More

    ಕರೊನಾಕ್ಕೆ ಸಿದ್ಧವಾಗಿದೆ ಆಯುರ್ವೇದದ 4 ಮದ್ದು; ಕ್ಲಿನಿಕಲ್​ ಪ್ರಯೋಗಕ್ಕೆ ಸಿದ್ಧತೆ

    ನವದೆಹಲಿ: ಮಹಾಮಾರಿ ಕರೊನಾಕ್ಕೆ ಮದ್ದು ಕಂಡುಹಿಡಿಯಲು ವಿಶ್ವದೆಲ್ಲಡೆ ಪ್ರಯತ್ನಗಳು ಜಾರಿಯಲ್ಲಿವೆ. ಇಸ್ರೇಲ್​ ಸೇರಿ ಒಂದೆರಡು ರಾಷ್ಟ್ರಗಳು ಈ ವೈರಾಣುವನ್ನು ನಿಯಂತ್ರಿಸುವ ಆ್ಯಂಟಿಬಾಡಿಯನ್ನು (ಪ್ರತಿಕಾಯ) ಕಂಡುಹಿಡಿದಿರುವುದಾಗಿ ಹೇಳಿಕೊಂಡಿವೆಯಾದರೂ, ಚಿಕಿತ್ಸೆಯಲ್ಲಿ ಅವುಗಳ ಉಪಯುಕ್ತತೆ ಬಗ್ಗೆ ಇನ್ನೂ ಸ್ಪಷ್ಟತೆ ಲಭ್ಯವಾಗಿಲ್ಲ. ಹೀಗಿರುವಾಗ ಭಾರತದಲ್ಲಿ ಕೋವಿಡ್​ 19 ಸೋಂಕಿನ ಚಿಕಿತ್ಸೆಗೆ ಆಯುರ್ವೇದದ 4 ಮದ್ದುಗಳು ಸಿದ್ಧವಾಗಿವೆ. ಈ ವಾರದಲ್ಲಿ ಅವುಗಳ ಕ್ಲಿನಿಕಲ್​ ಪರೀಕ್ಷೆ ಆರಂಭವಾಗಲಿರುವುದಾಗಿ ಆಯುಷ್​ ಸಚಿವ ಶ್ರೀಪಾದ್​ ವೈ ನಾಯಕ್​ ಟ್ವೀಟ್​ ಮಾಡಿ ತಿಳಿಸಿದ್ದಾರೆ.

    ಆಯುಷ್​ ಸಚಿವಾಲಯ ಮತ್ತು ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್​ಐಆರ್​) ಜಂಟಿಯಾಗಿ ಈ ನಾಲ್ಕು ಔಷಧಗಳನ್ನು ಸಿದ್ಧಪಡಿಸಿವೆ. ಸದ್ಯ ಕೋವಿಡ್​ 19 ಸೋಂಕಿತರಿಗೆ ಕೊಡಲಾಗುತ್ತಿರುವ ಚಿಕಿತ್ಸೆಗೆ ಪೂರಕವಾಗಿ ಈ ಔಷಧಗಳನ್ನು ಬಳಸಲಾಗುತ್ತದೆ. ತನ್ಮೂಲಕ ನಮ್ಮ ಸಾಂಪ್ರದಾಯಿಕ ಚಕಿತ್ಸಾ ಪದ್ಧತಿ ಕರೊನಾದಂಥ ಮಾರಕ ಸೋಂಕನ್ನು ಗುಣಪಡಿಸುವ ವಿಶ್ವಾಸ ಇದೆ ಎಂದು ಸಚಿವ ಶ್ರೀಪಾದ್​ ವೈ ನಾಯಕ್​ ಟ್ವೀಟ್​ನಲ್ಲಿ ಹೇಳಿದ್ದಾರೆ.

    ಇದನ್ನೂ ಓದಿ: ಕರೊನಾ ವೈರಸ್​ ಕೃತಕ ಸೃಷ್ಟಿ, ಅಮೆರಿಕ ವಾದಕ್ಕೆ ಸಿಕ್ತಾ ಭಾರತದ ಬೆಂಬಲ?

    ಈ ಔಷಧಗಳು ಎಷ್ಟು ಪರಿಣಾಮಕಾರಿ ಎಂಬುದು ಇನ್ನು ಮೂರು ತಿಂಗಳಲ್ಲಿ ಗೊತ್ತಾಗಲಿದೆ ಎಂದು ಸಿಎಸ್​ಐಆರ್​ನ ಪ್ರಧಾನ ನಿರ್ದೇಶಕ ಶೇಖರ್​ ಮಾಂಡೆ ಹಾಗೂ ಆಯುರ್ವೇದ ಮತ್ತು ಆಯುಷ್​ನ ಕಾರ್ಯದರ್ಶಿ ವೈದ್ಯ ರಾಜೇಶ್​ ಕೊಟೇಚಾ ಬುಧವಾರ ತಿಳಿಸಿದ್ದರು.

    ಕರೊನಾ ಗುಣಪಡಿಸುವ ಆಯುರ್ವೇದದ ನಾಲ್ಕು ಔಷಧಗಳನ್ನು ಸಿಎಸ್​ಐಆರ್​ ಮತ್ತು ಆಯುಷ್​ ಜಂಟಿಯಾಗಿ ತಯಾರಿಸಲಿರುವುದಾಗಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ ಕಳೆದ ವಾರ ಹೇಳಿದ್ದರು. ಅದಕ್ಕೆ ಸರಿಯಾಗಿ ಅಶ್ವಗಂಧ, ಯಷ್ಟಿಮಧು (ಮುಲೇತಿ), ಗುಡುಚಿ ಮತ್ತು ಪಿಪ್ಪಾಲಿ (ಗಿಲಾಯ್​) ಹಾಗೂ ಆಯುಷ್​ 64ರ (ಮಲೇರಿಯಾ ಚಿಕಿತ್ಸೆಗಾಗಿ ಸಿದ್ಧಪಡಿಸಿರುವ ಔಷಧ) ವಿವಿಧ ಕಾಂಬಿನೇಷನ್​ಗಳನ್ನು ಪರೀಕ್ಷಿಸಲಾಗುತ್ತಿದೆ ಎಂದು ಮಾಂಡೆ ವಿವರಿಸಿದ್ದಾರೆ.

    ಇದನ್ನೂ ಓದಿ: ಕರೊನಾ ಯಾವಾಗ ನಿಯಂತ್ರಣಕ್ಕೆ ಬರಬಹುದೆಂದು ಊಹಿಸೋಕೆ ಸಾಧ್ಯವೇ ಇಲ್ಲ ಎಂದ ಡಬ್ಲ್ಯುಎಚ್​ಒ

    ದೇಶದ ಬಹುಕೇಂದ್ರಗಳಲ್ಲಿ ಈ ಕ್ಲಿನಿಕಲ್​ ಪರೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ. ಉದಾಹರಣೆಗೆ ಕ್ಲಿನಿಕಲ್​ ಪರೀಕ್ಷೆಯನ್ನು ಶಿಷ್ಟಾಚಾರಕ್ಕಾಗಿ ಮಾಡಲಾಗುತ್ತಿದೆ. ಇದಕ್ಕಾಗಿ ಕಾರ್ಯಪಡೆಯನ್ನು ರಚಿಸಿದ್ದು, ಪರೀಕ್ಷೆಗಾಗಿ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ. ವೈದ್ಯಕೀಯ ರಂಗದಲ್ಲಿ ಕಾರ್ಯನಿರ್ವಹಿಸುತ್ತಿರುವ ದೇಶದ ಅತ್ಯುತ್ತಮ ವಿಜ್ಞಾನಿಗಳನ್ನು ಈ ಕಾರ್ಯದಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ಕೊಟೇಚಾ ಹೇಳಿದ್ದಾರೆ.

    ಈ ವಿಷಯದಲ್ಲಿ ನಮಗೆ ಆಯುರ್ವೇದದ ಮೇಲೆ ನಂಬಿಕೆಯಿದೆ. ಆಧುನಿಕ ವೈದ್ಯಕೀಯ ಪದ್ಧತಿ ತೋರಿಸುವ ಮಟ್ಟದ ಪರಿಣಾಮವನ್ನು ಅದರಲ್ಲಿ ತೋರಿಸಲು ಸಾಧ್ಯವಾಗಿಲ್ಲ. ಆದರೆ, ಆಧುನಿಕ ವೈದ್ಯಕೀಯ ಪದ್ಧತಿ ಆರಂಭವಾಗುವ ಸಹಸ್ರಾರು ವರ್ಷಗಳ ಮೊದಲಿನಿಂದಲೂ ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ನಾವು ಅನುಸರಿಸುತ್ತಿದ್ದೆವು. ಆದ್ದರಿಂದ ಕರೊನಾದಂಥ ಸೋಂಕಿನ ಚಿಕಿತ್ಸೆಯಲ್ಲಿ ಆಯುರ್ವೇದ ಔಷಧಗಳ ಬಳಕೆ ಹಾಗೂ ಅವುಗಳ ಪರಿಣಾಮಕಾರಿ ಗುಣಗಳನ್ನು ಮೌಲ್ಯಮಾಪನ ಮಾಡಲು ಇದೀಗ ಸಮಯ ಕೂಡಿ ಬಂದಿದೆ ಎಂದು ಮಾಂಡೆ ಹೇಳಿದ್ದಾರೆ.

    ಇದಕ್ಕೂ ಮುನ್ನ ಚೀನಾದ ಉದಾಹರಣೆ ನೀಡಿದ್ದ ಅವರು, ಚೀನಾದ ಪುರಾತನ ಚಿಕಿತ್ಸಾ ಪದ್ಧತಿ ಬಳಸಿ ಕರೊನಾವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲಾಗಿದೆ ಎಂದು ತಿಳಿಸಿದ್ದರು.

    ದೆಹಲಿ ವಿಮಾನ ನಿಲ್ದಾಣದಿಂದ ಟ್ಯಾಕ್ಸಿಯಲ್ಲಿ 250 ಕಿ.ಮೀ. ಪ್ರಯಾಣಕ್ಕೆ 10ರಿಂದ 12 ಸಾವಿರ ರೂ. ಶುಲ್ಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts