More

    ಮೂಲಗಳ ಪ್ರಕಾರ ನಟಿ ದೀಪಿಕಾ ಪಡುಕೋಣೆ ಜೆಎನ್​ಯು ಭೇಟಿ ಹಿಂದಿನ ಉದ್ದೇಶವೇ ಬೇರೆಯಂತೆ?

    ನವದೆಹಲಿ: ಕಳೆದ ಭಾನುವಾರ ರಾತ್ರಿ ಜೆಎನ್​ಯು ಕಾಲೇಜು ಆವರಣಕ್ಕೆ ನುಗ್ಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಹಲ್ಲೆ ನಡೆಸಿದ ಮುಸುಕುಧಾರಿಗಳ ಕ್ರಮ ಖಂಡಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಮಂಗಳವಾರ ಸಂಜೆ ನಟಿ ದೀಪಿಕಾ ಪಡುಕೋಣೆ ಭಾಗಿಯಾಗಿ ಒಗ್ಗಟ್ಟು ಪ್ರದರ್ಶಿಸಿದರು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ದೀಪಿಕಾ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು, ರಾಷ್ಟ್ರ ರಾಜಧಾನಿಯಲ್ಲಿ ತಮ್ಮ ಮುಂದಿನ ಚಪಾಕ್​ ಸಿನಿಮಾದ ಪ್ರಚಾರಕ್ಕಾಗಿ ವಿದ್ಯಾರ್ಥಿಗಳೊಂದಿಗೆ ನಿಂತಿದ್ದಾರೆ ಎಂಬ ಆಕ್ರೋಶ ಕೇಳಿಬರುತ್ತಿದೆ.

    ಮೂಲಗಳ ಪ್ರಕಾರ ತಮ್ಮ ಬಹುನಿರೀಕ್ಷಿತ ಚಪಾಕ್​ ಚಿತ್ರ ಬಿಡುಗಡೆಗೆ ಸನ್ನಿಹಿತವಾಗಿರುವುದರಿಂದ ದೀಪಿಕಾ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ಕೂಡ ಸಿನಿಮಾ ಪ್ರಚಾರದ ಒಂದು ಭಾಗವಾಗಿದೆ ಎಂದು ಹೇಳಲಾಗಿದೆ. ಚಪಾಕ್​ ಚಿತ್ರ ಬಿಡುಗಡೆಯಾಗಲು ಇನ್ನು ಮೂರು ದಿನಗಳಷ್ಟೇ ಬಾಕಿ ಇದೆ. ಇದರ ನಡುವೆ ಪ್ರತಿಭಟನೆಯಲ್ಲಿ ಡಿಪ್ಪಿ ಕಾಣಿಸಿಕೊಂಡಿದ್ದು ಸಾಕಷ್ಟು ಚರ್ಚೆ ಆಹ್ವಾನ ಮಾಡಿಕೊಟ್ಟಂತಿದೆ.

    ಇತ್ತೀಚೆಗಷ್ಟೇ ಮಾಧ್ಯಮ ಸಂದರ್ಶನವೊಂದರಲ್ಲಿ ದೀಪಿಕಾ ಪ್ರಸ್ತುತ ರಾಷ್ಟ್ರ ರಾಜಕಾರಣದ ಬಗ್ಗೆ ಮಾತನಾಡಿದ್ದರು. ಅಗತ್ಯ ಸಮಯದಲ್ಲಿ ದೇಶದ ಜನತೆ ಒಟ್ಟಿಗೆ ಬಂದು ಒಗ್ಗಾಟ್ಟಾಗಿ ನಿಲ್ಲುತ್ತಿದ್ದಾರೆ. ಜನರು ತಮಗನಿಸಿದ್ದನ್ನು ಹೇಳಿಕೊಳ್ಳಲು ಭಯಪಡುತ್ತಿಲ್ಲ. ಇದೊಂದು ಹೆಮ್ಮೆಯ ಸಂಗತಿ ಎಂದಿದ್ದರು. ಬೀದಿಯಲ್ಲಾಗಲಿ ಅಥವಾ ಮನೆಯಲ್ಲಾಗಲಿ ಜನರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೊರಹಾಕುತ್ತಿದ್ದಾರೆ. ನಮ್ಮ ಸಮಾಜದಲ್ಲಿ ಬದಲಾವಣೆ ನೋಡಬೇಕಾದರೆ, ಜನರ ಅಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ್ದರು.

    ಮಂಗಳವಾರ ರಾತ್ರಿ 7.30ಕ್ಕೆ ವಿವಿ ಆವರಣಕ್ಕೆ ಬಂದ ದೀಪಿಕಾ, ವಿದ್ಯಾರ್ಥಿಗಳ ಪ್ರತಿಭಟನಾ ಸಭೆಯಲ್ಲಿ 15 ನಿಮಿಷಗಳ ಕಾಲ ಭಾಗವಹಿಸಿದ್ದರು. ಅಲ್ಲದೆ, ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಷೆ ಘೋಷ್​ ಮತ್ತು ಹಳೆಯ ಮುಖಂಡ ಕನ್ಹಯ್ಯ ಕುಮಾರ್​ ಅವರ ಜತೆಯು ನಿಂತಿದ್ದರು. ಬಳಿಕ ಕೆಲ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಅಲ್ಲಿಂದ ತೆರಳಿದರು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ #shameonbollywood ಮತ್ತು #boycottchhapaak ಹ್ಯಾಶ್​ಟ್ಯಾಗ್​ ಮೂಲಕ ದೀಪಿಕಾ ನಡೆಯನ್ನು ವಿರೋಧಿಸುತ್ತಿದ್ದಾರೆ.

    ಅಂದಹಾಗೆ ಚಪಾಕ್​ ಚಿತ್ರವು ಸತ್ಯ ಘಟನೆ ಆಧಾರಿತ ಸಿನಿಮಾ. ತನ್ನ 15ನೇ ವರ್ಷದಲ್ಲಿ ಆ್ಯಸಿಡ್​ ದಾಳಿಗೆ ಒಳಗಾದ ಲಕ್ಷ್ಮೀ ಅಗರ್​ವಾಲ್​ ಎಂಬುವವರ ಜೀವನಾಧರಿತ ಕತೆ ಇದಾಗಿದೆ. ಮೇಘನಾ ಗುಲ್ಜಾರ್​ ಚಿತ್ರವನ್ನು ನಿರ್ದೇಶಿಸಿದ್ದು ಜನವರಿ 10ರಂದು ತೆರೆಗೆ ಅಪ್ಪಳಿಸಲಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts