More

    3.34 ಲಕ್ಷ ಚೀಲ ಮೆಣಸಿನಕಾಯಿ ಆವಕ

    ಬ್ಯಾಡಗಿ: ಇಲ್ಲಿನ ಮೆಣಸಿನಕಾಯಿ ಮಾರುಕಟ್ಟೆಗೆ ಗುರುವಾರ 3,34,272 ಚೀಲಗಳು ಆವಕವಾಗುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಾಣವಾಯಿತು. ದೊಡ್ಡ ಪ್ರಮಾಣದಲ್ಲಿ ಮೆಣಸಿನಕಾಯಿ ಟೆಂಡರ್ ಆಗಿದ್ದು, ಸುಮಾರು 1.5 ಕೋಟಿ ರೂಪಾಯಿಗೂ ಅಧಿಕ ಶುಲ್ಕದ ಮೊತ್ತ ಒಂದೇ ದಿನಕ್ಕೆ ಜಮೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಮೆಣಸಿನಕಾಯಿ ಆವಕ ಇಳಿಮುಖವಾಗುವ ಗುಮಾನಿ, ಆತಂಕಕ್ಕೆ ತೆರೆ ಎಳೆದಂತಾಗಿದೆ. ಸತತವಾಗಿ 8 ಬಾರಿ ಲಕ್ಷ ಚೀಲ, 2 ಬಾರಿ 2 ಲಕ್ಷ, ಪ್ರಸಕ್ತ ದಿನ 3 ಲಕ್ಷಕ್ಕೂ ಅಧಿಕ ಚೀಲ ಆವಕವಾಗಿ ಮಾರುಕಟ್ಟೆಯ ಚಿತ್ರಣ ಬದಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ಆವಕ ಈ ಹಿಂದೆ ಆಗಿರಲಿಲ್ಲ ಎಂದು ವರ್ತಕರು ತಿಳಿಸಿದರು.

    ಹಿಂದಿನ ದಾಖಲೆ ಮುರಿದ ಆವಕ: 2019ರಲ್ಲಿ 2.90 ಲಕ್ಷ ಚೀಲಗಳು ಆವಕವಾಗಿ ದಾಖಲೆ ಸೃಷ್ಟಿಯಾಗಿತ್ತು. ಪ್ರಸಕ್ತ ಸಾಲಿನಲ್ಲಿ ಬರಗಾಲವಿದ್ದರೂ ಮೆಣಸಿನಕಾಯಿ ಬೆಳೆಗೆ ತೊಂದರೆಯಾಗಿಲ್ಲ. ಬ್ಯಾಡಗಿ ಮಾರುಕಟ್ಟೆಯ ಅದೃಷ್ಟವೆಂದರೆ ಆವಕ ಏರುಮುಖವಾಗಿದೆ ಹೊರತು ಇಳಿಮುಖವಾಗಿಲ್ಲ. ಮೆಣಸಿನಕಾಯಿ ದರ ಸ್ಥಿರತೆ: ಗುರುವಾರದ ಟೆಂಡರ್‌ನಲ್ಲಿ ಡಬ್ಬಿ ತಳಿ ಕ್ವಿಂಟಾಲ್‌ಗೆ 40 ಸಾವಿರ ರೂ. ಹಾಗೂ ಕಡ್ಡಿ ತಳಿಗೆ 36 ಸಾವಿರ ರೂ., ಗುಂಟೂರು ತಳಿಗೆ 14 ಸಾವಿರ ರೂ. ಸರಾಸರಿ ಬೆಲೆಯಲ್ಲಿ ಮಾರಾಟವಾಯಿತು.

    ಗುಣಮಟ್ಟದ ಕಾಯಿಗಳಿಗೆ ಉತ್ತಮ ದರ ಲಭಿಸಿದೆ. ಮಾರುಕಟ್ಟೆಗೆ ಮೆಣಸಿನಕಾಯಿ ಆವಕ 3 ಲಕ್ಷ ಚೀಲ ದಾಟಿದ ಪರಿಣಾಮ ರೈತರು ದರ ಕುಸಿತವಾಗುವ ಆತಂಕದಲ್ಲಿದ್ದರು. ಆದರೆ, ಮಾರುಕಟ್ಟೆ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿರುವುದು ವಿಶೇಷವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts