More

    380 ಗ್ರಾಮಗಳಿಗೆ ಓವರ್‌ಹೆಡ್ ಟ್ಯಾಂಕ್ ಮಂಜೂರು

    ಚನ್ನರಾಯಪಟ್ಟಣ: ತಾಲೂಕಿನ 380 ಗ್ರಾಮಗಳಿಗೆ ಜಲಜೀವನ ಮಿಷನ್ ಯೋಜನೆಯಡಿ ಓವರ್‌ಹೆಡ್ ಟ್ಯಾಂಕ್‌ಗಳು ಮಂಜೂರಾಗಿವೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.


    ತಾಲೂಕಿನ ದಿಡಗ ಗ್ರಾಮದಲ್ಲಿ ಜಲಜೀವನ ಮಿಷನ್ ಯೋಜನೆಯಡಿ ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಪ್ರತಿ ಮನೆಗೂ ನಲ್ಲಿ ಮೂಲಕ ಕುಡಿಯುವ ನೀರು ಕಲ್ಪಿಸುವ ಮಹತ್ವಾಕಾಂಕ್ಷೆ ಯೋಜನೆ ಇದಾಗಿದೆ ಎಂದು ತಿಳಿಸಿದರು.


    ಮುಂದಿನ 3-4 ತಿಂಗಳಲ್ಲಿ ಓವರ್‌ಹೆಡ್ ಟ್ಯಾಂಕ್‌ಗಳ ನಿರ್ಮಾಣ ಪೂರ್ಣಗೊಳ್ಳಲಿದ್ದು, ತಕ್ಷಣದಿಂದಲೇ ಮನೆ ಮನೆಗೂ ನಲ್ಲಿಗಳನ್ನು ಅಳವಡಿಸುವ ಕಾರ್ಯ ಪ್ರಾರಂಭವಾಗಲಿದೆ. ಈ ಯೋಜನೆಯಿಂದ ತಾಲೂಕಿನ ಕುಡಿಯುವ ನೀರಿನ ಬರ ನೀಗಲಿದೆ ಎಂದರು.


    ತಾಲೂಕಿನ ಎರಡನೇ ಪಟ್ಟಣವಾಗಿ ಬೆಳೆಯುತ್ತಿರುವ ಹೋಬಳಿ ಕೇಂದ್ರ ಹಿರೀಸಾವೆ ಗ್ರಾಮಕ್ಕೆ 2 ಲಕ್ಷ ಹಾಗೂ 1 ಲಕ್ಷ ಲೀಟರ್ ಸಾಮರ್ಥ್ಯದ 2 ಟ್ಯಾಂಕ್ ನಿರ್ಮಿಸಲಾಗುವುದು. ಅಲ್ಲದೆ ಜಮೀನುಗಳಲ್ಲಿ ಇರುವ ಮನೆಗಳಿಗೂ ಈ ಯೋಜನೆ ತಲುಪಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.


    ದಿಡಗ ಗ್ರಾಮದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ. ಇನ್ನು ದಿಡಗ ಹಾಗೂ ಬಾಳಗಂಚಿ ವ್ಯಾಪ್ತಿಯ ವಿದ್ಯುತ್ ಸಮಸ್ಯೆ ಬಗೆಹರಿಸುವ ಸಲುವಾಗಿ ಮುದಿಬೆಟ್ಟಕಾವಲು ಬಳಿ ಉಪವಿದ್ಯುತ್ ಪ್ರಸರಣಾ ಕೇಂದ್ರ ಸ್ಥಾಪಿಸಲು ಈಗಾಗಲೇ ಜಮೀನು ಗುರುತಿಸಲಾಗಿದ್ದು ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.


    ಸರ್ಕಾರವು ಕ್ವಿಂಟಾಲ್ ಕೊಬ್ಬರಿಗೆ 11,750 ರೂ. ನಿಗದಿ ಮಾಡಿದ್ದು ನಫೆಡ್ ಮೂಲಕ ಕೊಬ್ಬರಿ ಖರೀದಿಸಲು ಮುಂದಿನ ವಾರದಲ್ಲಿ ಚಾಲನೆ ನೀಡಲಾಗುವುದು. ತಲಾ ಕ್ವಿಂಟಾಲ್ ಕೊಬ್ಬರಿಗೆ 15 ಸಾವಿರ ರೂ. ಬೆಲೆ ಸಿಕ್ಕರೆ ಮಾತ್ರ ತೆಂಗು ಬೆಳೆಗಾರರ ಬದುಕು ಅಸನಾಗಲು ಸಾಧ್ಯ ಎಂದು ಎಂದು ಹೇಳಿದರು.


    ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ಎಪಿಎಂಸಿ ಮಾಜಿ ಅಧ್ಯಕ್ಷರಾದ ರಘುರಾಮ್, ಮಂಜೇಗೌಡ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಎಂ.ಆರ್.ವಾಸು, ಪುಟ್ಟರಾಜ್, ದಿಡಗ ಸೊಸೈಟಿ ಅಧ್ಯಕ್ಷ ಪಿ.ಕೆ.ಶಿವಶಂಕರ್, ಮಾಜಿ ಅಧ್ಯಕ್ಷರಾದ ಎಚ್.ಕೆ.ಯೋಗೇಶ್, ಎಸ್.ಕುಮಾರ್, ನಿಂಗೇಗೌಡ, ತಾಪಂ ಇಒ ಸುನೀಲ್‌ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ, ಸದಸ್ಯರು, ಜೆಜೆಎಂ ಸಹಾಯಕ ಇಂಜಿನಿಯರ್ ನಳಿನಾ, ಪ್ರಕಾಶ್, ಗುತ್ತಿಗೆದಾರ ಮುರುಗೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts