More

  ಪುಲ್ವಾಮಾ ದಾಳಿಗೆ 4 ವರ್ಷ: ಹುತಾತ್ಮ ಯೋಧರ ತ್ಯಾಗ, ಬಲಿದಾನ ನೆನೆದ ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್​ ಸಿಂಗ್​

  ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥಾಪೋರಾದಲ್ಲಿ ಕೇಂದ್ರೀಯ ಮೀಸಲು ಪೊಲೀಸ್​ ಪಡೆ (ಸಿಆರ್​ಪಿಎಫ್​​) ಯೋಧರು ತೆರಳುತ್ತಿದ್ದ ವಾಹನಗಳ (ಕಾನ್ವಾಯ್​) ಮೇಲೆ ಪಾಕ್​ ಉಗ್ರರು ನಡೆಸಿದ ಆತ್ಮಾಹುತಿ ದಾಳಿಗೆ ನಾಲ್ಕು ವರ್ಷ (ಫೆ.14) ತುಂಬಿದ್ದು, ಇದನ್ನು ಕರಾಳ ದಿನವನ್ನಾಗಿ ಆಚರಿಸಲಾಗುತ್ತದೆ.

  ಕಾರ್​ ಬಾಂಬ್​ ದಾಳಿಯಲ್ಲಿ ಹುತಾತ್ಮರಾದ 40 ಯೋಧರಿಗೆ ದೇಶಾದ್ಯಂತ ಗೌರವ ನಮನ ಸಲ್ಲಿಸಲಾಗುತ್ತಿದ್ದು, ಪ್ರಧಾನಿ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರು ಇಂದು ಬೆಳಗ್ಗೆ ಟ್ವೀಟ್​ ಮಾಡಿ ಹುತಾತ್ಮ ಯೋಧರು ತ್ಯಾಗ, ಬಲಿದಾನವನ್ನು ಸ್ಮರಿಸಿದ್ದಾರೆ.

  ಪುಲ್ವಾಮಾದಲ್ಲಿ ಈ ದಿನ ನಾವು ಕಳೆದುಕೊಂಡ ನಮ್ಮ ಪರಾಕ್ರಮಿಗಳನ್ನು ನೆನಪಿಸಿಕೊಳ್ಳುತ್ತೇವೆ. ಅವರ ಅತ್ಯುನ್ನತ ತ್ಯಾಗವನ್ನು ನಾವು ಎಂದಿಗೂ ಮರೆಯುವುದಿಲ್ಲ. ಅವರ ಧೈರ್ಯವು ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ನಮ್ಮನ್ನು ಪ್ರೇರೇಪಿಸುತ್ತದೆ ಎಂದು ಪ್ರಧಾನಿ ಮೋದಿ ಅವರು ಟ್ವೀಟ್​ ಮೂಲಕ ಯೋಧರ ತ್ಯಾಗವನ್ನು ನೆನಪಿಸಿ, ಗೌರವ ಸಲ್ಲಿಸಿದ್ದಾರೆ.

  2019ರಲ್ಲಿ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೆ ನಾನು ಗೌರವ ಸಲ್ಲಿಸುತ್ತೇನೆ. ಹುತಾತ್ಮ ಸೈನಿಕರ ಧೈರ್ಯ ಮತ್ತು ತ್ಯಾಗಕ್ಕೆ ಈ ದೇಶ ವಂದಿಸುತ್ತದೆ. ಇಡೀ ದೇಶವು ಹುತಾತ್ಮ ಯೋಧರ ಕುಟುಂಬದೊಂದಿಗೆ ದೃಢವಾಗಿ ನಿಂತಿದೆ ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಟ್ವೀಟ್​ ಮಾಡಿದ್ದಾರೆ.

  ನಡೆದದ್ದೇನು?
  2019ರ ಫೆ. 14ರ ಮುಂಜಾನೆ ಜಮ್ಮುವಿನಿಂದ 78 ವಾಹನಗಳಲ್ಲಿ 2,547 ಯೋಧರ ಕಾನ್ವಾಯ್​ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಶ್ರೀನಗರದ ಕಡೆಗೆ ಹೊರಟಿತ್ತು. ಆವಂತಿಪೋರಾ ಸಮೀಪ ಲೆಥಾಪೋರಾದಲ್ಲಿ ಮಧ್ಯಾಹ್ನ 3.15ಕ್ಕೆ ಭದ್ರತಾ ಸಿಬ್ಬಂದಿಯಿದ್ದ ಒಂದು ಬಸ್​ಗೆ ಸ್ಫೋಟಕ ತುಂಬಿದ್ದ ಕಾರನ್ನು 22 ವರ್ಷದ ಅದಿಲ್​ ಅಹ್ಮದ್​ ದರ್​ ಎಂಬಾತ ಡಿಕ್ಕಿ ಹೊಡೆಸಿ ಸ್ಫೋಟಿಸಿದ, ಇದರಿಂದ 76ನೇ ಬೆಟಾಲಿಯನ್​ನ 40 ಯೋಧರು ಹುತಾತ್ಮರಾದರು. ಸ್ಫೋಟಕ್ಕೆ ಸುಮಾರು 80 ಕೆಜಿ ಸ್ಫೋಟಕ ಬಳಸಲಾಗಿತ್ತು. ಭಾರತದ ತನಿಖಾ ಸಂಸ್ಥೆಗಳು 19 ಆರೋಪಿಗಳನ್ನು ಗುರುತಿಸಿದವು. 2021ರ ಆಗಸ್ಟ್​ ಹೊತ್ತಿಗೆ ಇತರ ಆರು ಜನರೊಂದಿಗೆ ಪ್ರಮುಖ ಆರೋಪಿಗಳು ಹತರಾದರು. ಏಳು ಜನರನ್ನು ಬಂಧಿಸಲಾಯಿತು.

  ಪಾಕ್​ ನೆಲಕ್ಕೇ ನುಗ್ಗಿ ಭಯೋತ್ಪಾದಕರ ತಾಣ ಧ್ವಂಸ
  ಉಗ್ರರ ಅಟ್ಟಹಾಸಕ್ಕೆ ಉತ್ತರ ನೀಡಲು ಪಾಕಿಸ್ತಾನದ ಖೈಬರ್​ ಪಖ್ತುಂಖ್ವಾದ ಬಾಲಾಕೋಟ್​ನಲ್ಲಿರುವ ಜೈಷ್​-ಎ-ಮೊಹಮ್ಮದ್​ ಸಂಟನೆಯ ಉಗ್ರಗಾಮಿಗಳ ತಾಣಗಳ ಮೇಲೆ ಫೆ. 26ರಂದು ಭಾರತೀಯ ವಾಯುಪಡೆಯು 12 ಫೈಟರ್​ ವಿಮಾನಗಳ ಮೂಲಕ ಬಾಂಬ್​ ದಾಳಿ ನಡೆಸಿತು. ಇದರಿಂದ ಉಗ್ರಗಾಮಿಗಳ ಅನೇಕ ಶಿಬಿರಗಳು ನಿರ್ನಾಮ ಆದವು. ಮರುದಿನ (ಫೆ.27) ಬೆಳಗ್ಗೆ ಪಾಕ್​ ವಿಮಾನಗಳು (ಅಮೆರಿಕದ ಎಫ್​​​​16 ಫೈಟರ್​ ಜೆಟ್​ ಸಹಿತ) ಭಾರತದೊಳಗೆ ನುಗ್ಗಿದವು. ಇದನ್ನು ಹಿಮ್ಮೆಟ್ಟಿಸಲು ಮಿಗ್​-21, ಸುಖೋಯ್​, ಮಿರಾಜ್​ 2000 ವಿಮಾನಗಳು ಮುಂದಾದವು.

  ಮಿಗ್​-21 ಬೈಸನ್​ ವಿಮಾನದಲ್ಲಿ ಪಾಕ್​ ವಿಮಾನವನ್ನು ಬೆನ್ನಟ್ಟಿದ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​, ಈ ಪ್ರಯತ್ನದಲ್ಲಿ ಯಶಸ್ವಿಯಾದರು. ಆದರೆ, ಅವರ ವಿಮಾನ ಪತನವಾಯಿತು. ಅವರು ಪ್ಯಾರಾಚೂಟ್​ ಮೂಲಕ ಇಳಿದ ಜಾಗ ಪಾಕ್​ ಆಕ್ರಮಿತ ಕಾಶ್ಮೀರ (ಪಿಒಕೆ) ವಾಗಿತ್ತು. ಅಲ್ಲಿ ಅವರನ್ನು ಬಂಧಿಸಲಾಯಿತು. ಸುಮಾರು 60 ತಾಸಿನ ನಂತರ ಅವರನ್ನು ವಾಪಸು ಕರೆತರುವ ಭಾರತದ ರಾಜತಾಂತ್ರಿಕ ಪ್ರಯತ್ನ ಲಪ್ರದವಾಯಿತು. ತನ್ನ ಧೀರಯೋಧರ ಸಾವಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಪಾಕ್​ ನೆಲದೊಳಗೇ ನುಗ್ಗಿ ಸಾಹಸಗೈದಿತು. ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹುಯಿಲೆಬ್ಬಿಸಿದರೂ ಭಾರತ ಇದನ್ನು ಜಾಣ್ಮೆಯ ಕಾರ್ಯತಂತ್ರದಿಂದ ನಿಭಾಯಿಸಿತು.

  ಪುಲ್ವಾಮಾ ಉಗ್ರದಾಳಿಗೆ ನಾಲ್ಕು ವರ್ಷ: ಇಂದು ಕರಾಳ ದಿನ, ಅಂದು ನಡೆದದ್ದೇನು?

  ಮೂರೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದ ಪೂಜಾರಿಗೆ 45 ವರ್ಷ ಜೈಲು ಶಿಕ್ಷೆ, 80 ಸಾವಿರ ರೂ. ದಂಡ!

  ಆಪರೇಷನ್​ ಜೆಡಿಎಸ್​ಗೆ ಕೈ ಹಾಕಿದ ಎಚ್​ಡಿಕೆ: ಹುಬ್ಬಳ್ಳಿಯಲ್ಲಿ ಬಿಜೆಪಿಯ ವಿಕೆಟ್ ಪತನ ಆಗೋದು ಖಚಿತ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts