More

    ೩.೭೫ ಲಕ್ಷ ರೂ. ಸೈಬರ್ ವಂಚನೆ

    ಮಡಿಕೇರಿ:

    ಸೈಬರ್ ವಂಚಕರ ಜಾಲಕ್ಕೆ ಬಿದ್ದು ಕುಶಾಲನಗರ ತಾಲೂಕು ಚೇರಳ ಶ್ರೀಮಂಗಲ ಗ್ರಾಮದ ಮಹಿಳೆಯೊಬ್ಬರು ೩.೭೫ ಲಕ್ಷ ರೂ. ಕಳೆದುಕೊಂಡಿರುವ ಬಗ್ಗೆ ಕೊಡಗು ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಂಚನೆಗೆ ಒಳಗಾದ ಮಹಿಳೆಯ ಮೊಬೈಲ್‌ಗೆ ಮೇ ೨೦ರಂದು ಕೆನರಾ ಬ್ಯಾಂಕ್ ಹೆಸರಿನಲ್ಲಿ ಎಸ್‌ಎಂಎಸ್ ಬಂದಿದ್ದು, ’ಕೆವೈಸಿ ಅಪ್‌ಡೇಟ್ ಆಗದ ಕಾರಣ ನಿಮ್ಮ ಅಕೌಂಟ್ ಬ್ಲಾಕ್ ಆಗಿದೆ. ಕಸ್ಟಮರ್ ಕೇರ್‌ಗೆ ಕರೆ ಮಾಡಿ ಸ್ಪಷ್ಟೀಕರಣ ಪಡೆಯಿರಿ,’ ಎಂದು ಸೂಚಿಸಲಾಗಿದೆ. ನಂತರ ಮೆಸೆಜ್ ಬಂದಿದ್ದ ನಂಬರ್‌ನಿಂದಲೇ ಕರೆ ಮಾಡಿದ ವ್ಯಕ್ತಿ ಒಟಿಪಿ ಬರುವಂತೆ ಮಾಡಿ ಆ ಒಟಿಪಿಯನ್ನು ಮಹಿಳೆಯಿಂದ ಕೇಳಿ ಪಡೆದಿದ್ದಾನೆ.

    ನಂತರ ಹಂತ ಹಂತವಾಗಿ ೩.೭೫ ಲಕ್ಷ ರೂ. ಹಣ ಆ ಮಹಿಳೆಯ ಖಾತೆಯಿಂದ ದೋಚಿದ್ದಾನೆ. ವಂಚನೆಗೆ ಒಳಗಾದ ಮಹಿಳೆಯಿಂದ ಈ ಬಗ್ಗೆ ದೂರಿ ಪಡೆದುಕೊಂಡಿರುವ ಕೊಡಗು ಸೈಬರ್ ಅಪರಾಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
    ಬ್ಯಾಂಕ್ ಅಥವಾ ಇತರೆ ಹಣಕಾಸು ಸಂಸ್ಥೆಗಳ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಮೋಸದಿಂದ ಆನ್ ಲೈನ್ ಮೂಲಕ ಹಣ ವರ್ಗಾವಣೆ ಮಾಡಿಕೊಂಡು ಸಾರ್ವಜನಿಕರಿಗೆ ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದೆ. ಯಾವುದೇ ಅಧಿಕೃತ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಸಾರ್ವಜನಿಕರೊಂದಿಗೆ ಫೋನ್ ಮೂಲಕ ವ್ಯವಹರಿಸುವುದಿಲ್ಲ. ಸಾರ್ವಜನಿಕರು ತಮ್ಮ ಬ್ಯಾಂಕ್ ಖಾತೆ, ಆನ್ ಲೈನ್ ಹಣ ವರ್ಗಾವಣೆ, ಎ.ಟಿ.ಎಂ, ಮ್ಯೂಚುವಲ್ ಫಂಡ್, ಉಳಿತಾಯ ಪತ್ರಗಳು ಹಾಗೂ ಇತರ ಯಾವುದೇ ರೀತಿಯ ಹಣಕಾಸು ವಹಿವಾಟಿನ ಪ್ರಕ್ರಿಯೆಗಳಲ್ಲಿ ತೊಡಕುಂಟಾದಾಗ ನೇರವಾಗಿ ಸಂಬಂದಪಟ್ಟ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಗೆ ತೆರಳಿ ಪರಿಹರಿಸಿಕೊಳ್ಳುವಂತೆ ಪೊಲೀಸರು ಸಲಹೆ ನೀಡಿದ್ದಾರೆ.

    ಹಣಕಾಸು ಸಂಸ್ಥೆಗಳ ಅಥವಾ ಯು.ಪಿ.ಐ ಆಧಾರಿತ ಆನ್ ಲೈನ್ ಸೇವಾ ಸಂಸ್ಥೆಗಳ ಹೆಸರಿನಲ್ಲಿ ಕರೆಮಾಡುವ ವ್ಯಕ್ತಿಗಳು ಬ್ಯಾಂಕ್ ಅಕೌಂಟ್ ನಂಬರ್, ಎ.ಟಿ.ಎಂ ನಂಬರ್, ಸಿವಿವಿ ನಂಬರ್, ಒ.ಟಿ.ಪಿ, ಎಟಿಎಂ ಪಿನ್ ನಂಬರ್, ಗೂಗಲ್‌ಪೇ, ಫೋನ್‌ಪೇ, ಇತರೆ ಯು.ಪಿ.ಐ ಆಧಾರಿತ ಆನ್ಲೈನ್ ಹಣಕಾಸು ವರ್ಗಾವಣೆ ಅಪ್ಲಿಕೇಶನ್‌ಗಳ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಲು ಹೇಳಿ ಹಾಗೂ ಕೋಡ್‌ಗಳನ್ನು ಕೇಳಿ ಪಡೆದು ವಂಚನೆ ಮಾಡುತ್ತಿದ್ದು ಇಂತಹ ಗೌಪ್ಯ ಸಂಖ್ಯೆಗಳನ್ನು ಯಾರಿಗೂ ನೀಡದಂತೆ ಪೊಲೀಸರು ಸೂಚಿಸಿದ್ದಾರೆ. ಸಾರ್ವಜನಿಕರು ಆನ್ ಲೈನ್ ಹಣಕಾಸು ವ್ಯವಹಾರಕ್ಕಾಗಿ ತಮ್ಮ ಬ್ಯಾಂಕ್‌ನ ಅಧಿಕೃತ ಅಪ್ಲಿಕೇಶನ್ಗಳನ್ನು ಮಾತ್ರ ಬಳಸುವಂತೆಯೂ ಸಲಹೆ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts