More

    ಉಡುಪಿಯ 37 ಬೋಟ್ ಕೇರಳದಲ್ಲೇ ಬಾಕಿ, ವಾಪಸ್ ತರಲು ಹೊರಟಿದ್ದಾರೆ 72 ಮೀನುಗಾರರು

    ಉಡುಪಿ/ಕೋಟ: ಕೇರಳ ಬಂದರಿನಲ್ಲಿ ಬಾಕಿಯಾಗಿರುವ ಕೋಡಿ-ಕನ್ಯಾನ ಭಾಗದ ಮೀನುಗಾರಿಕೆ ಬೋಟುಗಳನ್ನು ವಾಪಸ್ ಕರೆತರಲು ಮೂರು ಯಾಂತ್ರೀಕೃತ ಬೋಟುಗಳು 72 ಮೀನುಗಾರರೊಂದಿಗೆ ಹಂಗಾರಕಟ್ಟೆ ಬಂದರಿನಿಂದ ಗುರುವಾರ ತೆರಳಿವೆ.

    ಜಿಲ್ಲೆಯ 41 ಸ್ಮಾಲ್ ಟ್ರಾಲ್ ಯಾಂತ್ರೀಕೃತ ಬೋಟುಗಳು ಲಾಕ್‌ಡೌನ್ ಹಿನ್ನೆಲೆಯಲ್ಲಿ ಚೆರ್ವತ್ತೂರು, ಚೊಂಬಲ್ ಮತ್ತು ಕಣ್ಣೂರಿನಲ್ಲಿ ಸಿಲುಕಿದ್ದವು. ಮೀನುಗಾರರು ಸುರಕ್ಷಿತವಾಗಿ ಊರಿಗೆ ಆಗಮಿಸಿದ್ದರೂ, ಬೋಟ್‌ಗಳದ್ದೇ ಚಿಂತೆಯಾಗಿತ್ತು. ಇದನ್ನು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ, ದ.ಕ. ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಗಮನಕ್ಕೆ ತರಲಾಗಿತ್ತು.

    ಸಚಿವ ಕೋಟ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರೊಂದಿಗೆ ಚರ್ಚಿಸಿ ಕೇರಳ ಸರ್ಕಾರದ ಜತೆ ಮಾತುಕತೆ ನಡೆಸಿದ್ದಾರೆ. ಬೋಟ್‌ಗಳನ್ನು ತರಲು ಕೇರಳ ಅನುಮತಿ ನೀಡಿದೆ. ಇದರ ವೆಚ್ಚ ಭರಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ. ಮೀನುಗಾರರಿಗೆ ಉಡುಪಿ ಜಿಲ್ಲಾಧಿಕಾರಿ ಮತ್ತು ಕರಾವಳಿ ಕಾವಲು ಪೊಲೀಸರು ಅನುಮತಿ ನೀಡಿದ್ದು, ಪಾಸ್ ವ್ಯವಸ್ಥೆ ಮಾಡಲಾಗಿದೆ. ಶುಕ್ರವಾರ ಬೋಟುಗಳು ಜಿಲ್ಲೆ ತಲುಪಬಹುದು ಎಂಬ ನಿರೀಕ್ಷೆ ಇದೆ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ತಿಳಿಸಿದ್ದಾರೆ.

    ಕೇರಳಕ್ಕೆ ಬೋಟುಗಳು ತೆರಳುವ ಸಂದರ್ಭ ಕರಾವಳಿ ಕಾವಲು ಪಡೆಯ ಎಸ್‌ಐ ವಾಸಪ್ಪ ನಾಯ್ಕ, ಕಾನ್‌ಸ್ಟೆಬಲ್ ಮಹನ್, ಮೀನುಗಾರಿಕಾ ಮುಖಂಡರಾದ ಶಂಕರ್ ಮರಕಾಲ, ಶೇಖರ್ ಮೆಂಡನ್, ನರಸಿಂಹ ಕಾಂಚನ್, ಸೀತಾರಾಮ ಮರಕಾಲ, ರಘು ಕಾಂಚನ್, ಕೋಟೇಶ್ವರ ಮೊಗವೀರ ಯುವ ಘಟಕದ ಅಧ್ಯಕ್ಷ ರವೀಶ್, ಕಾರ್ಯದರ್ಶಿ ರಾಘವೇಂದ್ರ ಹರಪ್ಪನಕೆರೆ, ಜಯಪ್ರಕಾಶ್ ಹೆಗ್ಡೆ ಅಭಿಮಾನಿ ಬಳಗದ ಗೋಪಾಲ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.

    400 ಕಾರ್ಮಿಕರು ಬಾಕಿ: ಮಲ್ಪೆ ಬಂದರಿನಲ್ಲಿ ಒಡಿಶಾ, ಉತ್ತರಾಖಂಡ, ಛತ್ತೀಸ್‌ಗಢ, ಬಿಹಾರದ 400ಕ್ಕೂ ಅಧಿಕ ಮೀನು ಕಾರ್ಮಿಕರು ಇನ್ನೂ ಬಾಕಿಯಾಗಿದ್ದಾರೆ. ಅವರ ರಾಜ್ಯಗಳಿಂದ ಅನುಮತಿ ಮತ್ತು ರೈಲು ವ್ಯವಸ್ಥೆ ಆಗದ ಕಾರಣ ತೆರಳುವುದು ಸಾಧ್ಯವಾಗಿಲ್ಲ. ಶೀಘ್ರ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts