More

    ಡಿಕೆಶಿ, ಎಲ್‌ಆರ್‌ಎಸ್ ಪ್ರತಿಕೃತಿಗೆ ಪೊರಕೆ ಸೇವೆ: ಡಿಸಿಎಂ, ಮಾಜಿ ಎಂಪಿ ವಿರುದ್ಧ ಜೆಡಿಎಸ್ ಬೃಹತ್ ಪ್ರತಿಭಟನೆ

    ಮಂಡ್ಯ: ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಸಿಐಬಿಗೆ ವಹಿಸಬೇಕು. ಪ್ರಕರಣ ಹಿಂದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಮಂಗಳವಾರ ನಗರದಲ್ಲಿ ಜೆಡಿಎಸ್‌ನಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
    ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಮಾಯಿಸಿ ಪಕ್ಷದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು, ಡಿಕೆಶಿ ಪೆನ್‌ಡ್ರೈವ್, ಸಿಡಿ ಮಾಸ್ಟರ್ ಹಾಗೂ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ರಾಜಕೀಯ ಶಿಖಂಡಿ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು. ಮಾತ್ರವಲ್ಲದೆ ಡಿಕೆಶಿ ಹಾಗೂ ಶಿವರಾಮೇಗೌಡ ಅವರ ಪ್ರತಿಕೃತಿಗೆ ಮಹಿಳಾ ಕಾರ್ಯಕರ್ತರು ಪೊರಕೆ ಸೇವೆ ಮಾಡಿ ಬಳಿಕ ದಹಿಸಿದರು.
    ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆ ಆಗಬೇಕೆಂಬುದು ನಮ್ಮ ಪಕ್ಷದ ಒತ್ತಡ ಆಗಿದೆ. ಆದರೆ, ಈ ಪ್ರಕರಣದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬವನ್ನೇ ಟಾರ್ಗೆಟ್ ಮಾಡಿಕೊಂಡು ಆ ಕುಟುಂಬಕ್ಕೆ ಚ್ಯುತಿ ತರಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಮಾತಿನ ಚಕಮಕಿ: ಪ್ರತಿಭಟನೆ ಸಂದರ್ಭದಲ್ಲಿ ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ಅವರ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಲು ಮುಂದಾದಾಗ ಪೊಲೀಸರು ಪ್ರತಿಕೃತಿಯನ್ನು ಹೊತ್ತೊಯ್ದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಆದಾಗ್ಯೂ ಪೊಲೀಸರಿಂದ ಪ್ರತಿಕೃತಿಯನ್ನು ಪಡೆದು ಚಪ್ಪಲಿ ಹಾರ ಹಾಕಿ, ಪೊರಕೆ ಸೇವೆ ಮಾಡಿದರು.
    ಪೆನ್‌ಡ್ರೈವ್ ಹಂಚಿಕೆ ಮಾಡಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬಕ್ಕೆ ಕಳಂಕ ತರಲು ಕಾಂಗ್ರೆಸ್ ನಾಯಕರು ಷಡ್ಯಂತ್ರ ರೂಪಿಸಿದ್ದಾರೆ. ಪೆನ್‌ಡ್ರೈವ್ ಹಿಂದಿನ ರಾಜಕೀಯ ದುರುದ್ದೇಶ ಬಯಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್.ಆರ್. ಶಿವರಾಮೇಗೌಡ ಸೇರಿದಂತೆ ಕಾಂಗ್ರೆಸ್‌ನ ಹಲವು ನಾಯಕರು ಭಾಗಿಯಾಗಿರುವುದು ಕಂಡು ಬಂದಿದೆ. ದೇವೇಗೌಡರ ಕುಟುಂಬವನ್ನು ಗುರಿಯಾಗಿಸಿ ಅವರ ಕುಟುಂಬಕ್ಕೆ ಚ್ಯುತಿ ತರಲು ಮುಂದಾಗಿದ್ದು, ಬೀದಿ ಬೀದಿಯಲ್ಲಿ ಪೆನ್‌ಡ್ರೈವ್ ಹಂಚಿಕೆ ಮಾಡುವ ಮೂಲಕ ಮಹಿಳೆಯರ ಮಾನಹಾನಿ ಮಾಡಲಾಗಿದೆ. ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ. ಇದರ ಸತ್ಯಾಸತ್ಯತೆ ಹೊರ ಬರಬೇಕಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರವು ವಿಶೇಷ ತನಿಖಾ ತಂಡ (ಎಸ್‌ಐಟಿ) ದ ಮೇಲೆ ಪ್ರಭಾವ ಬೀರುತ್ತಿರುವುದು ಬೆಳಕಿಗೆ ಬಂದಿದೆ. ಎಸ್‌ಐಟಿ ಮೇಲೆ ನಂಬಿಕೆ ಇಲ್ಲವಾಗಿದ್ದು, ಈ ತನಿಖೆ ಕೈ ಬಿಟ್ಟು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದರು.
    ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕರಾದ ಸುರೇಶ್‌ಗೌಡ, ರವೀಂದ್ರ ಶ್ರೀಕಂಠಯ್ಯ, ಡಾ.ಕೆ.ಅನ್ನದಾನಿ, ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಜಿಪಂ ಮಾಜಿ ಸದಸ್ಯ ಕೆ.ಎಸ್.ವಿಜಯಾನಂದ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡ ಅಮರಾವತಿ ಚಂದ್ರಶೇಖರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts