More

    ಜಿಗಿತ ಹಾದಿಯಲ್ಲಿ ಕರೊನಾ ಕೇಸ್

    ಮಂಗಳೂರು: ಕರೊನಾ ಸೋಂಕಿಗೆ ಹೊಸತಾಗಿ ಒಳಗಾಗುವವರ ದೈನಂದಿನ ಸಂಖ್ಯೆ ಏರುಗತಿಯಲ್ಲಿ ಸಾಗಿದೆ. ಶುಕ್ರವಾರ ಒಂದೇ ದಿನ ಹೊಸದಾಗಿ 311 ಜನರಿಗೆ ಕೋವಿಡ್-19 ಖಚಿತವಾಗಿದ್ದು, ಇದು ಜಿಲ್ಲೆಯಲ್ಲಿ ಇದುವರೆಗೆ ಒಂದು ದಿನದಲ್ಲಿ ಪತ್ತೆಯಾಗಿರುವ ಅತ್ಯಧಿಕ ಪ್ರಕರಣ. ಇದುವರೆಗಿನ ಗರಿಷ್ಠ ಎಂಟು ಮಂದಿ ಕರೊನಾ ಸೋಂಕಿತರು ಮೃತಪಟ್ಟಿದ್ದು, ಒಟ್ಟು ಸಂಖ್ಯೆ 71ಕ್ಕೆ ಏರಿಕೆಯಾಗಿದೆ.
    ಪೊಲೀಸ್ ಇಲಾಖೆ ಸಹಿತ ಕೆಲವು ಇಲಾಖೆ ಸಿಬ್ಬಂದಿ, ಸೀಲ್‌ಡೌನ್ ಆಗಿರುವ ಕಚೇರಿಯ ಸಿಬ್ಬಂದಿ, ಸಾಮೂಹಿಕವಾಗಿ ಪಾಸಿಟಿವ್ ದೃಢಪಟ್ಟ ವ್ಯಕ್ತಿಗಳ ನಿಕಟವರ್ತಿಗಳು, ಸ್ವಯಂ ತಪಾಸಣೆಗೆ ಒಳಪಡುವವರ ಸಂಖ್ಯೆ ಅಧಿಕಗೊಂಡ ಹಿನ್ನೆಲೆಯಲ್ಲಿ ಪ್ರಕರಣಗಳು ಹೆಚ್ಚುತ್ತಿರುವುದಾಗಿ ಜಿಲ್ಲಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
    ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಾವು ಗಮನಾರ್ಹ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಬಗ್ಗೆ ಬೆಂಗಳೂರಿನಿಂದ ಆಗಮಿಸಿದ ಮೂವರು ಸದಸ್ಯರ ತಜ್ಞರ ತಂಡ ಜಿಲ್ಲೆಯ ಪರಿಣಿತರ ತಂಡದ ಜತೆ ಸಮಾಲೋಚನೆ ನಡೆಸಿದ್ದು, ಅಧ್ಯಯನ ಮುಂದುವರಿದಿದೆ. ರಾಜ್ಯದ ತಂಡ ಶೀಘ್ರದಲ್ಲೇ ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಿದೆ.

    115 ಮಂದಿ ಬಿಡುಗಡೆ: ಕರೊನಾ ಪಾಸಿಟಿವ್ ಆಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ 115 ಮಂದಿ ಗುಣಮುಖರಾಗಿ ಶುಕ್ರವಾರ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿವರೆಗಿನ ಸೋಂಕಿತರ ಸಂಖ್ಯೆ 3,074. ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 1,278.

    ವಿಡಿಯೋ ಕರೆ ಮೂಲಕ ಸಂಪರ್ಕ:  ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಲ್ಲಿ ಶೇ.50 ಲಕ್ಷಣರಹಿತರಿದ್ದು, ಸರ್ಕಾರದ ಆದೇಶದಂತೆ ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ಅವಕಾಶವಿದೆ. ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಮಂಗಳೂರು ಮಹಾನಗರ ಪಾಲಿಕೆಯ ಕಮಾಂಡ್ ಕಂಟ್ರೋಲ್ ಸೆಂಟರ್ ಮತ್ತು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ದೂರವಾಣಿ ಹಾಗೂ ವಿಡಿಯೋ ಕಾಲ್ ಮೂಲಕ ಸಂಪರ್ಕಿಸಲಾಗುತ್ತಿದೆ. ಸ್ಥಳೀಯ ವೈದ್ಯರ ನೆರವಿನಿಂದ ಆಪ್ತಸಮಾಲೋಚನೆ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.
    ಕೋವಿಡ್ ಸೋಂಕಿತ ವ್ಯಕ್ತಿಗಳಿಗೆ ಆ್ಯಂಬುಲೆನ್ಸ್ ಸಂಬಂಧಿತ ಮಾಹಿತಿಗಾಗಿ 108/ 1077 ಮತ್ತು ದೂರವಾಣಿ ಸಂಖ್ಯೆ 0824- 2441444 ಸಂಪರ್ಕಿಸುವಂತೆ ಸೂಚಿಸಲಾಗಿದೆ. ಕೋವಿಡ್ ಕುಂದುಕೊರತೆಗಳನ್ನು ಬಗೆಹರಿಸಿಕೊಳ್ಳಲು ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ಸಾರ್ವಜನಿಕ ಕುಂದುಕೊರತೆ ಪರಿಹಾರ ಘಟಕ ಸ್ಥಾಪಿಸಲಾಗಿದೆ.

    ಸಾಮುದಾಯಿಕ ಪ್ರಸಾರ ಶುರು?
    ಮಂಗಳೂರು ತಾಲೂಕಿನ ಉಳ್ಳಾಲ ವಲಯ, ಬಂದರ್, ಸುರತ್ಕಲ್, ಜೆಪ್ಪು ಸಹಿತ ಹಲವು ಕಡೆ ಕರೊನಾ ಸೋಂಕು ಸಾಮುದಾಯಿಕವಾಗಿ ಹರಡಿರುವ ಬಗ್ಗೆ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

    ಮಿಥುನ್ ರೈಗೆ ಕರೊನಾ ಸೋಂಕು
    ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಮಿಥುನ್ ರೈ ಅವರಿಗೆ ಕರೊನಾ ಸೋಂಕು ತಗುಲಿದೆ. ನಾನು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು, ಸೋಂಕು ದೃಢಪಟ್ಟಿದೆ. ಸದ್ಯ ಬೆಂಗಳೂರಿನಲ್ಲಿ ಕ್ವಾರಂಟೈನ್‌ನಲ್ಲಿ ಇದ್ದು , ಕಳೆದ ಕೆಲ ದಿನಗಳಲ್ಲಿ ನನ್ನ ಜತೆ ನಿಕಟ ಸಂಪರ್ಕದಲ್ಲಿ ಇದ್ದವರು ಸ್ವಯಂಪ್ರೇರಿತವಾಗಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವಂತೆಯೂ ವಿನಂತಿಸಿದ್ದಾರೆ.

    ಕರೊನಾ ಸೋಂಕಿತರ ನಿಗಾಕ್ಕೆ ಸಹಾಯವಾಣಿ
    ಮಂಗಳೂರು: ಮನೆಯಲ್ಲಿಯೇ ನಿಗಾವಣೆಯಲ್ಲಿರುವ ಕರೊನಾ ಸೋಂಕಿತರ ಸಹಾಯ, ಮೇಲ್ವಿಚಾರಣೆಗಾಗಿ ದ.ಕ ಜಿಲ್ಲೆಯ ಎಲ್ಲ ಪಟ್ಟಣ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಹಾಯವಾಣಿ ತೆರೆಯಲಾಗಿದೆ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಮಾರ್ಗದರ್ಶನದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಮೇಲುಸ್ತುವಾರಿಯಲ್ಲಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ರೋಗಿಗಳಿಗೆ ವೈದ್ಯರು ಸಲಹೆ ಮತ್ತು ಮಾರ್ಗದರ್ಶನ ನೀಡಿ, ಅವರಿಂದ ನಿರಂತರ ಮಾಹಿತಿ ಪಡೆಯಲಿದ್ದಾರೆ. ತಾಲೂಕು ವ್ಯಾಪ್ತಿಯಲ್ಲೂ ಸಹಾಯವಾಣಿ ನೆರವು ನೀಡಲು ಚಿಂತಿಸಲಾಗಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್ ತಿಳಿಸಿದ್ದಾರೆ.

    ಕಾಸರಗೋಡಿನ 32 ಮಂದಿಗೆ ಸೋಂಕು
    ಕಾಸರಗೋಡು: ಜಿಲ್ಲೆಯ 32 ಮಂದಿ ಸಹಿತ ಕೇರಳದಲ್ಲಿ ಶುಕ್ರವಾರ 791 ಮಂದಿಗೆ ಕೋವಿಡ್-19 ಬಾಧಿಸಿದೆ. ಇವರಲ್ಲಿ 135 ಮಂದಿ ವಿದೇಶದಿಂದ, 98 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು. ಸೋಂಕು ಬಾಧಿತರಾಗಿ ಚಿಕಿತ್ಸೆಯಲ್ಲಿದ್ದವರಲ್ಲಿ 133 ಮಂದಿ ಶುಕ್ರವಾರ ಗುಣಮುಖರಾಗಿದ್ದಾರೆ. ಇವರಲ್ಲಿ ಒಂಬತ್ತು ಮಂದಿ ಕಾಸರಗೋಡಿನವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts