಿಯಾಯಿತಿ ನೀಡಲು ವಿಧಾನಮಂಡಲದಲ್ಲಿ ಒಪ್ಪಿಗೆ ಪಡೆದಿರುವ ವಿಧೇಯಕ ರಾಜ್ಯಪಾಲರ ಅಂಕಿತ ಬಳಿಕ ಸರ್ಕಾರಕ್ಕೆ ರವಾನೆಯಾಗಬೇಕಿದೆ. ಆ ಬಳಿಕ ನಿಯಮಾವಳಿ ರಚಿಸಬೇಕಿದ್ದು, ಆ ನಂತರವೇ ಅಧಿಕೃತವಾಗಿ ಜಾರಿ ಮಾಡಲು ಸಾಧ್ಯ. ಈ ವಿಚಾರದಲ್ಲಿ ಸರ್ಕಾರ ನೀಡುವ ಸೂಚನೆ ಪಾಲಿಸಲಾಗುವುದು ಎಂದು ತುಷಾರ್ ಗಿರಿನಾಥ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts