More

    ನೆರೆರಾಷ್ಟ್ರಗಳ ಮುಸ್ಲಿಮೇತರರಿಗೆ ಪೌರತ್ವ ಗ್ಯಾರಂಟಿ: ಪರ-ವಿರೋಧ ಹೋರಾಟದ ನಂತರ ತಾರ್ಕಿಕ ಅಂತ್ಯ

    ನೆರೆ ರಾಷ್ಟ್ರಗಳ ಮುಸ್ಲಿಮೇತರರಿಗೆ ಭಾರತದ ನಾಗರಿಕತ್ವ ನೀಡುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೊಳಿಸಲು ಕೇಂದ್ರ ಸರ್ಕಾರ ಸೋಮವಾರ ಸಂಜೆ ಅಧಿಸೂಚನೆ ಪ್ರಕಟಿಸಿದೆ. ಧಾರ್ವಿುಕ ಕಿರುಕುಳ ಅಥವಾ ಹಿಂಸಾಚಾರಕ್ಕೆ ತುತ್ತಾಗಿ 2014ರ ಡಿಸೆಂಬರ್ 31ರವರೆಗೆ ಭಾರತಕ್ಕೆ ವಲಸೆ ಬಂದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಹಾಗೂ ಕ್ರೖೆಸ್ತರಿಗೆ ಭಾರತದ ಪೌರತ್ವ ಸಿಗಲಿದೆ. ಈ ಕಾನೂನು ಈಗಿರುವ ಭಾರತೀಯ ನಾಗರಿಕರಿಗೆ ಅನ್ವಯವಾಗುವುದಿಲ್ಲ ಮತ್ತು ಯಾರದ್ದೇ ನಾಗರಿಕತ್ವವನ್ನು ಕಿತ್ತುಕೊಳ್ಳುವುದಿಲ್ಲ.

    ನೆರೆಯ ರಾಷ್ಟ್ರಗಳಲ್ಲಿ ಧಾರ್ವಿುಕ ಕಿರುಕುಳಕ್ಕೆ ಒಳಗಾದ ಅಲ್ಪಸಂಖ್ಯಾತರು ಸುರಕ್ಷಿತ ಸ್ಥಾನವೆಂದು ಭಾರತಕ್ಕೆ ಬಂದಿದ್ದಾರೆ. ಹೀಗಾಗಿ, ಇವರ ನೆರವಿಗೆ ನಿಲ್ಲುತ್ತೇವೆ. ಇದಕ್ಕಾಗಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಜಾರಿಗೆ ತಂದೇ ತರುತ್ತೇವೆ ಎಂದು ಬಿಜೆಪಿ 2014 ಮತ್ತು 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸ್ಪಷ್ಟ ಭರವಸೆ ನೀಡಿತ್ತು. ಆದರೆ, 2019ರಲ್ಲಿ ಮಸೂದೆ ಅಂಗೀಕಾರಗೊಂಡ ಬಳಿಕ ಪಶ್ಚಿಮ ಬಂಗಾಳ ಸೇರಿ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು. ಹಾಗಾಗಿ, ‘ಕಾದು ನೋಡುವ’ ತಂತ್ರ ಅನುಸರಿಸಿದ ಕೇಂದ್ರ ಸರ್ಕಾರ 2024ರ ಲೋಕಸಭೆ ಚುನಾವಣೆ ಘೋಷಣೆಯ ಕೆಲ ದಿನಗಳ ಮುನ್ನವಷ್ಟೇ ಅಧಿಸೂಚನೆ ಜಾರಿ ಮಾಡುವ ಮೂಲಕ, ಭರವಸೆಯನ್ನು ಈಡೇರಿಸಿದೆ.

    ಫೆಬ್ರವರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ, ‘ನೆರೆರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಕಿರುಕುಳ ಅವರು ಭಾರತದ ಆಶ್ರಯ ಕೋರುವಂತೆ ಮಾಡಿದೆ. ಆರು ಅಲ್ಪಸಂಖ್ಯಾತ ಸಮುದಾಯಗಳ ವಲಸಿಗರಿಗೆ ಆಶ್ರಯ ನೀಡುವುದು ಮೋದಿ ಸರ್ಕಾರದ ಮತ್ತೊಂದು ಪ್ರಮುಖ ಕ್ರಮ. ಲೋಕಸಭೆ ಚುನಾವಣೆಗೆ ಮುಂಚೆ ಸಿಎಎ ಜಾರಿಗೊಳಿಸಲಾಗುವುದು’ ಎಂದು ಹೇಳಿದ್ದರು.

    ಅಕ್ರಮ ವಲಸಿಗರಿಗೆ ನಿಷಿದ್ಧ
    ಅಕ್ರಮ ವಲಸಿಗರು ಭಾರತೀಯ ಪೌರತ್ವ ಹೊಂದುವುದನ್ನು ಸಿಎಎ ನಿಷೇಧಿಸುತ್ತದೆ. ವೀಸಾ ಅಥವಾ ಪಾಸ್​ಪೋರ್ಟ್​ನಂಥ ಯಾವುದೇ ಕಾನೂನುಬದ್ಧ ಪ್ರಯಾಣ ದಾಖಲಾತಿ ಇಲ್ಲದೆ ಭಾರತವನ್ನು ಪ್ರವೇಶಿಸುವ ಅಥವಾ ಸಕ್ರಮ ದಾಖಲೆಗಳೊಂದಿಗೆ ಪ್ರವೇಶಿಸಿದರೂ ಅವುಗಳಲ್ಲಿ ನಮೂದಿಸುವ ಅವಧಿಗಿಂತ ಹೆಚ್ಚು ಕಾಲ ಇಲ್ಲಿ ನೆಲೆಸುವವರನ್ನು ‘ಅಕ್ರಮ ವಲಸಿಗ’ ಎಂದು 1955ರ ಕಾನೂನು ವ್ಯಾಖ್ಯಾನಿಸಿದೆ. ಸಂವಿಧಾನದ 5ರಿಂದ 11ನೇ ವಿಧಿಗಳು ಕೂಡ ಪೌರತ್ವದ ಬಗ್ಗೆ ವಿವರಣೆ ನೀಡಿವೆ. 1946ರ ವಿದೇಶೀಯರ ಕಾನೂನು, ಪಾಸ್​ಪೋರ್ಟ್ (ಭಾರತದೊಳಗೆ ಪ್ರವೇಶ) ಕಾನೂನು-1920 ಮುಂತಾದ ಕಾಯಿದೆಗಳು ಕೂಡ ಅಕ್ರಮ ವಲಸಿಗರನ್ನು ಶಿಕ್ಷಿಸಲು ಹಾಗೂ ದೇಶದಿಂದ ಹೊರಗೆ ಕಳಿಸಲು ಅವಕಾಶ ಕಲ್ಪಿಸುತ್ತವೆ. ವಿದೇಶೀಯರು ಭಾರತ ಪ್ರವೇಶಿಸುವುದು, ಬಿಡುವುದು ಹಾಗೂ ಭಾರತದಲ್ಲಿ ನೆಲೆಸುವುದನ್ನು ನಿಯಂತ್ರಿಸುವ ಅಧಿಕಾರವನ್ನೂ ಕೇಂದ್ರ ಸರ್ಕಾರಕ್ಕೆ ಅವು ನೀಡಿವೆ. ಆದರೆ, 2015 ಮತ್ತು 2016ರಲ್ಲಿ ಕೇಂದ್ರ ಸರ್ಕಾರ ಎರಡು ಪ್ರಕಟಣೆ ಹೊರಡಿಸುವ ಮೂಲಕ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ 2014ರ ಡಿ. 31ರಂದು ಅಥವಾ ಅದಕ್ಕೂ ಮುಂಚೆ ಭಾರತವನ್ನು ಪ್ರವೇಶಿಸಿದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೖೆಸ್ತರಿಗೆ ಈ ಕಾನೂನುಗಳ ವ್ಯಾಪ್ತಿಯಿಂದ ವಿನಾಯಿತಿ ನೀಡಿದೆ. ಮೇಲೆ ನಮೂದಿಸಿದ ಆರು ವಿಭಾಗಗಳ ಹಾಗೂ ಮೂರು ದೇಶಗಳ ಅಕ್ರಮ ವಲಸಿಗರನ್ನು ಭಾರತದ ಪೌರತ್ವಕ್ಕೆ ಅರ್ಹರನ್ನಾಗಿ ಮಾಡುವುದಕ್ಕೆ ಸಂಬಂಧಿಸಿ 2016ರಲ್ಲಿ 1955ರ ಪೌರತ್ವ ಕಾನೂನು ತಿದ್ದುಪಡಿ ಮಾಡಲು ಪೌರತ್ವ ತಿದ್ದುಪಡಿ ಮಸೂದೆಯನ್ನು (ಸಿಎಬಿ) ಮಂಡಿಸಲಾಯಿತು.

    ಪ್ರತಿಪಕ್ಷಗಳ ಆಕ್ಷೇಪವೇನು?
    ಸಂವಿಧಾನದ 14ನೇ ವಿಧಿಯಲ್ಲಿ ಉಲ್ಲೇಖಿಸಿರುವ ಸಮಾನತೆಯ ನಿಯಮವನ್ನು ಸಿಎಎ ಉಲ್ಲಂಘಿಸುತ್ತದೆ ಎಂಬುದು ಪ್ರತಿಪಕ್ಷಗಳ ಆಕ್ಷೇಪ. ಪೌರತ್ವ ಸಾಂವಿಧಾನಿಕ ವಿಷಯ. ಭಾರತ ಜಾತ್ಯತೀತ ರಾಷ್ಟ್ರವಾಗಿರುವುದರಿಂದ ಧರ್ಮದ ಆಧಾರದ ಮೇಲೆ ಪೌರತ್ವ ನೀಡಬಾರದು ಎನ್ನುವುದು ಇವರ ನಿಲುವು. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಡಿಎಂಕೆ, ಸಿಪಿಐ (ಎಂ) ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಸಿಎಎಯನ್ನು ವಿರೋಧಿಸಿಕೊಂಡೇ ಬಂದಿವೆ.

    ಮುಸ್ಲಿಮರೇಕಿಲ್ಲ?
    ಸಿಎಎ ಕಾಯ್ದೆಯಿಂದ ಮುಸ್ಲಿಮರನ್ನೇಕೆ ಹೊರಗಿಡಲಾಗಿದೆ ಎಂಬ ಪ್ರಶ್ನೆ ಸಹಜ. ಇದಕ್ಕೆ ಕೇಂದ್ರ ಸರ್ಕಾರ ಈ ಹಿಂದೆಯೇ ಉತ್ತರ ನೀಡಿದೆ. ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಲ್ಲ. ಅಲ್ಲಿ ಇಸ್ಲಾಂ ಪ್ರಬಲ ಮತ್ತು ಅಧಿಕೃತ ಧರ್ಮವಾದ್ದರಿಂದ ಅವರ ಮೇಲೆ ಧರ್ಮದ ಕಾರಣಕ್ಕಾಗಿ ಯಾವುದೇ ದೌರ್ಜನ್ಯವೂ ನಡೆದಿಲ್ಲ. ಹಾಗಾಗಿ ಸಿಎಎಯಲ್ಲಿ ಮುಸ್ಲಿಮರನ್ನು ಸೇರಿಸಿಲ್ಲ.

    ಮುಖ್ಯಾಂಶಗಳು
    * 1955ರ ಪೌರತ್ವ ಕಾಯ್ದೆ ಅನುಸಾರ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ, ಕ್ರೖೆಸ್ತ ವಲಸಿಗರು ಭಾರತದಲ್ಲಿ 12 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ವಾಸವಿದ್ದಲ್ಲಿ ಮಾತ್ರ ಭಾರತೀಯ ಪೌರತ್ವ ಪಡೆಯಲು ಅರ್ಹರಾಗಿದ್ದರು.

    * ತಿದ್ದುಪಡಿ ತಂದು ರೂಪಿಸಿರುವ ಹೊಸ ಕಾಯ್ದೆ ಪ್ರಕಾರ ಅಫ್ಘ್ಘಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ, ಕ್ರೖೆಸ್ತ ವಲಸಿಗರು ಭಾರತದಲ್ಲಿ 6 ವರ್ಷ ವಾಸವಿದ್ದಲ್ಲಿ ನಾಗರಿಕತ್ವ ಪಡೆಯಲು ಅರ್ಹರು. ಯಾವುದೇ ದಾಖಲೆ ಇಲ್ಲದಿದ್ದರೂ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು.

    ಸಂಸತ್ತಿನಲ್ಲಿ ಏನಾಯಿತು?
    ಪೌರತ್ವ ತಿದ್ದುಪಡಿ ಮಸೂದೆಯನ್ನು 2019ರ ಜ. 8ರಂದು ಲೋಕಸಭೆ ಅಂಗೀಕರಿಸಿತು. ಆದರೆ 16ನೇ ಲೋಕಸಭೆ ವಿಸರ್ಜನೆಗೊಂಡಿದ್ದರಿಂದ ಅದು ಅಮಾನ್ಯ (ಲ್ಯಾಪ್ಸ್) ಆಯಿತು. ಅಂತಿಮವಾಗಿ 2019ರ ಡಿ. 9ರಂದು ಲೋಕಸಭೆಯಲ್ಲಿ ಮಂಡನೆಯಾಗಿ ಮರುದಿನ (ಡಿ. 10) ಭಾರಿ ಬಹುಮತದೊಂದಿಗೆ ಅಂಗೀಕಾರವಾಯಿತು. ರಾಜ್ಯಸಭೆ ಡಿ. 11ರಂದು ಅದನ್ನು ಪಾಸ್ ಮಾಡಿತು. ನಂತರ ರಾಷ್ಟ್ರಪತಿ ಅಂಕಿತ ಬಿದ್ದು ಕಾನೂನಿನ ರೂಪ ಪಡೆಯಿತು. ಆದರೆ, ಸಿಎಎ ವಿರೋಧಿಸಿ ರಾಷ್ಟ್ರದ ಹಲವೆಡೆ ತೀವ್ರ ಪ್ರತಿಭಟನೆಗಳು ನಡೆದ ಕಾರಣ ಸಿಎಎ ಜಾರಿಗೆ ಅಧಿಸೂಚನೆ ಹೊರಡಿಸಿರಲಿಲ್ಲ, ಹಾಗಾಗಿ ಅದು ಕಾಯ್ದೆಯಾಗಿ ಜಾರಿಗೆ ಬಂದಿರಲಿಲ್ಲ. ಸಂಸದೀಯ ವ್ಯವಹಾರಗಳ ಪ್ರಕಾರ, ಯಾವುದೇ ನಿಯಮಗಳಿಗೆ ರಾಷ್ಟ್ರಪತಿ ಅಂಕಿತ ಬಿದ್ದ 6 ತಿಂಗಳೊಳಗೆ ಅಧಿಸೂಚನೆ ಹೊರಡಿಸಬೇಕು. ಇಲ್ಲದಿದ್ದರೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಧೀನ ಶಾಸನಗಳ ಸಮಿತಿಗಳಿಂದ ವಿಸ್ತರಣೆ ಕೋರಬೇಕು. 2020ರಿಂದ ಕೇಂದ್ರ ಸರ್ಕಾರವು ನಿಯಮಗಳ ಬಗ್ಗೆ ಅಧಿಸೂಚನೆ ಹೊರಡಿಸಲು 8 ಬಾರಿ ಕಾಲಾವಕಾಶ ಪಡೆದಿತ್ತು.

    ಯಾರಿಗೆಲ್ಲ ವಿನಾಯಿತಿ?
    ಸಂವಿಧಾನದ ಆರನೇ ಪರಿಚ್ಛೇದದಲ್ಲಿ ಬರುವ ಪ್ರದೇಶ ಗಳಿಗೆ ಈ ಕಾನೂನು ಅನ್ವಯವಾಗುವುದಿಲ್ಲ. ಅಂದರೆ, ಬುಡಕಟ್ಟು ಪ್ರಾಬಲ್ಯ ಹೊಂದಿರುವ, ಸ್ವಾಯತ್ತ ಜಿಲ್ಲಾ ಮಂಡಳಿಗಳನ್ನು ಹೊಂದಿರುವ ಅಸ್ಸಾಂ, ಮೇಘಾಲಯ, ತ್ರಿಪುರಾ ಮತ್ತು ಮಿಜೋರಾಂಗೆ ಅನ್ವಯವಾಗುವುದಿಲ್ಲ. ಅದೇ ರೀತಿ, ಒಂದು ರಾಜ್ಯದ ನಿರ್ದಿಷ್ಟ ಪ್ರದೇಶಕ್ಕೆ ಹೊರಗಿನವರು ಪ್ರವೇಶಿಸಲು ಅನುಮತಿ ಪತ್ರ ಪಡೆಯಬೇಕಾದ ‘ಇನ್ನರ್​ಲೈನ್ ಪರ್ವಿುಟ್’ ವ್ಯವಸ್ಥೆ ಇರುವ ರಾಜ್ಯಗಳಿಗೂ (ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಿಜೋರಾಂ) ಅನ್ವಯವಾಗುವುದಿಲ್ಲ.

    ವಿರೋಧವೇಕೆ?
    ಇದು ನೆರೆರಾಷ್ಟ್ರಗಳ ಮುಸ್ಲಿಮೇತರರಿಗೆ ಪೌರತ್ವ ನೀಡುವ ಕಾಯ್ದೆಯಾಗಿದ್ದರೂ, ಅಲ್ಪಸಂಖ್ಯಾತ ಮುಸ್ಲಿಮರ ಪೌರತ್ವವನ್ನು ಕಿತ್ತುಕೊಳ್ಳುತ್ತದೆ ಎಂಬ ತಪು್ಪಭಾವನೆಯನ್ನು ಹರಡಲಾಯಿತು. ಹಾಗಾಗಿ, ಮುಸ್ಲಿಮರು ಸಿಎಎ ವಿರುದ್ಧ ಪ್ರತಿಭಟನೆ ಮಾಡಿದ್ದರು.

    ಮತುವಾ ಸಮುದಾಯದಿಂದ ಸಂಭ್ರಮಾಚರಣೆ
    ದೇಶದಲ್ಲಿ ಸಿಎಎ ಜಾರಿಯಾಗುವ ಬಗ್ಗೆ ಅಧಿಸೂಚನೆ ಪ್ರಕಟಗೊಳ್ಳುತ್ತಿದ್ದಂತೆ ಪಶ್ಚಿಮ ಬಂಗಳಾದ ಮತುವಾ ಸಮುದಾಯದವರು ಸೋಮವಾರ ಸಂಜೆ ಸಂಭ್ರಮಾಚರಣೆ ನಡೆಸಿದರು. ಮೂಲತಃ ಪೂರ್ವ ಪಾಕಿಸ್ತಾನದಿಂದ ಬಂದು ಪೂರ್ವ ಪರಗಣ ಜಿಲ್ಲೆಯಲ್ಲಿ ನೆಲೆಸಿರುವ ಇವರು ‘ನಮ್ಮ ಪಾಲಿಗೆ ಇದು ಎರಡನೇ ಸ್ವಾತಂತ್ರ್ಯ ದಿನ. ಹಲವು ವರ್ಷಗಳ ಕಾಯುವಿಕೆ ಅಂತ್ಯಗೊಂಡಿದೆ. ಭಾರತದ ನಾಗರಿಕತ್ವ ದೊರೆಯುತ್ತಿರುವುದು ತೀವ್ರ ಸಂತಸ ತಂದಿದೆ’ ಎಂದಿದ್ದಾರೆ. ಬಂಗಾಳದಲ್ಲಿ ಇವರ ಜನಸಂಖ್ಯೆ 30 ಲಕ್ಷದಷ್ಟಿದ್ದು, ಉತ್ತರ, ದಕ್ಷಿಣ ಪರಗಣ 24 ಜಿಲ್ಲೆಗಳ 30ಕ್ಕೂ ಅಧಿಕ ವಿಧಾನಸಭೆ ಕ್ಷೇತ್ರಗಳಲ್ಲಿ ನೆಲೆಸಿದ್ದಾರೆ.

    6 ಬಾರಿ ತಿದ್ದುಪಡಿ

    ಭಾರತೀಯ ಪೌರತ್ವ ಕಾಯ್ದೆ-1955ಕ್ಕೆ ಈವರೆಗೆ ಆರು ಬಾರಿ ತಿದ್ದುಪಡಿ ತರಲಾಗಿದೆ. 1986, 1992, 2003, 2005, 2015, 2019ರಲ್ಲಿ ತಿದ್ದುಪಡಿಯಾಗಿದೆ.

    ಪೌರತ್ವ ಪಡೆಯುವುದು ಹೇಗೆ?
    ಜಿಲ್ಲಾಧಿಕಾರಿಗಳ ಮೂಲಕ ನಿರಾಶ್ರಿತರ ಪೌರತ್ವ ಅರ್ಜಿ ಪಡೆಯಲು ಈ ಹಿಂದೆ ನಿರ್ಧರಿಸಲಾಗಿತ್ತು. ಆದರೆ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಸೇರಿದಂತೆ ಹಲವು ರಾಜ್ಯಗಳು ತಾವು ಸಿಎಎ ಜಾರಿಗೊಳಿಸುವುದಿಲ್ಲ ಎಂದು ಪಟ್ಟು ಹಿಡಿದಿವೆ. ಹೀಗಾಗಿ, ಪೌರತ್ವ ಬಯಸಿ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಕೇಂದ್ರ ಗೃಹ ಸಚಿವಾಲಯ ಪೋರ್ಟಲ್ ರೂಪಿಸಿದೆ. ಅರ್ಜಿ ಸ್ವೀಕಾರ, ಪರಿಶೀಲನೆ ಸೇರಿ ಸಂಪೂರ್ಣ ಪ್ರಕ್ರಿಯೆ ಆನ್​ಲೈನ್ ಮೂಲಕ ನಡೆಯಲಿದೆ. ಆನ್​ಲೈನ್​ನಲ್ಲಿ ರಾಜ್ಯ ಸರ್ಕಾರಗಳ ಯಾವುದೇ ಪಾತ್ರ ಇರುವುದಿಲ್ಲವಾದ್ದರಿಂದ ಅವರು ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸುವ ಸಂದರ್ಭವೇ ಬರುವುದಿಲ್ಲ. ಅಲ್ಲದೇ ಸಂವಿಧಾನದ ಪ್ರಕಾರ, ಕೇಂದ್ರದಡಿ ಬರುವ ಪೌರತ್ವದಂಥ ವಿಷಯಗಳನ್ನು ವಿರೋಧಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿರುವುದಿಲ್ಲ. ಅರ್ಜಿದಾರರು ಭಾರತಕ್ಕೆ ಬಂದ ವರ್ಷವನ್ನು ಪ್ರಯಾಣದ ದಾಖಲೆಗಳ ಮೂಲಕ ಸಾಬೀತು ಪಡಿಸಬೇಕು. ಉಳಿದ ಯಾವ ದಾಖಲೆಗಳ ಅವಶ್ಯಕತೆಯಿಲ್ಲ.

    ನಾಗರಿಕತ್ವ ಪಡೆಯಲು ಯಾರೆಲ್ಲ ಅರ್ಹರು?
    ಧರ್ಮದ ಆಧಾರದಲ್ಲಿ ನೆರೆರಾಷ್ಟ್ರದಲ್ಲಿ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ಬಂದಿರುವ ಮುಸ್ಲಿಮೇತರ ವಲಸಿಗರು ಪೌರತ್ವಕ್ಕೆ ಅರ್ಹರು. ಆದರೆ, ಇವರು 2014 ಡಿ. 31ರ ಮೊದಲು ಭಾರತಕ್ಕೆ ಬಂದಿರಬೇಕು. ಸಾಗರೋತ್ತರ ನಾಗರಿಕರ ನೋಂದಣಿಗೆ ಸಂಬಂಧಿಸಿದ ಪ್ರಸ್ತಾವವನ್ನೂ ಕಾಯ್ದೆ ಒಳಗೊಂಡಿದೆ. ಸಾಗರೋತ್ತರ ನಾಗರಿಕ ಕಾರ್ಡ್ (ಓವರ್​ಸೀಸ್ ಸಿಟಿಜನ್ ಆಫ್ ಇಂಡಿಯಾ/ಒಸಿಐ) ಹೊಂದಿರುವ ವ್ಯಕ್ತಿಯು ಅಸ್ತಿತ್ವದಲ್ಲಿರುವ ಕಾನೂನನ್ನು ಉಲ್ಲಂಘಿಸಿದರೆ ಆತನ ನೋಂದಣಿ ರದ್ದು ಮಾಡುವ ಅವಕಾಶವನ್ನೂ ಕಾಯ್ದೆಯಲ್ಲಿ ಕಲ್ಪಿಸಲಾಗಿದೆ.

    ಕಾನೂನಿನ ರಕ್ಷಣೆ
    ನಮೂದಿತ ಮೂರು ದೇಶಗಳ ಆರು ವಿಭಾಗಗಳ ಜನರನ್ನು ಅಕ್ರಮ ವಲಸಿಗರೆಂಬ ಪಟ್ಟಿಯಿಂದ ಹೊರತುಪಡಿಸಲು ಪೌರತ್ವ ಕಾನೂನಿನ 2 (1) (ಬಿ) ಸೆಕ್ಷನ್​ಗೆ ತಿದ್ದುಪಡಿ ತರಲಾಗಿದೆ. ಸಹಜೀಕರಣದ ಆಧಾರದಲ್ಲಿ ಭಾರತದ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಅವರನ್ನು ಅರ್ಹರನ್ನಾಗಿ ಮಾಡಿದೆ. ನಾಗರಿಕತ್ವ ಪಡೆದ ಈ ಅಕ್ರಮ ವಲಸಿಗರನ್ನು ಅವರು ಭಾರತ ಪ್ರವೇಶಿಸಿದ ದಿನಾಂಕದಿಂದ ಭಾರತೀಯ ಪೌರರು ಎಂದು ಪರಿಗಣಿಸಲಾಗುತ್ತದೆ. ಅವರು ‘ಅಕ್ರಮ ವಲಸಿಗರು’ ಎಂಬ ನೆಲೆಯಲ್ಲಿ ಅವರ ವಿರುದ್ಧ ದಾಖಲಾದ ಎಲ್ಲ ಕಾನೂನು ಪ್ರಕ್ರಿಯೆಗಳು ರದ್ದಾಗುತ್ತವೆ.

    ನಾಯಿ ರೀತಿ ಇರುತ್ತೇನೆಂದರು, ರೂಮಿಗೆ ಕರೆದರು… ಹಲವು ವರ್ಷಗಳ ಬಳಿಕ ನಟಿ ಲಕ್ಷ್ಮೀ ರಹಸ್ಯ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts