More

    345 ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತರಿಗೆ ಅಧಿಕಾರ

    ಬೆಳಗಾವಿ: ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯಲ್ಲಿ 5,351ಕ್ಕೂ ಹೆಚ್ಚು ಬೆಂಬಲಿತ ಸದಸ್ಯರನ್ನು ಗೆಲ್ಲಿಸುವ ಮೂಲಕ ಬಿಜೆಪಿ ತನ್ನ ನೆಲೆ ಗಟ್ಟಿ ಮಾಡಿಕೊಂಡಿದೆ. ಅಲ್ಲದೆ, ಈ ಬಾರಿ 385ಕ್ಕೂ ಅಧಿಕ ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತರಿಗೆ ಅಧಿಕಾರದ ಅದೃಷ್ಟ ತೆರೆದಿದೆ.

    ಕಾಂಗ್ರೆಸ್‌ನ ಜಿಲ್ಲಾ ಮತ್ತು ತಾಲೂಕು ಮುಖಂಡರುಗಳ ಒಳಜಗಳ, ಶಾಸಕರ ವೈಮನಸ್ಸು ಇನ್ನಿತರ ಕಾರಣಗಳಿಂದಾಗಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 9,560ಕ್ಕೂ ಹೆಚ್ಚು ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಕಾಂಗ್ರೆಸ್ ಎಡವಿದೆ. ಕೇವಲ 2,670 ಬೆಂಬಲಿತ ಸದಸ್ಯರನ್ನು ಗೆಲ್ಲಿಸಿಕೊಂಡಿದೆ. ಇನ್ನೊಂದು ವಿಶೇಷವೆಂದರೆ, ಕಾಂಗ್ರೆಸ್‌ನ ಹಾಲಿ ಶಾಸಕರ ಕ್ಷೇತ್ರದಲ್ಲಿಯೂ ಪಕ್ಷಕ್ಕೆ ಹಿನ್ನಡೆ ಉಂಟಾಗಿದೆ. ಅಲ್ಲದೆ, ಕೇವಲ 132 ಗ್ರಾಪಂಗಳಲ್ಲಿ ಅಧಿಕಾರದ ಗದ್ದುಗೆ ಖಚಿತ ಪಡಿಸಿಕೊಂಡಿದೆ. ಜಿಲ್ಲೆಯಲ್ಲಿ ಯಾರ ಬೆಂಬಲವೂ ಇಲ್ಲದೆ ಸ್ವತಂತ್ರವಾಗಿ ಸ್ಪರ್ಧಿಸಿದ್ದ 2,340 ಅಭ್ಯರ್ಥಿಗಳ ಪೈಕಿ 148ಕ್ಕೂ ಅಧಿಕ ಜನರು ಗೆಲುವು ಸಾಧಿಸಿದ್ದಾರೆ.

    ಜಿಲ್ಲೆಯಲ್ಲಿ 477 ಗ್ರಾಮ ಪಂಚಾಯಿತಿಗಳ 8,169 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಅದರಲ್ಲಿ 781 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದರು. ಇನ್ನುಳಿದ 7,388 ಸದಸ್ಯ ಸ್ಥಾನಗಳಿಗೆ ಜರುಗಿದ ಚುನಾವಣೆಯಲ್ಲಿ 20,728 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆ ಪೈಕಿ 7,388 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಒಟ್ಟಿನಲ್ಲಿ ಮಹಿಳೆ-4,206 ಮತ್ತು ಪುರುಷ-3,963 ಸೇರಿದಂತೆ 8,169 ಸದಸ್ಯರು ಚುನಾಯಿತರಾಗಿದ್ದಾರೆ.

    ಸಚಿವರ ಕ್ಷೇತ್ರದಲ್ಲಿ ಭರ್ಜರಿ ಗೆಲುವು

    ರಾಜ್ಯ ರಾಜಕಾರಣದ ‘ಪವರ್ ಹೌಸ್’ ಎಂದೇ ಬಿಂಬಿತವಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಪ್ರತಿಷ್ಠೆಯಾಗಿದ್ದ ಗ್ರಾಪಂ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಮಧ್ಯೆ ತೀವ್ರ ಪೈಪೋಟಿ ಸೃಷ್ಟಿಯಾಗಿತ್ತು. ಉಪಮುಖ್ಯಮಂತ್ರಿ, ಆಯಾ ಸಚಿವರ ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳಲ್ಲಿ 13 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಗೋಕಾಕ, ಅಥಣಿ, ಸವದತ್ತಿ, ಕಿತ್ತೂರು, ಕಾಗವಾಡ, ಹುಕ್ಕೇರಿ, ಕುಡಚಿ ಹಾಗೂ ಅರಬಾವಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts