More

    ಕರಾವಳಿಯಲ್ಲಿ 369 ಪಾಸಿಟಿವ್

    ಮಂಗಳೂರು: ಕರಾವಳಿಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲೇ ಸಾಗಿದೆ. ಭಾನುವಾರ ಒಟ್ಟು 369 ಜನರಲ್ಲಿ (ದ.ಕ ಜಿಲ್ಲೆಯಲ್ಲಿ 199, ಉಡುಪಿ ಜಿಲ್ಲೆಯಲ್ಲಿ 170)ಕೋವಿಡ್ ಸೋಂಕು ಪತ್ತೆಯಾಗಿದೆ. ಕಳೆದೆರಡು ದಿನಗಳಲ್ಲಿ 10 ಮಂದಿ (ದ.ಕ.10,ಉಡುಪಿ 2) ಮೃತರಾಗಿದ್ದಾರೆ.
    ದ.ಕ.ದಲ್ಲಿ ಶುಕ್ರವಾರ ಮೃತರಾದ ಒಬ್ಬರು ಹಾಗೂ ಶನಿವಾರ ಮೃತರಾದ 7 ಮಂದಿ ಸೇರಿದಂತೆ 8 ಮಂದಿಯಲ್ಲಿ ಕರೊನಾ ದೃಢಪಟ್ಟಿದೆ. ಖಾಸಗಿ ಆಸ್ಪತ್ರೆಗೆ ಬಹು ಅಂಗಾಂಗ ವೈಫಲ್ಯದೊಂದಿಗೆ ದಾಖಲಾಗಿದ್ದ 71ರ ಹರೆಯದ ಮಂಗಳೂರು ನಿವಾಸಿ ವೃದ್ಧ ಶುಕ್ರವಾರ ಮೃತರಾಗಿದ್ದರು. ಮಂಗಳೂರು ನಿವಾಸಿ 70 ವರ್ಷದ ವೃದ್ಧ ಕಿಡ್ನಿ ಕಾಯಿಲೆ, ಸೆಪ್ಸಿಸ್, ಶ್ವಾಸಕೋಶ ಕಾಯಿಲೆ, ಹೈಪರ್ ಟೆನ್ಶನ್ ಇತ್ಯಾದಿಯೊಂದಿಗೆ 20ರಂದು ದಾಖಲಾದವರು ಶನಿವಾರ ಮೃತರಾಗಿದ್ದರು. ಪುತ್ತೂರಿನ 55 ವರ್ಷದ ಗಂಡಸು ಜು.23ರಂದು ಸೆಪ್ಸಿಸ್, ಸೆಪ್ಟಿಕ್‌ಶಾಕ್, ಕಿಡ್ನಿ ಸಮಸ್ಯೆಯೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದು 24ರಂದು ಮೃತರಾಗಿದ್ದರು. ಮಂಗಳೂರು ನಿವಾಸಿ 56 ವರ್ಷದ ಗಂಡಸು ತೀವ್ರ ಉಸಿರಾಟ ತೊಂದರೆ, ಬಹುಅಂಗಾಂಗ ವೈಫಲ್ಯ, ಹೃದಯ ಸಮಸ್ಯೆಯೊಂದಿಗೆ ದಾಖಲಾಗಿ ಶನಿವಾರ ಮೃತಪಟ್ಟಿದ್ದರು. ಮಂಗಳೂರು ನಿವಾಸಿ 72ರ ವೃದ್ಧ ಜು.18ರಂದು ಖಾಸಗಿ ಆಸ್ಪತ್ರೆಗೆ ತೀವ್ರ ಉಸಿರಾಟ ತೊಂದರೆ, ಸೆಪ್ಟಿಕ್ ಶಾಕ್, ಬ್ಯಾಕ್ಟಿರಿಯಾ ಸೋಂಕು, ಕಿಡ್ನಿ ವೈಫಲ್ಯ ಇತ್ಯಾದಿ ಸಮಸ್ಯೆಗಳೊಂದಿಗೆ ದಾಖಲಾಗಿ ಶನಿವಾರ ಮೃತರಾಗಿದ್ದರು.

    ಮಂಗಳೂರು ನಿವಾಸಿ 45 ವರ್ಷದ ಮಹಿಳೆ ಶುಕ್ರವಾರ ಖಾಸಗಿ ಆಸ್ಪತ್ರೆಗೆ ಶ್ವಾಸಕೋಶದ ಕ್ಯಾನ್ಸರ್, ನ್ಯುಮೋನಿಯಾದೊಂದಿಗೆ ದಾಖಲಾಗಿದ್ದು ಶನಿವಾರ ಮೃತರಾದರು. 55 ವರ್ಷದ ಮಂಗಳೂರು ನಿವಾಸಿ ಗಂಡಸು ಜು.21ರಂದು ಸೆಪ್ಟಿಕ್ ಶಾಕ್, ಬ್ಯಾಕ್ಟಿರಿಯಾ ಸೋಂಕು, ಹೃದಯ ಸಮಸ್ಯೆ, ಶ್ವಾಸನಾಳದಲ್ಲಿ ತಡೆ ಇತ್ಯಾದಿ ಸಮಸ್ಯೆಯೊಂದಿಗೆ ದಾಖಲಾಗಿದ್ದು ಶನಿವಾರ ಸಾವನ್ನಪ್ಪಿದ್ದರು. ಮಂಗಳೂರು ಮೂಲದ 70 ವರ್ಷದ ವೃದ್ಧ ಗಂಭೀರ ನ್ಯುಮೋನಿಯಾ, ಬಹುಅಂಗಾಂಗ ವೈಫಲ್ಯ, ಸೆಪ್ಸಿಸ್, ಕಿಡ್ನಿ ಸಮಸ್ಯೆಯೊಂದಿಗೆ ಜು.24ರಂದು ದಾಖಲಾದವರು ಅದೇ ದಿನ ಮೃತರಾದರು. ಇವರೆಲ್ಲರಲ್ಲೂ ಕೋವಿಡ್ ಸೋಂಕು ದೃಢಪಟ್ಟಿರುತ್ತದೆ.

    199 ಮಂದಿ ಪಾಸಿಟಿವ್ ಬಂದಿರುವುದರೊಂದಿಗೆ ಒಟ್ಟು ಪಾಸಿಟಿವ್ ಸಂಖ್ಯೆ 4811ಕ್ಕೆ ಏರಿದ್ದು 2471 ಸಕ್ರಿಯ ಪ್ರಕರಣಗಳಿವೆ.
    90 ಮಂದಿ ಚಿಕಿತ್ಸೆ ಪೂರೈಸಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಭಾನುವಾರದ ಪ್ರಕರಣಗಳಲ್ಲಿ 31 ನೇರಸಂಪರ್ಕದಿಂದ, ಇನ್‌ಫ್ಲುಯೆಂಜಾ ಮಾದರಿ ಕಾಯಿಲೆಯವರು 73 ಮಂದಿಯಾಗಿದ್ದು ತೀವ್ರ ಉಸಿರಾಟದ ತೊಂದರೆಯದ್ದು 10 ಪ್ರಕರಣಗಳಾಗಿದ್ದು ಇಬ್ಬರು ವಿದೇಶದ ಪ್ರಯಾಣಿಕರು. 83 ಮಂದಿಯ ಸೋಂಕಿನ ಮೂಲ ಪತ್ತೆಯಾಗಬೇಕಷ್ಟೆ. ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟಿರುವ ಬೆಂದೂರಿನ 63 ವರ್ಷದ ವ್ಯಕ್ತಿ, ಉಡುಪಿ ಇಂದಿರಾ ನಗರದ 68 ವರ್ಷದ ವ್ಯಕ್ತಿ ಅನಾರೋಗ್ಯಗಳಿಂದ ಬಳಲುತ್ತಿದ್ದರು.

    ಉಡುಪಿಯಲ್ಲಿ 706 ನೆಗೆಟಿವ್
    ಉಡುಪಿ: ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3388ಕ್ಕೆ ಏರಿಕೆದೆ. 169ರಲ್ಲಿ ಉಡುಪಿ 86, ಕುಂದಾಪುರ 31, ಕಾರ್ಕಳದ 52 ಮಂದಿ ಇದ್ದಾರೆ. 106 ಪುರುಷರು, 63 ಮಹಿಳೆಯರು ಸೋಂಕು ಬಾಧಿತರು. 706 ಮಂದಿಯ ವರದಿ ಭಾನುವಾರ ನೆಗೆಟಿವ್ ಬಂದಿದೆ. ಇನ್ನೂ 564 ಮಂದಿಯ ವರದಿ ಬರಲು ಬಾಕಿ ಇದೆ. ಭಾನುವಾರ 912 ಮಂದಿಯ ಗಂಟಲದ್ರವ ಮಾದರಿ ಸಂಗ್ರಹಿಸಲಾಗಿದೆ. 125 ಮಂದಿ ಸೋಂಕಿನಿಂದ ಸಂಪೂರ್ಣ ಗುಣವಾಗಿ ಡಿಸ್ಚಾರ್ಜ್ ಆಗಿದ್ದಾರೆ. 626 ಮಂದಿ ಸೋಂಕಿತರು ಹೋಂ ಐಸೋಲೇಶನ್‌ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. 1241 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಕಾಸರಗೋಡಿನ 107 ಮಂದಿಗೆ ಕೋವಿಡ್
    ಕಾಸರಗೋಡು: ಜಿಲ್ಲೆಯಲ್ಲಿ ಕೋವಿಡ್-19 ರೋಗಬಾಧಿತರ ಸಂಖ್ಯೆ ಭಾನುವಾರ 107ಕ್ಕೇರಿದೆ. ಕೇರಳದಲ್ಲಿ ಒಟ್ಟು 927 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ 76 ಮಂದಿ ವಿದೇಶದಿಂದ, 91 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರಾಗಿದ್ದಾರೆ. ಒಟ್ಟು 733 ಮಂದಿಗೆ ಸಂಪರ್ಕದಿಂದ ರೋಗ ತಗುಲಿದೆ. ಇವರಲ್ಲಿ 67 ಮಂದಿಯ ರೋಗ ಮೂಲ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಕೇರಳದಲ್ಲಿ ಕೋವಿಡ್ ಬಾಧಿಸಿ ಇಬ್ಬರು ಮೃತಪಟ್ಟಿದ್ದು, ಈ ಮೂಲಕ ಕೇರಳದಲ್ಲಿ ಕರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ.

    ವಿವಾಹದಲ್ಲಿ ಭಾಗವಹಿಸಿದ 43 ಮಂದಿಗೆ ಪಾಸಿಟಿವ್: ಚೆಂಗಳ ಗ್ರಾಪಂ ನಾಲ್ಕನೇ ವಾರ್ಡ್‌ನ ಮನೆಯೊಂದರಲ್ಲಿ 17ರಂದು ನಡೆದ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದ 43 ಮಂದಿಗೆ ಕೋವಿಡ್ 19 ಖಚಿತಗೊಂಡಿದೆ. ಹೀಗಾಗಿ ಈ ಸಮಾರಂಭದಲ್ಲಿ ಭಾಗವಹಿಸಿದ್ದ ಎಲ್ಲರೂ 14 ದಿನ ಸ್ವಯಂ ಕ್ವಾರಂಟೈನ್‌ನಲ್ಲಿರುವಂತೆ ತಿಳಿಸಿದ್ದಾರೆ.

    ಕ್ವಾರಂಟೈನ್ ಅವಧಿ ದ.ಕ.ಜಿಲ್ಲಾಡಳಿತ ಮಾಹಿತಿ
    ಮಂಗಳೂರು: ವಿದೇಶಗಳಿಂದ ಬಂದವರ ಕ್ವಾರೆಂಟೈನ್ ಅವಧಿ ಬಗ್ಗೆ ಅವಾಸ್ತವಿಕ ಮಾಹಿತಿ ಸಾಮಾಜಿಕ ಜಾಲತಾಣ ಹಾಗೂ ಕೆಲವು ಮಾಧ್ಯಮಗಳಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ. ವಿದೇಶಗಳಿಂದ ಬಂದವರು ಕಡ್ಡಾಯವಾಗಿ 14 ದಿನ ಕ್ವಾರೆಂಟೈನ್ ಇರಬೇಕಾಗುತ್ತದೆ. ಇದರಲ್ಲಿ ಏಳು ದಿನ ಸಾಂಸ್ಥಿಕ ಕ್ವಾರೆಂಟೈನ್‌ನಲ್ಲಿ (ಲಾಡ್ಜ್) ಇರಲೇಬೇಕು. ಈ ಅವಧಿಯಲ್ಲಿ ಅವರ ಗಂಟಲ ದ್ರವ ಪರೀಕ್ಷೆ ನಡೆಸಿದಾಗ ನೆಗೆಟಿವ್ ಬಂದರೆ ಏಳನೇ ದಿನದ ನಂತರ ಹೋಂ ಕ್ವಾರೆಂಟೈನ್‌ಗೆ ಕಳುಹಿಸಲಾಗುತ್ತದೆ. ಆದರೆ ವಿದೇಶದಿಂದ ಬಂದವರಲ್ಲಿ 10 ವರ್ಷದೊಳಗಿನ ಮಕ್ಕಳು, 60 ವರ್ಷದ ಮೇಲಿನವರು, ಗರ್ಭಿಣಿಯರು, ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಸಾಂಸ್ಥಿಕ ಕ್ವಾರೆಂಟೈನ್(ಲಾಡ್ಜ್)ಗೆ ಕಳುಹಿಸಿದ ಮರುದಿನವೇ ಅವರ ಗಂಟಲ ದ್ರವ ಮಾದರಿ ಸಂಗ್ರಹಿಸಲಾಗುತ್ತದೆ. ನಂತರ ಲ್ಯಾಬ್ ವರದಿ ನೆಗೆಟಿವ್ ಬಂದರೆ ಮಾತ್ರ ಅವರನ್ನು 14 ದಿನಗಳ ಹೋಂ ಕ್ವಾರೆಂಟೈನ್‌ಗೆ ಕಳುಹಿಸಲಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts